Home ಜಿಲ್ಲೆ ಕಲಬುರಗಿ ಮಕ್ಕಳಿಗೆ ಶಿಕ್ಷಣದೊಂದಿಗೆ ಸಂಸ್ಕಾರ ಬಹಳ ಮುಖ್ಯ: ವಿಶ್ವರಾದ್ಯ ಶಿವಾಚಾರ್ಯರು

ಮಕ್ಕಳಿಗೆ ಶಿಕ್ಷಣದೊಂದಿಗೆ ಸಂಸ್ಕಾರ ಬಹಳ ಮುಖ್ಯ: ವಿಶ್ವರಾದ್ಯ ಶಿವಾಚಾರ್ಯರು

ಅಫಜಲಪುರ: ಮಾ.23:ಮಕ್ಕಳಿಗೆ ಶಿಕ್ಷಣದ ಜೊತೆ ನೈತಿಕ ಮೌಲ್ಯಗಳು ಮತ್ತು ಸಂಸ್ಕಾರ ಬೆಳೆಸುವ ಅಗತ್ಯತೆ ಇದೆ. ಇಲ್ಲವಾದರೆ ಇಂದಿನ ಮಕ್ಕಳು ಸಮಾಜಕ್ಕೆ ಕಂಟಕಪ್ರಾಯವಾಗಲಿದ್ದಾರೆ ಎಂದು ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರು ಕಳವಳ ವ್ಯಕ್ತಪಡಿಸಿದರು.

ತಾಲೂಕಿನ ದೇಸಾಯಿ ಕಲ್ಲೂರ ಗ್ರಾಮದ ಸರಸ್ವತಿ ಹಿರಿಯ ಪ್ರಾಥಮಿಕ ಶಾಲೆಯ 12ನೇ ವಾರ್ಷಿಕೋತ್ಸವದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಇಂದಿನ ಯುವ ಪೀಳಿಗೆಗೆ ಕೇವಲ ಪುಸ್ತಕದ ಜ್ಞಾನ ಸಾಲದು, ಅವರಲ್ಲಿ ನೈತಿಕ ಮೌಲ್ಯಗಳು, ಶಿಸ್ತು ಮತ್ತು ಮಾನವೀಯತೆ ಬೆಳೆಸುವುದು ಅತ್ಯಗತ್ಯವಾಗಿದೆ. ಸಂಸ್ಕಾರವಿಲ್ಲದ ಶಿಕ್ಷಣ ಸಮಾಜಕ್ಕೆ ಅಪಾಯಕಾರಿಯಾಗಿದೆ ಎಂದು ಶ್ರೀಗಳು ತಿಳಿಸಿದರು.

ಎಪಿಜೆ ಅಬ್ದುಲ್ ಕಲಾಂ ಪದವಿ ಪೂರ್ವ ಕಾಲೇಜು ಪ್ರಾಚಾರ್ಯ ಶಿವಾನಂದ ಚಿಂಚೋಳಿ ಮಾತನಾಡಿ, ಶಿಕ್ಷಣ ಸಂಸ್ಥೆ ನಿರ್ಮಿಸಿ ಬೆಳೆಸುವುದು ಒಂದು ದೊಡ್ಡ ಸಾಧನೆ. ಸರಸ್ವತಿ ಹಿರಿಯ ಪ್ರಾಥಮಿಕ ಶಾಲೆ ಕಡಿಮೆ ಅವಧಿಯಲ್ಲಿ ಸ್ವಂತ ಕಟ್ಟಡ ನಿರ್ಮಿಸಿಕೊಂಡು ಗುಣಮಟ್ಟದ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದ ಅವರು ಸಂಸ್ಥೆಯ ಆಡಳಿತ ಮಂಡಳಿ ಮತ್ತು ಶಿಕ್ಷಕರ ಶ್ರಮದಿಂದ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಾಧನೆ ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ಕಸಾಪ ಅಧ್ಯಕ್ಷೆ ಪ್ರಭಾವತಿ ಮೇತ್ರಿ ಮಾತನಾಡಿ, ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವಂತೆ ಮಕ್ಕಳಲ್ಲಿ ಗುಣಮಟ್ಟದ ಶಿಕ್ಷಣದ ಜೊತೆಗೆ ನೈತಿಕ ಮೌಲ್ಯಗಳನ್ನು ಕಲಿಸಿದರೆ ನಾಳೆ ದೇಶಕ್ಕಾಗಿ ದೊಡ್ಡ ಆಸ್ತಿಯಾಗಿ ಹೊರ ಹೊಮ್ಮಲಿದ್ದಾರೆ. ಇಂತಹ ಕೆಲಸವನ್ನು ಸರಸ್ವತಿ ಶಿಕ್ಷಣ ಸಂಸ್ಥೆಯವರು ಮಾಡುತ್ತಿರುವುದು ಶ್ಲಾಘನೀಯವಾಗಿದೆ ಎಂದರು. ಪ್ರಾಚಾರ್ಯ ರಮೇಶ ಗಂಗನಳ್ಳಿ ಮಾತನಾಡಿ, ಗ್ರಾಮೀಣ ಭಾಗದ ಜನರು ಮೌಢ್ಯಗಳಿಂದ ಹೊರಬಂದು ಮಕ್ಕಳ ಭವಿಷ್ಯ ರೂಪಿಸುವ ಕೆಲಸ ಮಾಡಬೇಕು. ಬರುವ ದಿನಗಳು ಇನ್ನಷ್ಟು ಸ್ಪರ್ಧಾತ್ಮಕವಾಗಿರಲಿವೆ ಹೀಗಾಗಿ ಎಲ್ಲಾ ಪಾಲಕರು ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಉದ್ಯಮಿ ಎಸ್.ವೈ ಪಾಟೀಲ್, ಸಿಆರ್‍ಸಿ ಸಿದ್ದಪ್ಪ ಬಿರಾದಾರ, ಪ್ರಮುಖರಾದ ವೇ. ಗುರುಪಾದಯ್ಯ ಚರಂತಿಮಠ, ಮಂಜೂರ ಪಟೇಲ್, ಸಿದ್ದಯ್ಯ ಆಕಾಶಮಠ, ಅಣವೀರಯ್ಯ ಮಠಪತಿ, ಬಸಯ್ಯ ಘೂಳನೂರ, ಭಾಗಣ್ಣ ಮ್ಯಾಕೇರಿ, ಬಸವರಾಜ ಚಿಂಚೋಳಿ, ಲಕ್ಷ್ಮೀಪುತ್ರ ಕಿರನಳ್ಳಿ, ಶ್ರೀದೇವಿ ಪಾಟೀಲ್, ದೇವು ಘಂಟೆ, ಗುರುಪಾದ ತಳವಾರ, ರೇಖಾ ಚಂದ್ರಕಾಂತ ನಾಯ್ಕೋಡಿ, ಶಿವುಕುಮಾರ ಚರಂತಿಮಠ, ದೇವಿಂದ್ರ ಹುಲ್ಲೂರ, ಶಾಮರಾವ್ ಡಕ್ಕಾ, ಸಿದ್ದಪ್ಪ ತಳವಾರ, ಭಾಗಪ್ಪ ತಳವಾರ, ಶ್ರೀಮಂತ ಮ್ಯಾಕೇರಿ, ಪ್ರಭಾವತಿ ವಗ್ದರ್ಗಿ ಹಾಗೂ ಶಿಕ್ಷಕರು ಸಿಬ್ಬಂದಿ ವರ್ಗದವರು ಇದ್ದರು.

ಕಳೆದ 14 ವರ್ಷಗಳಿಂದ ನಮ್ಮ ಮನೆಯಲ್ಲಿ ಟಿವಿ ಹಾಗೂ ಮೊಬೈಲ್ ಬಳಕೆಯನ್ನು ದೂರವಿಟ್ಟು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುತ್ತಿದ್ದೇವೆ. ಅದರ ಪ್ರತಿಫಲವಾಗಿ ನಮ್ಮ ಮಕ್ಕಳು ಸಹ ಶ್ರದ್ಧೆಯಿಂದ ಓದುವ ಮೂಲಕ ಜೀವನದ ಪ್ರಮುಖ ಘಟ್ಟವಾಗಿರುವ ಎಸ್.ಎಸ್. ಎಲ್.ಸಿ ಮತ್ತು ದ್ವಿತೀಯ ಪಿಯುಸಿ ತರಗತಿಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಪ್ರಸ್ತುತ ರಾಜ್ಯದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಹೆಚ್ಚಿನ ವಿದ್ಯಾಭ್ಯಾಸ ಮಾಡುತ್ತಿದ್ದಾರೆ ಎಂದು ಹೇಳಲು ಒಬ್ಬ ತಂದೆಯಾಗಿ ನನಗೆ ಬಹಳ ಹೆಮ್ಮೆಯಾಗುತ್ತದೆ.

-ಮಲ್ಲಿಕಾರ್ಜುನ ಹಿರೇಮಠ
ಅಧ್ಯಕ್ಷರು, ಕಾರ್ಯನಿರತ ಪತ್ರಕರ್ತರ ಸಂಘ, ಅಫಜಲಪುರ.