ಡಿ೨೧ ಪೋಲಿಯೊ ಲಸಿಕಾ ಅಭಿಯಾನ

ಕೋಲಾರ,ಡಿ,೬-ಇದೇ ಡಿ ೨೧ ರಂದು ಕೋಲಾರ ಜಿಲ್ಲಾದ್ಯಾಂತ ೦-೫ ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಪಲ್ಸ್ ಪೋಲಿಯೊ ಲಸಿಕಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆಂದು ಜಿಲ್ಲಾಧಿಕಾರಿಗಳಾದ ಡಾ.ಎಂ.ಆರ್ ರವಿ ಅವರು ತಿಳಿಸಿದರು.


ಇಂದು ತಮ್ಮ ಕಛೇರಿಯಲ್ಲಿ ೨೦೨೫ನೇ ಸಾಲಿನ ರಾಷ್ಟ್ರೀಯ ಪಲ್ಸ್ ಪೋಲಿಯೊ ಕಾರ್ಯಕ್ರಮದ ಜಿಲ್ಲಾ ಮಟ್ಟದ ಟಾಸ್ಕ್‌ಪೋರ್ಸ್ ಸಮಿತಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಈ ಲಸಿಕಾ ಕಾರ್ಯಕ್ರಮದಲ್ಲಿ ಮಕ್ಕಳ ಭಾಗವಹಿಸುವಿಕೆ ಬಹಳ ಮುಖ್ಯವಾಗಿರುವುದರಿಂದ ಎಲ್ಲಾ ಸಾರ್ವಜನಿಕರು ೦-೫ವರ್ಷದೊಳಗಿನ ತಮ್ಮ ಮಕ್ಕಳಿಗೆ ಡಿಸೆಂಬರ್ ೨೧ ರಂದು ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿನ ಲಸಿಕಾ ಕೇಂದ್ರಗಳಲ್ಲಿ ಲಸಿಕೆ ಹಾಕಿಸುವಂತೆ ಮನವಿ ಮಾಡಿದರು


ಅಲ್ಲದೇ ವಲಸೆ, ಕಟ್ಟಡ ಕಾರ್ಮಿಕರು, ವ್ಯಾಪಾರಿ ಜನರು ಸಹ ಮೊಬೈಲ್ ಬೂತ್ ಕೇಂದ್ರಗಳಲ್ಲಿ ಮಕ್ಕಳಿಗೆ ಲಸಿಕೆ ಹಾಕಿಸಬಹುದಾಗಿದೆ. ಡಿಸೆಂಬರ್ ೨೧ ರಂದು ಬೂತ್‌ಗಳಲ್ಲಿ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಡಿಸೆಂಬರ್ ೨೨ ರಿಂದ ೨೪ರವರೆಗೆ ಮನೆ-ಮನೆಗೆ ತೆರಳಿ ಬಿಟ್ಟು ಹೋದ ಮಕ್ಕಳಿಗೆ ಲಸಿಕೆ ಹಾಕಲಾಗುವುದೆಂದರು.


ಮಹಿಳಾ ಮತ್ತು ಮಕ್ಕಳ, ನಗರಾಭಿವೃದ್ಧಿ, ಕಾರ್ಮಿಕ, ಶಿಕ್ಷಣ,ವೈದ್ಯಕೀಯ ಶಿಕ್ಷಣ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಸಾರಿಗೆ ಹೀಗೆ ಎಲ್ಲಾ ಇಲಾಖೆಗಳು ಸಮನ್ವಯ ಸಾಧಿಸಿ ಪೋಲಿಯೊ
ಲಸಿಕಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಕರೆ ನೀಡಿದರು.


ಲಸಿಕಾ ಕಾರ್ಯಕ್ರಮ ಬಗ್ಗೆ ಮಾಹಿತಿ ನೀಡಿದ ಆರೋಗ್ಯ ಇಲಾಖಾಧಿಕಾರಿಗಳು ಜಿಲ್ಲೆಯಲ್ಲಿ ಕಳೆದ ವರ್ಷ ಲಸಿಕಾ ಅಭಿಯಾನದಲ್ಲಿ ೧೦೧.೯ ಸಾಧನೆ ಮಾಡಲಾಗಿದೆ. ೨೦೨೫ನೇ ಸಾಲಿನಲ್ಲಿ ೦-೫ವರ್ಷದೊಳಗಿನ
೧,೬೪,೯೯೧ ಮಕ್ಕಳಿದ್ದು, ಇವರಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ.ಇದಕ್ಕಾಗಿಯೆ ಜಿಲ್ಲೆಯಲ್ಲಿ ೭೪೯ ಬೂತ್‌ಗಳು, ೩೭ ಟ್ರಾನ್ಸಿಟ್ ಕೇಂದ್ರಗಳಿದ್ದು, ೩೦೬೪ ಲಸಿಕೆದಾರರನ್ನು ಹಾಗೂ ೧೬೪ ಮೇಲ್ವಿಚಾರಕರನ್ನು ನೇಮಿಸಲಾಗಿದೆ ಎಂದರು.


ಬಿ.ಎಂ.ಟಿ.ಸಿ, ಕೆ.ಎಸ್.ಆರ್.ಟಿ.ಸಿ, ರೈಲ್ವೆ ಸ್ಟೇಷನ್‌ಗಳಲ್ಲಿ, ಟ್ರಾನ್ಸಿಟ್ ತಂಡಗಳನ್ನು ರಚಿಸಿ ಅಲ್ಲಿಯೂ ಲಸಿಕೆ ನೀಡಲಾಗುವುದೆಂದು ತಿಳಿಸಿದರು.ಜಿಲ್ಲೆಯಲ್ಲಿ ದಡಾರ ಹಾಗೂ ರುಬೆಲ್ಲಾ ನಿಯಂತ್ರಣಕ್ಕಾಗಿ ಸಹ ಲಸಿಕೆ ನೀಡಲಾಗುತ್ತಿದ್ದು, ೨೦೨೫ ಏಪ್ರಿಲ್ ನಿಂದ ಅಕ್ಟೋಬರ್ ವರೆಗೆ ಈ ಜಿಲ್ಲೆಯಲ್ಲಿನ ಲಸಿಕಾ ಅಭಿಯಾನದಲ್ಲಿ ೯೭.೫ ರಷ್ಟು ಸಾಧನೆಯಾಗಿದೆ


ಎಂದು ತಿಳಿಸಿದರು. ದೇಶ ಪೋಲಿಯೊ ಮುಕ್ತವಾಗಿದ್ದರೂ ಸಹ ಮುಂದೆಯೂ ಪ್ರಕರಣಗಳು ಮರುಕಳಿಸದಂತೆ ಮುಂಜಾಗ್ರತಾ ಕ್ರಮವಾಗಿ ಲಸಿಕೆ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರವೀಣ್ ಪಿ.ಬಾಗೇವಾಡಿ, ಅಪರ ಜಿಲ್ಲಾಧಿಕಾರಿ ಮಂಗಳ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಶ್ರೀನಿವಾಸ್ ಹಾಗೂ ಜಿಲ್ಲಾ ಮಟ್ಟದ
ಅಧಿಕಾರಿಗಳು ಉಪಸ್ಥಿತರಿದ್ದರು.