ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿ : ರೈತ ಸಂಘಗಳ ಮನವಿ

ಬೀದರ: ಅ.28:ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಿನಿಂದ ಧಾರಾಕಾರ ಮಳೆಯಿಂದಾಗಿ ಉದ್ದು, ಹೆಸರು, ಸೋಯಾಬೀನ್, ತೋಗರಿ, ಹತ್ತಿ ಹಾಗೂ ತೋಟಗಾರಿಕೆ ಬೆಳೆಗಳಿಗೆ ಭಾರೀ ಹಾನಿ ಉಂಟಾಗಿದೆ. ಇದಲ್ಲದೆ 50 ಕ್ಕೂ ಹೆಚ್ಚು ಜಾನುವಾರುಗಳು ನೀರಿನಲ್ಲಿ ಕೊಚ್ಚಿ ಹೋಗಿ ಸಾವಿಗೀಡಾಗಿದ್ದು, ಅನೇಕ ಮನೆಗಳು ಕುಸಿದು ಬಿದ್ದಿವೆ. ಇದರ ಪರಿಣಾಮವಾಗಿ ಜಿಲ್ಲೆಯ ರೈತರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ.

ಈ ಹಿನ್ನೆಲೆಯಲ್ಲಿ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ, ಪ್ರತಿ ಎಕರೆಗೆ ಕನಿಷ್ಠ 25 ಸಾವಿರ ರೂಪಾಯಿ ಪರಿಹಾರ ನೀಡಬೇಕೆಂದು ಹಾಗೂ ಸಾವಿಗೀಡಾದ ಜಾನುವಾರುಗಳಿಗೆ, ಕುಸಿದ ಮನೆಗಳಿಗೆ ತಕ್ಷಣ ಸಮೀಕ್ಷೆ ನಡೆಸಿ ಸೂಕ್ತ ಪರಿಹಾರ ಒದಗಿಸಬೇಕೆಂದು ಮತ್ತು ಪ್ರತಿ ಟನ್ ಕಬ್ಬಿಗೆ ಒಂದು ಕೆಜಿ ಸಕ್ಕರೆ ಕೊಡಬೇಕು ಎಂದು ಒತ್ತಾಯಿಸಿದೆ.

ರೈತ ಸಂಘದ ನಾಯಕರು, ಬೆಳೆ ವಿಮೆ ಕಟ್ಟಿದ ರೈತರಿಗೆ ಶೀಘ್ರದಲ್ಲೇ ವಿಮೆ ಹಣ ಬಿಡುಗಡೆ ಮಾಡುವಂತೆ ಸರ್ಕಾರವನ್ನು ಕೋರಿದ್ದಾರೆ. “ನಮ್ಮ ಬೇಡಿಕೆಗಳನ್ನು ತಕ್ಷಣ ಪೂರೈಸದಿದ್ದರೆ ಬೀದಿಗಿಳಿದು ಉಗ್ರ ಹೋರಾಟ ನಡೆಸಲಾಗುವುದು, ಇದರಿಂದಾಗುವ ಪರಿಣಾಮಗಳಿಗೆ ಸರ್ಕಾರವೇ ಹೊಣೆಗಾರ,” ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಸಿದ್ರಾಮಪ್ಪ ಆಣದೂರೆ (ಜಿಲ್ಲಾಧ್ಯಕ್ಷರು), ಶ್ರೀಮಂತ ಬಿರಾದಾರ (ಜಿಲ್ಲಾ ಕಾರ್ಯಾಧ್ಯಕ್ಷರು), ದಯಾನಂದ ಸ್ವಾಮಿ ಸಿರ್ಸಿ (ಜಿಲ್ಲಾ ಪ್ರಧಾನ ಕಾರ್ಯದರ್ಶಿ), ಚಂದ್ರಶೇಖರ ಜಮಖಂಡಿ (ರಾಜ್ಯ ಉಪಾಧ್ಯಕ್ಷರು), ಪ್ರವೀಣ ಕುಲಕರ್ಣಿ (ಅಧ್ಯಕ್ಷರು-ಕಮಲನಗರ), ಸುಭಾಷ ರಗಟೆ (ಅಧ್ಯಕ್ಷರು-ಬಸವಕಲ್ಯಾಣ), ಪ್ರಕಾಶ ಬಾವಗೆ (ಅಧ್ಯಕ್ಷರು-ಔರಾದ), ವಿಶ್ವನಾಥ ಧರಣಿ, ಶಿವಾನಂದ ಹುಡಗೆ, ಶಿವರಾಜ ಡೊಂಗರಗಾವ, ಬಸವರಾಜ ಶಿವಪೂಜೆ, ಚನ್ನಪ್ಪಾ ಬೆಲ್ಲೂರೆ, ರಾಜಕುಮಾರ ಪಾಟೀಲ್, ಬಾಬುರಾವ ಪಾಟೀಲ್ ಸೇರಿದಂತೆ ಹಲವು ರೈತ ಮುಖಂಡರು ಇದ್ದರು.