
ಯಾದಗಿರಿ:ಮೇ.೫: ದಾವಣಗೇರೆ ದಕ್ಷಿಣ ಹಾಗೂ ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಭರ್ಜರಿ ಗೆಲುವು ರಾಜ್ಯ ಸರ್ಕಾರದ ಜನಪರ ಯೋಜನೆಗಳು ಮತ್ತು ಕಾರ್ಯಕರ್ತರ ಅವಿರತ ಪರಿಶ್ರಮಕ್ಕೆ ಸಂದ ಫಲವಾಗಿದೆ ಎಂದು ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ ಹೇಳಿದ್ದಾರೆ.ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು, ದಾವಣಗೇರೆ ದಕ್ಷಿಣ ಕ್ಷೇತ್ರದಿಂದ ಆಯ್ಕೆಯಾದ ಸಮರ್ಥ ಶಾಮನೂರು ಅವರು ತಮ್ಮ ಅಜ್ಜ ಶಾಮನೂರು ಶಿವಶಂಕರಪ್ಪ ಅವರ ರಾಜಕೀಯ ಪರಂಪರೆಯನ್ನು ಮುಂದುವರಿಸಿ ಅತಿ ಕಿರಿಯ ವಯಸ್ಸಿನ ಶಾಸಕರಾಗಿ ಹೊರಹೊಮ್ಮಿದ್ದಾರೆ ಎಂದು ಹೇಳಿದರು. ಅದೇ ರೀತಿ ಬಾಗಲಕೋಟೆಯಲ್ಲಿ ಉಮೇಶ್ ಮೇಟಿ ಅವರ ಆಯ್ಕೆ, ಅವರ ಕುಟುಂಬದ ರಾಜಕೀಯ ವರ್ಚಸ್ಸು ಹಾಗೂ ಕಾಂಗ್ರೆಸ್ ಪಕ್ಷದ ಬಲಿಷ್ಠ ನೆಲೆ ಮತ್ತಷ್ಟು ದೃಢಪಟ್ಟಿರುವುದನ್ನು ತೋರಿಸುತ್ತದೆ ಎಂದರು.
ಇರಡು ಕ್ಷೇತ್ರಗಳಲ್ಲಿಯೂ ಕುಟುಂಬದ ಸದಸ್ಯರ ಒಗ್ಗಟ್ಟಿನ ಪ್ರಚಾರ ಹಾಗೂ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳಿಂದ ಆಕರ್ಷಿತರಾದ ಮಹಿಳಾ ಮತದಾರರ ಮಹತ್ತರ ಬೆಂಬಲ ದೊರೆತಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಜನಪರ ಆಡಳಿತ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ನಾಯಕತ್ವಕ್ಕೆ ಜನತೆ ಮನ್ನಣೆ ನೀಡಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟರು.
ಆಡಳಿತ ಪಕ್ಷದ ಸಕಾರಾತ್ಮಕ ಕಾರ್ಯಪದ್ಧತಿ, ಸಮರ್ಥ ರಾಜಕೀಯ ತಂತ್ರ ಹಾಗೂ ಗ್ಯಾರಂಟಿ ಯೋಜನೆಗಳು ಈ ಗೆಲುವಿಗೆ ಕಾರಣವಾಗಿದ್ದು, ಮೂರು ವರ್ಷಗಳಾದರೂ ವಿಪಕ್ಷಗಳು ಮಾಡಿದ ಟೀಕೆಗಳಿಗೆ ಜನರು ಸ್ಪಷ್ಟ ಉತ್ತರ ನೀಡಿದ್ದಾರೆ. ಬಿಜೆಪಿ-ಜೆಡಿಎಸ್ ಮೈತ್ರಿಗೆ ಈ ಫಲಿತಾಂಶ ಮುಖಭಂಗ ತಂದಿದೆ ಎಂದರು.
ರಾಜ್ಯದಲ್ಲಿ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು ಜನರ ಸಂಕಷ್ಟಕ್ಕೆ ಸ್ಪಂದಿಸಿರುವುದರಿAದ ಉಪಚುನಾವಣೆಯಲ್ಲಿ ಉತ್ತಮ ಫಲಿತಾಂಶ ದೊರೆತಿದೆ. ಈ ಫಲಿತಾಂಶವು ೨೦೨೮ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿಯಾಗಿದ್ದು, ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.




















