ಹಗಲು ದರೋಡೆ ೭.೦೧ ಕೋಟಿ ಜಪ್ತಿ ಉಳಿದ ೧೦ ಲಕ್ಷಕ್ಕೆ ತೀವ್ರಗೊಂಡ ತನಿಖೆ

ಬೆಂಗಳೂರು,ನ.೨೫-ಹಾಡಹಗಲೇ ಎಟಿಎಂ ಕೇಂದ್ರಗಳಿಗೆ ಹಣ ತುಂಬಲು ಹೋಗುತ್ತಿದ್ದ ವಾಹನವನ್ನು ಅಡ್ಡಗಟ್ಟಿ ಆರ್ ಬಿಐ ಅಧಿಕಾರಿಗಳ ಸೋಗಿನಲ್ಲಿ ೭.೧೧ ಕೋಟಿ ದರೋಡೆ ಪ್ರಕರಣದಲ್ಲಿ ಮತ್ತೆ ೪೭ ಲಕ್ಷ ಹಣವನ್ನು ನಗರ ಪೊಲೀಸರು ಜಪ್ತಿ ಮಾಡಿದ್ದಾರೆ.


ಈ ಮೂಲಕ ಪ್ರಕರಣದ ಸಂಬಂಧ ಇಲ್ಲಿವರೆಗೆ ದರೋಡೆಯಾದ ೭.೧೧ ಕೋಟಿ ಹಣದಲ್ಲಿ ೭.೦೧ ಕೋಟಿ ವಶಪಡಿಸಿಕೊಂಡಿದ್ದು,ಉಳಿದ ೧೦ ಲಕ್ಷ ರೂಗಳನ್ನು ಜಪ್ತಿ ಮಾಡಲು ತನಿಖೆಯನ್ನು ತೀವ್ರ ಗೊಳಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.


ಪ್ರಕರಣ ಸಂಬಂಧ ನವೀನ್ ಎಂಬಾತನನ್ನು ಈಗಾಗಲೇ ಪೊಲೀಸರು ಬಂಧಿಸಿದ್ದು, ಹೈದರಾಬಾದ್‌ನ ಲಾಡ್ಜ್ ಒಂದರಲ್ಲಿ ೫೩ ಲಕ್ಷ ರೂ. ಹಣದ ಜೊತೆಗೆ ಮತ್ತೊಬ್ಬ ಆರೋಪಿ ಸಿಕ್ಕಿಬಿದ್ದಿದ್ದನು ಎರಡು ದಿನಗಳ ಕಾಲ ಆತನ ಸತತ ವಿಚಾರಣೆಯಲ್ಲಿ ನವೀನ್ ನೀಡಿದ ಮಾಹಿತಿ ಆಧರಿಸಿ ನಿನ್ನೆ ರಾತ್ರಿ ಕುಪ್ಪಂನ ಮನೆಯೊಂದರಲ್ಲಿದ್ದ ೪೭ ಲಕ್ಷ ಹಣವನ್ನು ವಶಪಡಿಸಿಕೊಳ್ಳಲಾಗಿದೆ.


ಹಣಕಾಸಿನ ಸಮಸ್ಯೆಯಿಂದ ಬಳಲುತ್ತಿದ್ದ ಆರೋಪಿಗಳು, ಸಾಲ ತೀರಿಸುವ ಉದ್ದೇಶದಿಂದ ಹಣ ದರೋಡೆ ಮಾಡಿದ್ದರು. ಉಳಿದ ಹಣದಲ್ಲಿ ಐಷಾರಾಮಿ ಜೀವನ ನಡೆಸುವ ಕನಸು ಅವರದ್ದಾಗಿತ್ತು ಎಂಬುದು ಪೊಲೀಸ್ ತನಿಖೆ ವೇಳೆ ಬಯಲಾಗಿದೆ.


ಮುಖ್ಯ ಆರೋಪಿಗಳಾದ ಗೋಪಿ ಮತ್ತು ಕ್ಸೇವಿಯರ್ ೧೭ ಸಾವಿರ ರೂಪಾಯಿ ಸಂಬಳ ಪಡೆಯುತ್ತಿದ್ದರು. ಆ ಪೈಕಿ ಕ್ಸೇವಿಯರ್ ಒಂದು ವರ್ಷದ ಹಿಂದೆಯೇ ಕೆಲಸ ಬಿಟ್ಟಿದ್ದನು ಕುಡಿತ, ಜೂಜಿನ ಚಟದಿಂದಾಗಿ ಆರೋಪಿಗಳು ಹಣಕಾಸು ಸಮಸ್ಯೆಗೆ ಸಿಲುಕಿದ್ದರು. ಈ ಹಿನ್ನಲೆಯಲ್ಲಿ ಪೊಲೀಸ್ ಕಾನ್ಸ್‌ಟೇಬಲ್ ಅಣ್ಣಪ್ಪ ನಾಯ್ಕ್ ಯೋಜನೆ ಪ್ರಕಾರ ಎಟಿಎಂ ವಾಹನ ದರೋಡೆ ಮಾಡಲಾಗಿದ್ದು, ಹಾಲಿ ಸಿಬ್ಬಂದಿ ಗೋಪಿಯೇ ದರೋಡೆ ಪ್ರಕರಣದ ಮಾಸ್ಟರ್ ಮೈಂಡ್ ಎಂಬುದು ಬಹಿರಂಗವಾಗಿತ್ತು.


ಬಂಧಿತ ಆರು ಮಂದಿ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಮತ್ತೆ ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ನಡೆಸಲಾಗಿದೆ ಎಂದು ಹೇಳಿದರು.