ಪುಸ್ತಕ ಓದುವ ಹವ್ಯಾಸ ಮೈಗೂಡಲಿ

ಕಲಬುರಗಿ : ಅ.9:ಉತ್ತಮ ಪುಸ್ತಕಗಳನ್ನು ಅಧ್ಯಯನ ಮಾಡುವುದರಿಂದ ವ್ಯಕ್ತಿತ್ವ ವಿಕಸನ ಸಾಧ್ಯವಿದೆ. ಅನೇಕ ಮಹನೀಯರ ಬದುಕು ಕಟ್ಟಿಕೊಡುವಲ್ಲಿ ಶ್ರೇಷ್ಟ ಪುಸ್ತಕಗಳು ಮಹತ್ವ ಪಾತ್ರ ವಹಿಸಿವೆ. ಪುಸ್ತಕ ಓದುವ ಹವ್ಯಾಸವು ನೋವು, ದುಃಖ, ಬೇಸರವನ್ನು ಕಳೆಯುತ್ತವೆ. ಆದ್ದರಿಂದ ವಿದ್ಯಾರ್ಥಿ ದೆಸೆಯಿಂದಲೇ ಉತ್ತಮ ಪುಸ್ತಕಗಳನ್ನು ಓದುವ ಹವ್ಯಾಸವನ್ನು ಮೈಗೂಡಿಸಿಕೊಳ್ಳಬೇಕು ಎಂದು ಗುವಿವಿ ವಿಶ್ರಾಂತ ಪ್ರಾಧ್ಯಾಪಕ ಡಾ.ವಾಸುದೇವ ಸೇಡಂ ಎಚ್.ಹೇಳಿದರು. ಮಹಾಗಾಂವ ಕ್ರಾಸ್ ಸಮೀಪದ ಶ್ರೀ ಮಹಾಂತೇಶ್ವರ ಪ್ರೌಢಶಾಲೆಯಲ್ಲಿ ಕಲಬುರಗಿಯ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಶನಿವಾರ ಏರ್ಪಡಿಸಿದ್ದ “ರಾಷ್ಟ್ರೀಯ ಪುಸ್ತಕ ಪ್ರೇಮಿಗಳ ದಿನಾಚರಣೆ”ಯಲ್ಲಿ ಶರಣರು, ಸ್ವಾತಂತ್ರ್ಯ ಹೋರಾಟಗಾರರು ಮತ್ತು ಕನ್ನಡ ಸಾಹಿತಿಗಳ ಪುಸ್ತಕಗಳನ್ನು ವಿತರಿಸಿ, ನಂತರ ಅವರು ಮಾತನಾಡಿದರು. ಬಳಗದ ಅಧ್ಯಕ್ಷ ಹಾಗೂ ಉಪನ್ಯಾಸಕ ಎಚ್.ಬಿ.ಪಾಟೀಲ್ ಮಾತನಾಡಿ, ಪುಸ್ತಕ ನಮ್ಮ ಜ್ಞಾನ ಭಂಡಾರವನ್ನು ಹೆಚ್ಚಿಸುತ್ತವೆ. ಕಲ್ಪನೆ, ದೃಷ್ಟಿಕೋನ ಮತ್ತು ಆಲೋಚನೆಗಳು ಬದಲಿಸುತ್ತವೆ. ಶಕ್ತಿಯನ್ನು ಹೊಂದಿವೆ. ಕಲಿಕೆಯಲ್ಲಿನ ಸಂತೋಷ, ಓದುವ ಅಪಾರ ಆನಂದ, ಪುಸ್ತಕಗಳ ಮೂಲಕ ಜ್ಞಾನವನ್ನು ಹುಡುಕುವ ಉತ್ಸಾಹವನ್ನು ಆಚರಿಸುವ ಉದ್ದೇಶದಿಂದ ಪ್ರತಿ ವರ್ಷ ‘ಆಗಷ್ಟ್-9’ರಂದು ‘ರಾಷ್ಟ್ರೀಯ ಪುಸ್ತಕ ಪ್ರೇಮಿಗಳ ದಿನ’ವನ್ನು ಆಚರಿಸಲಾಗುತ್ತದೆ. ಪುಸ್ತಕಗಳು ನಮ್ಮ ಉತ್ತಮ ಸ್ನೇಹಿತರು. ಅವು ನಮಗೆ ಬೆಳೆಯಲು ಮತ್ತು ಕಲಿಯಲು ಸಹಾಯ ಮಾಡುತ್ತವೆ. ಪುಸ್ತಕಗಳಿಗೆ ನಮ್ಮನ್ನು ಬೇರೆಯದ್ದೇ ಪ್ರಪಂಚಕ್ಕೆ ಕರೆದುಕೊಂಡು ಹೋಗುವ ಶಕ್ತಿ ಇದೆ.
ಯಾವುದೇ ಅಡ್ಡ ಪರಿಣಾಮಗಳಿಲ್ಲದ ಓದುವು ಚಟ ಬೆಳೆಸಿಕೊಳ್ಳಬೇಕು ಎಂದರು. ಕಾರ್ಯಕ್ರಮದಲ್ಲಿ ಸಮಾಜ ಸೇವಕರಾದ ಶಿವಯೋಗೆಪ್ಪಾ ಎಸ್. ಬಿರಾದಾರ, ಶರಣು ಎ.ಕಮಠಾಣ, ಶಾಲೆಯ ಶಿಕ್ಷಕರಾದ ಮುರಘರಾಜ ಎಂ.ಹಿರೇಮಠ, ರೇವಣಸಿದ್ದಪ್ಪ ನಿಂಬಾಜಿ, ನಾಗೇಂದ್ರಯ್ಯ ಕಳ್ಳಿಮಠ, ದೀಪಿಕಾ ಓಕಳಿ, ಸಂಗೀತಾ ಪಂಚಾಳ, ನೀಲಮ್ಮ ಬಾಳ್ಳಿ, ಪೂಜಾ ಕಳ್ಳಿಮಠ, ಸಂತೋಷ ಪಾಟೀಲ ಹಾಗೂ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.