Home ಜಿಲ್ಲೆ ಕಲಾ ಸಂಭ್ರಮೋತ್ಸವದಲ್ಲಿ ನಾಟ್ಯ ವೈಭವ ಅನಾವರಣ

ಕಲಾ ಸಂಭ್ರಮೋತ್ಸವದಲ್ಲಿ ನಾಟ್ಯ ವೈಭವ ಅನಾವರಣ

ಬೀದರ್: ಫೆ.25:ನಾಟ್ಯಶ್ರೀ ನೃತ್ಯಾಲಯವು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಯೋಗದಲ್ಲಿ ಇಲ್ಲಿಯ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ರಾಜ್ಯಮಟ್ಟದ ಕಲಾ ಸಂಭ್ರಮೋತ್ಸವದಲ್ಲಿ ನಾಟ್ಯ ವೈಭವ ಅನಾವರಣಗೊಂಡಿತು.
ನೃತ್ಯಾಲಯದ ಅಧ್ಯಕ್ಷೆ ರಾಣಿ ಸತ್ಯಮೂರ್ತಿ ಅವರ ನಿರ್ದೇಶನದಲ್ಲಿ ಕಲಾವಿದರು ಪ್ರದರ್ಶಿಸಿದ ಭರತ ನಾಟ್ಯ, ಜಾನಪದ ನೃತ್ಯ, ಶಾಸ್ತ್ರೀಯ ಸಂಗೀತ ಹಾಗೂ ನೃತ್ಯ ರೂಪಕಗಳು ಪ್ರೇಕ್ಷಕರನ್ನು ಕಲಾ ಲೋಕಕ್ಕೆ ಕರೆದೊಯ್ದವು.
ನೃತ್ಯಾಲಯದ ಕಲಾವಿದರು ಪ್ರದರ್ಶಿಸಿದ ಗಣೇಶ ಸ್ತುತಿ, ಅಲರಿಪು ಶ್ಲೋಕ, ದೇವರನಾಮ, ಜತಿಸ್ವರ, ಕರ್ನಾಟಕ ಮಾತೆ, ದುರ್ಗಾ ಸ್ತುತಿ, ದೀಪ ನೃತ್ಯ, ವಚನ ನೃತ್ಯ, ತಿಲ್ಲಾನ ನೃತ್ಯ, ದಶಾವತಾರ, ಗೋಕರ್ಣ ಕ್ಷೇತ್ರ ಮಹಾತ್ಮೆ, ಗಣೇಶ ಜನನ ನೃತ್ಯಗಳು ಪುಳಕಿತಗೊಳಿಸಿದವು.
ಪರಿಸರ ಗೀತೆ ರೂಪಕ, ಕೃಷ್ಣನ ಗೀತೆ, ಶಿವ ಸ್ತುತಿ, ಕೊರವಂಜಿ, ಕೋಲಾಟ, ಲಂಬಾಣಿ ನೃತ್ಯ, ಮಾತೆಯರ ನೃತ್ಯಗಳು ಪ್ರದರ್ಶನಗೊಂಡಿತು. ತುಳು ನೃತ್ಯ, ಕೊಡಗು ನೃತ್ಯ, ಡೊಳ್ಳು ಕುಣಿತ, ಕಂಸಾಳೆ, ನಂದಿ ಧ್ವಜ, ಪೂಜಾ ಕುಣಿತ, ಗೊರವನ ನೃತ್ಯ, ಹುಲಿ ವೇಷ, ಜೇನು ಕುರುಬ, ವೀರಗಾಸೆ, ದಮಾಮಿ ನೃತ್ಯ, ಸೋಮನ ಕುಣಿತ, ಕರಗ ಕುಣಿತ, ಯಾಲಕ್ಕಿ ಸುಗ್ಗಿ ಹಾಡು, ಕೋಲಾಟ
ಸೇರಿದಂತೆ 15 ಶೈಲಿಯ ಜಾನಪದ ನೃತ್ಯಗಳು ಮಂತ್ರಮುಗ್ಧಗೊಳಿಸಿದವು.
ಹೈದರಾಬಾದನ ಸ್ವಣಾರ್ಂಜನಿ ನೃತ್ಯಾಲಯದ ವಿದುಷಿ ಸ್ವರ್ಣ ಗೌರಿ ಜೋಶಿ ಆಕರ್ಷಕ ಭರತನಾಟ್ಯ ಪ್ರದರ್ಶನ ನೀಡಿದರು.
ಕಲಾವಿದೆ ಸುಧಾ ಬರಗೂರು ಅವರು ಹಾಸ್ಯ ಸಂಜೆಯಲ್ಲಿ ಒಂದು ಗಂಟೆಗೂ ಅಧಿಕ ಕಾಲ ನಗೆ ಹನಿ, ಹಾಸ್ಯ ಪ್ರಸಂಗಗಳ ಮೂಲಕ ಸಭಿಕರನ್ನು ನಕ್ಕು ನಲಿಸಿದರು.
ಕಲಾವಿದ ಶಂಭುಲಿಂಗ ವಾಲ್ದೊಡ್ಡಿ ಜಾನಪದ ಗೀತೆ, ಖ್ಯಾತ ಗಾಯಕಿ ರೇಖಾ ಅಪ್ಪಾರಾವ್ ಸೌದಿ ದಾಸರ ಪದಗಳನ್ನು ಸುಮಧುರವಾಗಿ ಹಾಡಿದರು. ಶ್ರೀವರ್ಧನ ಕನ್ನಡ ಗೀತೆ ಸಾದರಪಡಿಸಿದರು. ಆಕಾಶವಾಣಿಯ ಕಲಾವಿದೆ ಸರಸ್ವತಿ ಶೀಲವಂತ ಬೋರಾಳಕರ್ ಅವರು ಲಘು ಸಂಗೀತ ಹಾಗೂ ಭಕ್ತಿ ಸಂಗೀತದ ಸವಿ ಉಣಬಡಿಸಿದರು. ಆರು ಚರಣಗಳುಳ್ಳ ವಂದೇ ಮಾತರಂ ಗೀತೆಯನ್ನು ಸುಶ್ರಾವ್ಯವಾಗಿ ಹಾಡಿದರು.
ಗೀತಾ ಭಟ್ ಹಾಗೂ ಸಂಗಡಿಗರು ಭಗವದ್ಗೀತೆ ಪಠಣ ಮಾಡಿದರು. ಭಾನುಪ್ರಿಯ ಅರಳಿ ನಾಡಗೀತೆ ಹಾಗೂ ಸುಗಮ ಸಂಗೀತ ನಡೆಸಿಕೊಟ್ಟರು.
ಸಂಗೀತ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಕಲಾವಿದರಾದ ಮಲ್ಲಿಕಾರ್ಜುನ ನಾಗಮಾರಪಳ್ಳಿ, ತ್ರಿವೇಣಿ ಆರ್. ಕೊಳಾರಕರ್, ರೇಣುಕಾದೇವಿ ಎಂ. ಮಳ್ಳಿ ಸ್ವಾಮಿ ಹಾಗೂ ಪ್ರವೀಣಕುಮಾರ ಅವರನ್ನು ಸನ್ಮಾನಿಸಲಾಯಿತು.
ಅಷ್ಟೂರ ಪಿಕೆಪಿಎಸ್ ಅಧ್ಯಕ್ಷ ಶಿವಕುಮಾರ ಪಾಟೀಲ, ಅಕ್ಕ ಪಡೆ ಪ್ರಭಾರಿ ಸಂಗೀತಾ ಎಂ.ಬಿ, ಪುಸ್ತಕ ಸಂತೆ ರೂವಾರಿ ಗುರುನಾಥ ರಾಜಗೀರಾ, ಜಗಜ್ಯೋತಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಸುವರ್ಣಾ ಪಿ. ಉಡುಪ ಹಾಗೂ ಅಕಾಡೆಮಿ ಬಾಲ ಗೌರವ ಪ್ರಶಸ್ತಿ ಪುರಸ್ಕøತ ಸೃಷ್ಟಿ ಅಡಿಗ ಅವರನ್ನು ಗೌರವಿಸಲಾಯಿತು.
ಮಂಗಳೂರಿನ ಸನಾತನ ನೃತ್ಯಾಲಯದ ಮುಖ್ಯಸ್ಥೆಯೂ ಆದ ಖ್ಯಾತ ಕಲಾವಿದೆ ಶಾರದಾಮಣಿ ಶೇಖರ್ ಅವರಿಗೆ ರೂ. 20 ಸಾವಿರ ನಗದು ಹಾಗೂ ಪ್ರಮಾಣ ಪತ್ರ ಒಳಗೊಂಡ 2026ನೇ ಸಾಲಿನ ನಾಟ್ಯಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಉದ್ಘಾಟನೆ ನೆರವೇರಿಸಿದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಪ್ರತಿಮಾ ಬಹೆನ್‍ಜಿ ಮಾತನಾಡಿ, ರಾಜ್ಯಮಟ್ಟದ ಕಲಾ ಸಂಭ್ರಮೋತ್ಸವವು ಕಲಾ ಸಿರಿವಂತಿಕೆ ಅನಾವರಣಕ್ಕೆ ವೇದಿಕೆ ಒದಗಿಸಿದೆ. ಕಲಾವಿದರ ಪ್ರದರ್ಶನಗಳು ಮನ ತಣಿಸಿವೆ ಎಂದು ಹೇಳಿದರು.
ವಚನಾಮೃತ ಕನ್ನಡ ಸಂಘದ ಅಧ್ಯಕ್ಷ ಸಿದ್ರಾಮಪ್ಪ ಮಾಸಿಮಾಡೆ ಮಾತನಾಡಿದರು. ನಾಟ್ಯಶ್ರೀ ನೃತ್ಯಾಲಯದ ಅಧ್ಯಕ್ಷೆ ರಾಣಿ ಸತ್ಯಮೂರ್ತಿ ಅಧ್ಯಕ್ಷತೆ ವಹಿಸಿದ್ದರು.
ಕಲಾವಿದೆ ಸುಧಾ ಬರಗೂರು, ಮಂಗಳೂರಿನ ಸನಾತನ ನೃತ್ಯಾಲಯದ ನಿರ್ದೇಶಕ ಚಂದ್ರಶೇಖರ ಶೆಟ್ಟಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಸಿಂದೆ, ಗುರುರಾಜ ಸೇವಾ ಸಂಘದ ಅಧ್ಯಕ್ಷ ಸುಧಾಕರರಾವ್ ಪಾಟೀಲ, ಅಕ್ಕ ನಾಗಲಾಂಬಿಕಾ ಮಹಿಳಾ ಘಟಕದ ಅಧ್ಯಕ್ಷೆ ಸುಷ್ಮಾ ಪಾಟೀಲ, ಪ್ರಾಚಾರ್ಯ ಶರಣಪ್ಪ ಬಿರಾದಾರ, ಪ್ರಧಾನ ಅಂಚೆ ಪಾಲಕಿ ಮಂಗಲಾ ಭಾಗವತ್ ಮತ್ತಿತರರು ಇದ್ದರು.
ದೇವಿದಾಸ ಜೋಶಿ, ಬಸವರಾಜ ಮೂಲಗೆ, ರಾಘವೇಂದ್ರ ಅಡಿಗ ನಿರೂಪಿಸಿದರು. ಕೆ. ಸತ್ಯಮೂರ್ತಿ ಸ್ವಾಗತಿಸಿದರು.