
ಕೋಲಾರ,ಡಿ.೨- ಹೆಚ್‌ಐವಿ ಸೋಂಕು ತಡೆಗಟ್ಟಲು ಸಾರ್ವಜನಿಕರಲ್ಲಿ ಸೂಕ್ತ ಅರಿವು ಹಾಗೂ ಜಾಗೃತಿ ಮೂಡಿಸಬೇಕು. ನಾವೆಲ್ಲರೂ ಸೇರಿ ಭಾರತವನ್ನು ಏಡ್ಸ್ ಮುಕ್ತ ರಾಷ್ಟ್ರವನ್ನಾಗಿ ಮಾಡೋಣ ಸಮಾಜದ ಪ್ರತಿಯೊಬ್ಬರೂ ಈ ಕಾರ್ಯದಲ್ಲಿ ಕೈಜೋಡಿಸಿ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಆರ್.ನಟೇಶ್ ಕರೆ ನೀಡಿದರು.
ಜಿಲ್ಲಾಡಳಿತ, ಜಿಪಂ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,ಏಡ್ಸ್ ನಿಯಂತ್ರಣ ಘಟಕ ಇವರ ಸಂಯುಕ್ತ ಆಶ್ರಯದಲ್ಲಿ ತಾಲ್ಲೂಕಿನ ತೊರದೇವಂಡಹಳ್ಳಿಯ ಸಿ.ಬೈರೇಗೌಡ ಇಂಜಿನಿಯರಿಂಗ್ ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ‘ವಿಶ್ವ ಏಡ್ಸ್ ದಿನ’-೨೦೨೫ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹೆಚ್‌ಐವಿ/ಏಡ್ಸ್ ಹರಡುವಿಕೆಯನ್ನು ನಿಯಂತ್ರಿಸಲು ಇರುವ ಅಡೆತಡೆಗಳನ್ನು ಕೊನೆಗಾಣಿಸೋಣ’ ಈ ವರ್ಷದ ಘೋಷ ವಾಕ್ಯವಾಗಿದೆ. ಹೆಚ್‌ಐವಿ ಸೋಂಕು ಅಸುರಕ್ಷಿತ ಲೈಂಗಿಕ ಸಂಪರ್ಕದಿಂದ, ಸೋಂಕಿತ ರಕ್ತ ಮತ್ತು ರಕ್ತದ ಉಪ ಪದಾರ್ಥಗಳಿಂದ, ಸೋಂಕಿತ ತಾಯಿಯಿಂದ ಮಗುವಿಗೆ, ಸೋಂಕಿತ ಸೂಜಿ, ಸಿರಿಂಜ್ ಮತ್ತು ಶಸ್ತ್ರಕ್ರಿಯಾ ಸಾಧನಗಳಿಂದ ಈ ವಿಧಾನಗಳಿಂದ ಮಾತ್ರ ಹರಡುತ್ತದೆ ಎಂದು ಹೇಳಿದರು.
೨೦೧೭ ರಲ್ಲಿ ಹೆಚ್‌ಐವಿ ಕಾಯ್ದೆ ಜಾರಿಯಾಗಿದ್ದು, ಅದರಂತೆ ಹೆಚ್‌ಐವಿ ಸೋಂಕಿತರ ತಾರತಮ್ಯ ಹಾಗೂ ಮಾನವ ಹಕ್ಕುಗಳನ್ನು ರಕ್ಷಿಸಲು ರಾಜ್ಯಮಟ್ಟದಲ್ಲಿ ಓಂಬಡ್ಸ್‌ಮೆನ್ ನೇಮಕಾತಿಯಾಗಿದೆ ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಿ.ಶ್ರೀನಿವಾಸ್ ಮಾತನಾಡಿ, ದೇಶದ ಪ್ರಮುಖ ಆರೋಗ್ಯ ಸಮಸ್ಯೆಗಳಲ್ಲಿ ಒಂದಾದ ಹೆಚ್‌ಐವಿ ಒಬ್ಬ ವ್ಯಕ್ತಿಯ ಸಮಸ್ಯೆಯಾಗದೆ, ಇಡೀ ಸಮಾಜದ ಆರೋಗ್ಯ ಮತ್ತು ಸಾಮಾಜಿಕ ಮತ್ತು ಅಭಿವೃದ್ಧಿಗೆ ಸವಾಲಾಗಿದೆ. ಅವರು ಎಲ್ಲರಂತೆ ಬದುಕುವ ಹಕ್ಕು ಹಾಗೂ ಸಾರ್ವತ್ರಿಕವಾಗಿ ಎಲ್ಲರಿಗೂ ಸಿಗಬೇಕಾದ ಸಾಮಾಜಿಕ ಸವಲತ್ತುಗಳಿಂದ ವಂಚಿತರನ್ನಾಗಿಸಿದೆ. ಸೋಂಕುಗಳಿಂದ ಮುಕ್ತವಾದ, ಕಳಂಕ ಮತ್ತು ತಾರಮ್ಯರಹಿತ ಸಮಾಜ ನಿರ್ಮಾಣ ಹಾಗೂ ಹೆಚ್‌ಐವಿ ಸಂಬಂಧಿತ ಮರಣಗಳನ್ನು ಸೊನ್ನೆಗೆ ತರಲು ಪ್ರಯತ್ನಿಸೋಣ ಎಂದು ಹೇಳಿದರು.
ಹೆಚ್‌ಐವಿ ಸೋಂಕು, ತಾಯಿಯಿಂದ ಮಗುವಿಗೆ ಬರದಂತೆ ತಡೆಯಲು ಗರ್ಭಿಣಿಯರಲ್ಲಿ ಹೆಚ್‌ಐವಿ ಸೋಂಕು ಪತ್ತೆಯಾದ ತಕ್ಷಣವೇ ಎ.ಆರ್.ಟಿ ಚಿಕಿತ್ಸೆ ನೀಡುವುದು ಮತ್ತು ಹೆರಿಗೆ ನಂತರ ಮಗುವಿಗೆ ೬ ವಾರ ಅಥವಾ ೧೨ ವಾರಗಳು ನೆವರೆಪಿನ್ ದ್ರಾವಣ ನೀಡುವ ಮೂಲಕ ತಾಯಿಯಿಂದ ಮಗುವಿಗೆ ಬರುವ ಹೆಚ್‌ಐವಿ ಸೋಂಕನ್ನು ನಿಯಂತ್ರಿಸಲಾಗುವುದು. ಈ ಸೌಲಭ್ಯವು ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಲಭ್ಯವಿದೆ ಎಂದು ತಿಳಿಸಿದರು.
ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಪ್ರಸನ್ನಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ದೇಶದ ಪ್ರಮುಖ ಆರೋಗ್ಯ ಸಮಸ್ಯೆಗಳಲ್ಲಿ ಒಂದಾದ ಹೆಚ್‌ಐವಿ ಒಬ್ಬ ವ್ಯಕ್ತಿಯ ಸಮಸ್ಯೆಯಾಗದೆ, ಇಡೀ ಸಮಾಜದ ಆರೋಗ್ಯ ಮತ್ತು ಸಾಮಾಜಿಕ ಮತ್ತು ಅಭಿವೃದ್ಧಿಗೆ ಸವಾಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಏಡ್ಸ್ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಉತ್ತಮ ಕಾರ್ಯನಿರ್ವಹಣೆಗಾಗಿ ಶ್ರೀನಿವಾಸಪುರ ತಾಲೂಕಿನ ಅಡ್ಡಗಲ್ ಪ್ರಾಥಮಿಕ ಆರೋಗ್ಯಕೇಂದ್ರ, ಹಂಚಾಳದ ಈಶ್ವರಮ್ಮಾಜಿ ನರ್ಸಿಂಗ್ ಕಾಲೇಜು, ಕೋಲಾರದ ಎಸ್.ಎಂ.ಜಿ, ವಿಷ್ಣು ನರ್ಸಿಂಗ್ ಕಾಲೇಜು, ಐಟಿಸಿ ವೇರ್ ಹೌಸ್ ಮಾಲೂರು, ವೈಯಕ್ತಿಕ ಸೇವೆಗಾಗಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಪ್ರೇಮಾ, ಜಾಲಪ್ಪ ಆಸ್ಪತ್ರೆಯ ಡಾ.ಶೀಲಾ,ಜಿಲ್ಲಾ ಎಸ್‌ಎನ್.ಆರ್. ಆಸ್ಪತ್ರೆಯ ಡಾ.ಜಮೀರ್,ಅಹಮದ್‌ರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸಿಬಿಐಟಿ ಕಾಲೇಜಿನ ಪ್ರಾಂಶುಪಾಲ ಡಾ.ಚಂದ್ರಶೇಖರ್, ಆರೋಗ್ಯ ಶಿಕ್ಷಣಾಧಿಕಾರಿ ಪ್ರೇಮ, ಐ.ಸಿ.ಟಿ.ಸಿ ಜಿಲ್ಲಾ ಮೇಲ್ವಿಚಾರಕರಾದ ಡಿ.ಎಂ. ಹೇಮಲತಾ, ಸೌಖ್ಯಸಮ್ಮಿಲನ ಸ್ವಯಂಸೇವಾ ಸಂಘದ ಪದಾಧಿಕಾರಿಗಳು,ಕಾಲೇಜಿನ ವಿದ್ಯಾರ್ಥಿ ಗಳು, ಉಪನ್ಯಾಸಕರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.


























