
ಸೈದಾಪುರ:ಮೇ.26:ಸುರಕ್ಷತಾ ವ್ಯವಸ್ಥೆಯನ್ನು ಕಲ್ಪಿಸಬೇಕಾದ ಜೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಬೆಳ್ಳಂಬೆಳಗ್ಗೆ ಹಸುವೊಂದು ವಿದ್ಯುತ್ ಅವಘಡಕ್ಕೆ ತುತ್ತಾದ ಘಟನೆ ಭಾನುವಾರ ಸಂಭವಿಸಿದೆ.
ಸಮೀಪದ ಬದ್ದೇಪಲ್ಲಿ ಗ್ರಾಮದ ಕೃಷ್ಣಯ್ಯ ಎಂಬುವವರಿಗೆ ಸೇರಿದ ಹಸು ವಿದ್ಯುತ್‍ಟ್ರಾನ್ಸ್ ಫಾರ್ಮರ್ ಕಂಬಕ್ಕೆ ತಗುಲಿ ಸ್ಥಳದಲ್ಲೇ ಪ್ರಾಣ ಬಿಟ್ಟಿದೆ. ಸೂಕ್ತ ರಕ್ಷಣಾತಂತಿ ಅಳವಡಿಸದಿರುವುದೇ ಘಟನೆಗೆ ಮೂಲ ಕಾರಣ ಎಂದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಬದ್ದೇಪಲ್ಲಿ ಗ್ರಾಮದಲ್ಲಿ ಸರಿ ಸುಮಾರು ಎಂಟರಿಂದ ಹತ್ತು ವಿದ್ಯುತ್ ಟ್ರಾನ್ಸ್ ಫಾರ್ಮರ್ ಗಳಿದ್ದು ಅವುಗಳ ಸುತ್ತಲ್ಲೂ ರಕ್ಷಣಾ ಬೇಲಿಯನ್ನು ಹಾಕದ ಪರಿಣಾಮ ಜನ ಜಾನುವಾರುಗಳಿಗೆ ಜೀವಾತಂಕ ಎದುರಾಗಿದೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಗ್ರಾಮಸ್ಥರು. ಕೆಲವಡೆ ವಿದ್ಯುತ್ ಕಂಬಗಳು ಭಾಗಿದ್ದು, ತಂತಿಗಳು ಜೋತು ಬಿದ್ದು ಕೈ’ಗೆ ತಾಗುವಂತಾಗುವೆ. ಇದರಿಂದಾಗಿ ಸಣ್ಣ ಪುಟ್ಟ ಗಾಳಿ ಬೀಸಿದರೂ ಕರೆಂಟ್‍ಕಟ್ ಆಗಿ ಜನ ಕತ್ತಲಲ್ಲಿ ಕಾಲ ಕಳೆಯುವಂತಾಗಿದೆ. ಕೆಲವಡೆಯಂತೂ ಗಿಡದ ಮರೆಯಲ್ಲಿರುವ ವಿದ್ಯುತ್ ತಂತಿಗಳು ಯಾವಾಗ ಹರಿದು ಬೀಳುತ್ತವೆಯೋ ಗೊತ್ತಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ವಿದ್ಯುತ್ ಅವ್ಯವಸ್ಥೆ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದೆ.
ಸಿಬ್ಬಂದಿ ಕಾಣದ ವಿದ್ಯುತ್‍ಘಟಕ…!
ಇಡೀ ಘಟಕದಲ್ಲಿ ಗುತ್ತಿಗೆ ಆಧಾರಿತ ಆಪರೇಟರ್ ಗಳನ್ನು ಹೊರತುಪಡಿಸಿ ಇತರ ಸಿಬ್ಬಂದಿಗಳ ಹುದ್ದೆ ಖಾಲಿ ಖಾಲಿ ಇವೆ. ಸೈದಾಪುರ ಉಪ ಘಟಕಕ್ಕೆ ಸೇರಿದ ಲೈನ್ ಮ್ಯಾನ್ ಒಬ್ಬರಿಗೆ ಬದ್ದೇಪಲ್ಲಿ ಘಟಕದ ನಿರ್ವಹಣಾ ಜವಾಬ್ದಾರಿಯನ್ನು ವಹಿಸಲಾಗಿದ್ದು, ಅವರೊಬ್ಬರೇ ಬದ್ದೇಪಲ್ಲಿ, ಬದ್ದೇಪಲಿ ್ಲತಾಂಡಾ, ಬಾಲಚೇಡ, ಸೌರಾಷ್ಟ್ರಹಳ್ಳಿ ಮುಂತಾದ ಗ್ರಾಮಗಳ ಉಸ್ತುವಾರಿಯನ್ನು ನೋಡಿಕೊಳ್ಳಬೇಕಾಗಿದೆ. ವಿದ್ಯುತ್ ಸಂಪರ್ಕ ವ್ಯವಸ್ಥೆಕಲ್ಪಿಸುವುದಿರಲ್ಲಿ ಕನಿಷ್ಠ ಗ್ರಾಹಕರ ಕರೆಗಳನ್ನೂ ಸ್ವೀಕರಿಸಿ ಸಮಾಧಾನ ನೀಡಲು ಸಾಧ್ಯವಾಗುತ್ತಿಲ್ಲ ಎಂಬ ಮಾತುಗಳು ಕೇಳಿಬರತ್ತಿವೆ.
ಸರಕಾರ ವಿದ್ಯುತ್ ಸಂಸ್ಥೆಗಳಿಗೆ ಅವಶ್ಯ ಸಿಬ್ಬಂದಿ ನಿಯೋಜನೆ ಹಾಗೂ ಮೂಲ ಸೌಲಭ್ಯಗಳನ್ನು ಕಲ್ಪಿಸುವತ್ತ ಗಮನ ಹರಿಸಬೇಕು. ಟ್ರಾನ್ಸ್ ಫಾರ್ಮರ್ ಕಂಬಕ್ಕೆ ತಗುಲಿ ಹಸುವೊಂದು ಸಾವನ್ನಪ್ಪಿದ್ದು ಜೆಸ್ಕಾಂ ಅಧಿಕಾರಿಗಳು ಕೂಡಲೇ ಪರಿಹಾರ ಕಲ್ಪಿಸಬೇಕು. ಗ್ರಾಮದಲ್ಲಿ ವಿದ್ಯುತ್ ಸುರಕ್ಷತಾ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದು ಆಗ್ರಹಿಸುತ್ತೇನೆ.
– ಬಾಲಗೌಡಕಲಾಲ್, ಯುವ ಮುಖಂಡರು ಬದ್ದೇಪಲ್ಲಿ






















