ವಿಜಯಪುರ, ಅ 23: ದಸರಾ ಹಬ್ಬವು ನಮ್ಮೆಲ್ಲರ ಸಂಸ್ಕೃತಿಯ ಮೂಲವಾಗಿದ್ದು, ಧರ್ಮದ ಜಯದ ಸಂಕೇತವಾಗಿ ವಿಜಯದಶಮಿಯನ್ನು ಆಚರಿಸಲಾಗುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಹೇಳಿದರು.
ನಗರದ ದುರ್ಗಾದಲ್ಲಿರುವ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಆವರಣದಲ್ಲಿ ಮಂಗಳವಾರ ಸಂಜೆ ನಡೆದ ನವರಾತ್ರಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕುಟುಂಬದಲ್ಲಿರುವ ಮಹಿಳೆಯರನ್ನು ದೇವತೆಗಳ ಸ್ವರೂಪವೆಂದು ಭಾವಿಸಿ ಗೌರವಿಸಬೇಕು. ಗುಡಾಪುರದ ದಾನಮ್ಮದೇವಿ, ಸವದತ್ತಿಯ ಯಲ್ಲಮ್ಮದೇವಿ, ಮಂಗಳೂರಿನ ಮಂಗಳಾದೇವಿ ಹಾಗೂ ಮೈಸೂರಿನ ಚಾಮುಂಡೇಶ್ವರಿಯರು ಶಕ್ತಿದೇವತೆಗಳಾಗಿದ್ದು, ಅವರ ಪೂಜೆ, ಆರಾಧನೆ ಹಾಗೂ ಭಕ್ತಿಯಿಂದ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಅರ್ಚನಾ ಪಾಠಕ, ನವರಾತ್ರಿ ಹಿಂದೂ ಧರ್ಮದ ಅತ್ಯಂತ ಪವಿತ್ರ ಹಬ್ಬಗಳಲ್ಲಿ ಒಂದಾಗಿದೆ. ಒಂಬತ್ತು ರಾತ್ರಿಗಳ ಕಾಲ ಜಗನ್ಮಾತೆ ದುರ್ಗಾದೇವಿಯ ಒಂಬತ್ತು ರೂಪಗಳನ್ನು ಶ್ರದ್ಧಾಭಕ್ತಿಯಿಂದ ಆರಾಧಿಸಲಾಗುತ್ತದೆ ಎಂದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಗಂಗಾಧರ ಸಂಬಣ್ಣಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬಿ.ಕೆ. ಸರೋಜಾ ಅಕ್ಕನವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಗೀತಾ ಅಕ್ಕ ಪ್ರಾರ್ಥನೆ ಸಲ್ಲಿಸಿದರು. ಶಶಿಕಲಾ ಬಡಿಗೇರ ಗೀತಗಾಯನ ನಡೆಸಿಕೊಟ್ಟರು. ಬಿ.ಕೆ. ಗಂಗಾಧರ ಉಪಸ್ಥಿತರಿದ್ದರು.




















