ದತ್ತಾತ್ರೇಯ ಸ್ವಾಮಿ ಜಯಂತಿ, ದೀಪೋತ್ಸವ

ಕೆಂಗೇರಿ.ಡಿ೬:ಯಶವಂತಪುರ ವಿಧಾನಸಭಾ ಕ್ಷೇತ್ರ ಮಾಗಡಿ ಮುಖ್ಯ ರಸ್ತೆಯ ತಾವರೆಕೆರೆ ಶ್ರೀ ದತ್ತಾ ತ್ರೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಶ್ರೀ ದತ್ತಾತ್ರೇಯ ಸ್ವಾಮಿ ಜಯಂತಿ ಮತ್ತು ದೀಪೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.


ಬೆಂಗಳೂರು ನಗರದಲ್ಲಿ ಅತ್ಯಂತ ದೊಡ್ಡ ಶ್ರೀ ದತ್ತಾತ್ರೇಯ ಸ್ವಾಮಿಯ ವಿಗ್ರಹವಿದ್ದು ಪ್ರತಿ ಗುರುವಾರ ವಿಶೇಷ ಪೂಜಾ ಕೈಂಕರ್ಯ ನೆರವೇರಿಸುವ ಪರಿಣಾಮದಿಂದ ನೂರಾರು ಸಂಖ್ಯೆಯಲ್ಲಿ ಭಕ್ತಾದಿಗಳು ದೇವಸ್ಥಾನಕ್ಕೆ ಆಗಮಿಸಿ ಪೂಜೆ ಸಲ್ಲಿಸುವ ಮೂಲಕ ದೇವರ ಕೃಪೆಗೆ ಪಾತ್ರರಾಗುತ್ತಿದ್ದಾರೆ.ಇಲ್ಲಿಗೆ ಭೇಟಿ ನೀಡುವ ಭಕ್ತರಿಗೆ ದುಷ್ಟ ಶಕ್ತಿಗಳ ಕಾಟ ಪರಿಹಾರವಾಗುತ್ತದೆ ಎಂದು ನಂಬಲಾಗಿದೆ ಇಲ್ಲಿಗೆ ಭೇಟಿ ನೀಡುವುದರಿಂದ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ ಎಂದು ನಂಬಲಾಗಿದೆ.ಹಿಂದೂ ಧರ್ಮವು ಅನೇಕ ದೇವರು ಮತ್ತು ದೇವತೆಗಳನ್ನು ಹೊಂದಿರುವಂತಹ ಧರ್ಮವಾಗಿದೆ. ಹಿಂದು ಧರ್ಮದಲ್ಲಿ ಪೂಜಿಸಲಾಗುವ ಅನೇಕ ದೇವರು, ದೇವತೆಗಳಲ್ಲಿ ದತ್ತಾತ್ರೇಯ ಕೂಡ ಒಬ್ಬರು. ದತ್ತಾತ್ರೇಯರಿಗೆ ಸಂಬಂಧಿಸಿದ ಅನೇಕ ಕಥೆಗಳನ್ನು ನಾವು ನಮ್ಮ ಧಾರ್ಮಿಕ ಗ್ರಂಥಗಳಲ್ಲಿ ನೋಡಬಹುದಾಗಿದೆ.

ಕೆಲವರು ದತ್ತಾತ್ರೇಯರನ್ನು ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರ ಸಂಯೋಜಿತ ರೂಪವೆಂದು ನಂಬುತ್ತಾರೆ. ಇನ್ನು ಕೆಲವರು ದತ್ತಾತ್ರೇಯರು ಕೇವಲ ವಿಷ್ಣುವಿನ ಅವತಾರವೆಂದು ನಂಬುತ್ತಾರೆ. ದತ್ತಾತ್ರೇಯರನ್ನು ಹೆಚ್ಚಾಗಿ ಋಷಿಗಳು ಮತ್ತು ಸಂತರು ಆರಾಧಿಸುತ್ತಾರೆ ಕಳೆದ ೧೭ ವರ್ಷಗಳಿಂದ ನಿರಂತರವಾಗಿ ಶ್ರೀ ದತ್ತಾತ್ರೇಯ ಸ್ವಾಮಿ ಜಯಂತಿಯನ್ನು ಅತ್ಯಂತ ಸಡಗರ ಸಂಭ್ರಮ, ಭಕ್ತಿ ಭಾವದಿಂದ ಆಚರಿಸಿಕೊಂಡು ಬರಲಾಗುತ್ತಿದ್ದು, ಶ್ರೀ ಕ್ರೋಧಿನಾಮ ಸಂವತ್ಸರದ ದಕ್ಷಿಣಾಯನ ಹೇಮಂತ ಋತು ಮಾರ್ಗಶಿರ ಮಾಸ ಶುಕ್ಲ ಪಕ್ಷ ಶುದ್ಧ ಮೃಗಶಿರ ನಕ್ಷತ್ರ ಪೌರ್ಣಮಿ ಯಂದು ಶ್ರೀ ದತ್ತಾತ್ರೇಯ ಸ್ವಾಮಿ ಜಯಂತಿಯನ್ನು ಭಕ್ತರ ಸಮ್ಮುಖದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಜಯಂತಿ ಅಂಗವಾಗಿ ಗಣಪತಿ ಮತ್ತು ಶ್ರೀ ದತ್ತಾತ್ರೇಯ ಸ್ವಾಮಿ ಅವರಿಗೆ ಮಹಾಭಿಷೇಕ ಅಲಂಕಾರ ಮತ್ತು ಹೋಮ ಮಹಾಮಂಗಳಾರತಿ ನಂತರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಭಕ್ತಾದಿಗಳಿಗೆ ತೀರ್ಥ ಪ್ರಸಾದ ವಿನಿ ಯೋಗಿಸಲಾಯಿತು. ಸಂಜೆ ದೀಪೋತ್ಸವ ಕಾರ್ಯಕ್ರಮ ಏರ್ಪಡಿಸಲಾಗಿತ್ತು.


ದೇವಸ್ಥಾನ ಟ್ರಸ್ಟ್ ಸಮಿತಿ ಸದಸ್ಯರಾದ ಲಿಂಗಣ್ಣ, ನಾಗೇಶ್, ಆಕರ್ಷಣೆ ಮೂರ್ತಿ, ಗಿರಿಜಮ್ಮ, ಗಂಗರಾಜು, ಶ್ರೀನಿವಾಸ್, ಸಂತೋಷ್ ಕುಮಾರ್, ಅರ್ಚಕರಾದ ರಾಮಮೂರ್ತಿ, ಅಮರ್,ಜೆಡಿಎಸ್ ಮಂಜು ಬಡಾವಣೆಯ ಭಕ್ತಾದಿಗಳು ಮತ್ತಿತರರು ಉಪಸ್ಥಿತರಿದ್ದರು