Home ಜಿಲ್ಲೆ ಬೆಂಗಳೂರು ಪೆಟ್ರೋಲ್, ಡೀಸೆಲ್ ಅಡುಗೆ ಅನಿಲ ಸಿಲಿಂಡರ್ ಬೆಲೆಗಳ ಏರಿಕೆ ವಿರೋಧಿಸಿ ಸಿಪಿಐಎಂ ಪ್ರತಿಭಟನೆ

ಪೆಟ್ರೋಲ್, ಡೀಸೆಲ್ ಅಡುಗೆ ಅನಿಲ ಸಿಲಿಂಡರ್ ಬೆಲೆಗಳ ಏರಿಕೆ ವಿರೋಧಿಸಿ ಸಿಪಿಐಎಂ ಪ್ರತಿಭಟನೆ

ಭಾಗ್ಯನಗರ,ಮೇ೨೬:ನಿತ್ಯ ಬಳಕೆ ಮಾಡುವ ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲ ಸಿಲಿಂಡರ್ ಬೆಲೆಗಳ ಏರಿಕೆ ವಿರೋಧಿಸಿ ಭಾರತ ಕಮ್ಯುನಿಸ್ಟ್ ಪಕ್ಷದ ಸಿಪಿಐಎಂ ಮುಖಂಡರು ಹಾಗೂ ಕಾರ್ಯಕರ್ತರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.


ಪಟ್ಟಣದ ಡಿ.ವಿ.ಜಿ ಮುಖ್ಯ ರಸ್ತೆ ಗೂಳೂರು ವೃತ್ತದಿಂದ ಬಸ್ ನಿಲ್ದಾಣ ದಿವಂಗತ ಮಾಜಿ ಶಾಸಕ ಜಿ.ವಿ.ಶ್ರೀರಾಮ ರೆಡ್ಡಿ ಪುಥಳಿ ವರಗೆ ದ್ವಿಚಕ್ರ ವಾಹನಗಳನ್ನು ತಳುವ ಮೂಲಕ ವಿನೂತವಾಗಿ ಪ್ರತಿಭಟನೆ ಮಾಡಿದ್ದರು.


ಈ ವೇಳೆಯಲ್ಲಿಸಿಪಿಐಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಎಂ.ಪಿ.ಮುನಿವೆಂಕಟಪ್ಪ ಮಾತನಾಡಿ, ದೇಶದ ದುಡಿಯುವ ಜನತೆ ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾಗ ಪೆಟ್ರೋಲ್, ಡೀಸೆಲ್, ಗ್ಯಾಸ್ ದರಗಳನ್ನು ನಿರಂತರವಾಗಿ ಏರಿಸುವ ಮೂಲಕ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜನ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.


ಕೊಲ್ಲಿ ರಾಷ್ಟ್ರಗಳ ಮಧ್ಯೆ ಯುದ್ಧದ ನೆಪವೊಡ್ಡಿ ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲ ಸಿಲಿಂಡರ್ ಬೆಲೆ ಏರಿಸಿ ಕೇಂದ್ರ ಸರ್ಕಾರ ದೇಶದ ಜನರನ್ನು ಆರ್ಥಿಕ ಸಂಕಷ್ಟಕೀಡು ಮಾಡಿದೆ ಎಂದು ಖಂಡಿಸಿದರು.


ಐದು ರಾಜ್ಯಗಳ ಚುನಾವಣೆಯ ಮೊದಲು ಇಂಧನಗಳ ದಾಸ್ತಾನು ಕೊರತೆ ಇಲ್ಲ. ಕೊಲ್ಲಿ ಯುದ್ಧದಿಂದ ದೇಶದಲ್ಲಿ ತೈಲ ಬಿಕ್ಕಟ್ಟು ಉಂಟಾಗದು ಎಂದು ಹೇಳಿದ್ದ ದೇಶದ ಪ್ರಧಾನಿ, ಚುನಾವಣೆಗಳ ಫಲಿತಾಂಶದ ನಂತರ ಇಂಧನಗಳ ಬೆಲೆ ಏರಿಸಿ ವಿದೇಶಕ್ಕೆ ತೆರಳಿದ್ದು ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಕಿಡಿಕಾರಿದರು.


ವಿಶ್ವದ ಬಹುತೇಕ ರಾಷ್ಟ್ರಗಳು ತಮ್ಮ ತಮ್ಮ ದೇಶದ ಜನರ ಹಿತಾಸಕ್ತಿಗೆ ಪೂರಕವಾಗಿ ತೈಲ ಬೆಲೆಗಳನ್ನು ನಿಯಂತ್ರಿಸುತ್ತಿದ್ದರೆ, ನಮ್ಮ ದೇಶದಲ್ಲಿ ಮಾತ್ರ ಕೇಂದ್ರದ ವಿಫಲ ವಿದೇಶಾಂಗ ನೀತಿಯಿಂದಾಗಿ ತೈಲ ಬೆಲೆಗಳ ಏರಿಕೆ ಜನತೆಯ ಮೇಲೆ ಹೊರೆಯಾಗಿದೆ ಎಂದು ಆರೋಪಿಸಿದರು. ಇಂಧನ ಬೆಲೆಗಳನ್ನು ಇಳಿಸುವ ಜೊತೆಗೆ ಬೆಲೆಗಳ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಅಗತ್ಯ ಕ್ರಮಗಳನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.


ಈ ಸಂದರ್ಭದಲ್ಲಿ ಸಿಪಿಐಎಂ ಮುಖಂಡರಾದ ರಘುರಾಮ ರೆಡ್ಡಿ, ವಾಲ್ಮೀಕಿ ಅಶ್ವತ್ಥಪ್ಪ ಚನ್ನರಾಯಪ್ಪ, ಜಿ.ಕೃಷ್ಣಪ್ಪ, ಡಿ.ಟಿ.ಮುನಿಸ್ವಾಮಿ ,ಎಸ್. ಎಫ್.ಐ ಮುಖಂಡ ಸೋಮಶೇಖರ್,ರಾಮಾಂಜಿ ಮತ್ತಿತರರು ಹಾಜರಿದ್ದರು.