
ಕಲಬುರಗಿ,ನ.21-ಹಗಲು ಮನೆಗಳ್ಳತನ ಮಾಡುತ್ತಿದ್ದ ಆರೋಪಿಯೊಬ್ಬನನ್ನು ಬಂಧಿಸಿರುವ ರಾಘವೇಂದ್ರ ನಗರ ಠಾಣೆ ಪೊಲೀಸರು 5 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಿದ್ದಾರೆ.
ನಗರದ ಎಂಎಸ್‍ಕೆ ಮಿಲ್ ಖದೀರ್ ಚೌಕ್ ನಿವಾಸಿ ಮಹ್ಮದ್ ಸಮೀರ್ ತಂದೆ ಶೇಖ್ ಮುನಿರುದ್ದೀನ್ (22) ಎಂಬಾತನನ್ನು ಬಂಧಿಸಿ 45 ಗ್ರಾಂ.ಬಂಗಾರದ ಮಂಗಳಸೂತ್ರ, 3 ಗ್ರಾಂ.ಬಂಗಾರದ ಉಂಗುರ, ಇನ್ನೊಂದು ಪ್ರಕರಣದಲ್ಲಿ 19 ಗ್ರಾಂ.ಬಂಗಾರ ಸೇರಿ 5 ಲಕ್ಷ ರೂ.ಮೌಲ್ಯದ 50 ಗ್ರಾಂ.ಬಂಗಾರದ ಆಭರಣ ಜಪ್ತಿ ಮಾಡಿ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಹಗಲು ಹೊತ್ತಿನಲ್ಲಿ ಕಳ್ಳರು ಮನೆ ಬೀಗ ಮುರಿದು ಚಿನ್ನಾಭರಣ ದೋಚಿಕೊಂಡು ಹೋಗಿದ್ದಾರೆ ಎಂದು ನಗರದ ಚಿಂಚೋಳಿ ಲೇಔಟ್ ನಿವಾಸಿ ಮಲ್ಲಿಕಾರ್ಜುನ ಎಂ.ಕಲಶೆಟ್ಟಿ ಅವರು 2024ರ ಸೆಪ್ಟೆಂಬರ್ 11 ರಂದು ರಾಘವೇಂದ್ರ ನಗರ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಈ ದೂರಿನ ಅನ್ವಯ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆಗೆ ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ. ಡಿಸಿಪಿಗಳಾದ ಕನಿಕಾ ಸಿಕ್ರಿವಾಲ್, ಪ್ರವೀಣ್ ಹೆಚ್.ನಾಯಕ್, ಎಸಿಪಿ ಶರಣಬಸಪ್ಪ ಸುಬೇದಾರ ಅವರ ಮಾರ್ಗದರ್ಶನದಲ್ಲಿ ರಾಘವೇಂದ್ರ ನಗರ ಪೊಲೀಸ್ ಠಾಣೆ ಪಿಐ ವಾಜೀದ್ ಪಟೇಲ್, ಪಿಎಸ್‍ಐ ಸುಭಾಶ್ಚಂದ್ರ ಅವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಮಲ್ಲಿಕಾರ್ಜುಜ ಜಾನಿ, ಮಲ್ಲನಗೌಡ, ಉಮೇಶ್, ಶರಣಬಸವ, ಪ್ರಶಾಂತ್, ಬಸವರಾಜ, ಅರೇಶ್ ಅವರನ್ನು ಒಳಗೊಂಡ ತಂಡ ರಚಿಸಲಾಗಿತ್ತು. ಈ ತಂಡ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿ ಚಿನ್ನಾಭರಣ ಜಪ್ತಿ ಮಾಡಿ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಲ್ಲಿ ಯಶಸ್ವಿಯಾಗಿದೆ.
ಹಗಲು ಮನೆಗಳ್ಳತನ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಲ್ಲಿ ಯಶಸ್ವಿಯಾಗಿರುವ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯವನ್ನು ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ.ಶ್ಲಾಘಿಸಿದ್ದಾರೆ.
























