ಶಾಲೆಗಳಿಗೆ ಕೋವಿಡ್ ಮಾರ್ಗಸೂಚಿ

ಬೆಂಗಳೂರು,ಮೇ೩೧:ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಶಾಲೆಗಳಿಗೆ ಆರೋಗ್ಯ ಇಲಾಖೆ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು, ಮಕ್ಕಳಲ್ಲಿ ಜ್ವರ, ಕೆಮ್ಮು, ನೆಗಡಿ ಇದ್ದರೆ ಅವರನ್ನು ಶಾಲೆಗೆ ಕಳುಹಿಸಬಾರದು. ಶಾಲೆಗಳು ಅಂತಹ ಮಕ್ಕಳಿಗೆ ರಜೆ ನೀಡಬೇಕು ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ.


ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕಳೆದವಾರ ಸಾರ್ವಜನಿಕರಿಗೆ ಸಲಹೆ ರೂಪದ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದ ಆರೋಗ್ಯ ಇಲಾಖೆ, ಜನದಟ್ಟಣೆ ಇರುವ ಕಡೆ ಮಾಸ್ಕ್ ಧರಿಸುವಂತೆ ಸಲಹೆ ಮಾಡಿತ್ತು.ಅಲ್ಲದೆ ಸಾರಿ ಪ್ರಕರಣಗಳಲ್ಲಿ ಅಂದರೆ ಉಸಿರಾಟದ ತೊಂದರೆ ಮತ್ತು ಇತರೆ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಕೋವಿಡ್ ಪರೀಕ್ಷೆಯನ್ನು ಕಡ್ಡಾಯ ಮಾಡಲಾಗಿತ್ತು. ಹಾಗೆಯೇ, ಕೋವಿಡ್ ಪರೀಕ್ಷೆಯನ್ನು ಕೆಲ ಸರ್ಕಾರಿ ಆಸ್ಪತ್ರೆಗಳಲ್ಲಿ ಆರಂಭಿಸಲಾಗಿತ್ತು.


ರಾಜ್ಯದಲ್ಲಿ ಶಾಲೆಗಳು ಪುನಾರಂಭವಾದ ಹಿನ್ನೆಲೆಯಲ್ಲಿ ಶಾಲೆಗಳಿಗೂ ಈಗ ಕೊರೊನಾ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿ ಜ್ವರ, ಕೆಮ್ಮು, ನೆಗಡಿ ಇರುವ ಮಕ್ಕಳನ್ನು ಶಾಲೆಗೆ ಕಳುಹಿಸಬಾರದು ಎಂದು ಹೇಳಿದೆ.. ಹಾಗೆಯೇ ಇಂತಹ ಮಕ್ಕಳು ಶಾಲೆಗಳಿಗೆ ಬಂದರೆ ಅಂತಹ ಮಕ್ಕಳನ್ನು ವಾಪಸ್ ಮನೆಗೆ ಕಳುಹಿಸಬೇಕು ಎಂದು ಶಾಲಾ ಆಡಳಿತ ಮಂಡಳಿಗಳಿಗೆ ಮಾರ್ಗಸೂಚಿಯಲ್ಲಿ ತಿಳಿಸಿದೆ.


ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದರೂ ಆತಂಕಪಡುವ ಪರಿಸ್ಥಿತಿ ಇಲ್ಲವಾದರೂ ಮುನ್ನೆಚ್ಚೆರಿಕೆ ಕ್ರಮವಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹಾಗೂ ಕೋವಿಡ್ ತಾಂತ್ರಿಕ ಸಮಿತಿ ಸಲಹೆಯಂತೆ ಶಾಲೆಗಳಿಗೆ ಕೊರೊನಾ ಮಾರ್ಗಸೂಚಿಗಳನ್ನು ಇಂದು ಪ್ರಕಟಿಸಿದೆ.


ಪೋಷಕರೂ ಸಹ ಮಕ್ಕಳ ಬಗ್ಗೆ ಎಚ್ಚರ ವಹಿಸಬೇಕು, ನೆಗಡಿ, ಕೆಮ್ಮು, ಜ್ವರ ಇದ್ದರೆ ಮಕ್ಕಳನ್ನು ಶಾಲೆಗೆ ಕಳುಹಿಸಬಾರದು. ಪೂರ್ಣ ಗುಣಮುಖರಾದ ನಂತರ ಶಾಲೆಗೆ ಕಳುಹಿಸುವುದು ಸೂಕ್ತ ಎಂದು ಮಾರ್ಗಸೂಚಿಯಲ್ಲಿ ತಿಳಿಸಿದೆ.


ಶಾಲೆಗಳ ಆಡಳಿತ ಮಂಡಳಿ ಸಹ ಜ್ವರ, ಕೆಮ್ಮು, ನೆಗಡಿಯಿಂದ ಬಳಲುತ್ತಿರುವ ಮಕ್ಕಳನ್ನು ಗುರುತಿಸಿ ಅವರಿಗೆ ರಜೆ ನೀಡುವಂತೆಯೂ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಕಳೆದ ಸೋಮವಾರದಿಂದ ಸಾರಿ ಪ್ರಕರಣದಲ್ಲಿ ಕೊರೊನಾ ಪರೀಕ್ಷೆಯನ್ನು ಕಡ್ಡಾಯ ಮಾಡಿ ಪರೀಕೆಯನ್ನು ಆರೋಗ್ಯ ಇಲಾಖೆ ಆರಂಭವಾಗಿದೆ.


ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗಿದ್ದರೂ ಸದ್ಯಕ್ಕೆ ಗಾಬರಿ ಬೀಳುವಂತಹ ಪರಿಸ್ಥಿತಿ ಇಲ್ಲವಾದರೂ ಮಕ್ಕಳಲ್ಲಿ ಸೋಂಕು ಹರಡುವುದನ್ನು ತಪ್ಪಿಸಲು ಮುಂಜಾಗ್ರತಾ ಕ್ರಮವಾಗಿ ಮಾರ್ಗಸೂಚಿಗಳನ್ನು ಪ್ರಕಟಿಸಲಾಗಿದೆ ಎಂದು ಆರೋಗ್ಯ ಇಲಾಖೆ ಹೇಳಿದೆ.

ರಾಜ್ಯದಲ್ಲಿ ೨೩೪ ಕೋವಿಡ್


ರಾಜ್ಯದಲ್ಲಿ ಕೋವಿಡ್ ಕೇಸ್ ಗಣನೀಯವಾಗಿ ಏರಿಕೆ ಕಂಡಿದ್ದು, ರಾಜ್ಯದ ಒಟ್ಟು ಆಕ್ಟೀವ್ ಕೇಸ್ ೨೩೪ ಇದ್ದು, ಅದರಲ್ಲಿ ಬೆಂಗಳೂರು ಒಂದರಲ್ಲೇ ಬರೋಬ್ಬರಿ ೧೫೦ಕ್ಕೂ ಹೆಚ್ಚು ಆಕ್ಟೀವ್ ಕೇಸ್‌ಗಳು ದಾಖಲಾಗಿ ಕೊರೊನಾ ಹಾಟ್‌ಸ್ಪಾಟ್ ಆಗುತ್ತಿದೆ.


ಮಹದೇವಪುರ, ಪೂರ್ವ ವಲಯ, ಮತ್ತು ದಕ್ಷಿಣ ವಲಯಗಳಲ್ಲಿ ಕೊರೊನಾ ಕೇಸ್‌ಗಳು ಗಮನಾರ್ಹವಾಗಿ ಏರಿಕೆಯಾಗಿವೆ. ಪೂರ್ವ ವಲಯದಲ್ಲಿ ೩೦ಕ್ಕೂ ಹೆಚ್ಚು ಮತ್ತು ಮಹಾದೇವಪುರದಲ್ಲಿ ೩೦ಕ್ಕೂ ಮೀರಿದ ಆಕ್ಟಿವ್ ಕೇಸ್‌ಗಳು ದಾಖಲಾಗಿವೆ.


ಇದೇ ವೇಳೆ, ದಕ್ಷಿಣ ವಲಯದಲ್ಲಿಯೂ ಕೇಸ್‌ಗಳ ಸಂಖ್ಯೆ ಏರಿಕೆಯಾಗಿದೆ. ಬಿಬಿಎಂಪಿಯ ಎಂಟು ವಲಯಗಳಾದ ಮಹಾದೇವಪುರ, ಯಲಹಂಕ, ಪೂರ್ವ, ಪಶ್ಚಿಮ, ಮತ್ತು ದಕ್ಷಿಣ ವಲಯಗಳಲ್ಲಿ ಉಸಿರಾಟದ ಸಮಸ್ಯೆ, ಹೃದಯ ಸಂಬಂಧಿ ಕಾಯಿಲೆಗಳು, ಮತ್ತು ಇತರ ಆರೋಗ್ಯ ಸಮಸ್ಯೆಗಳಿಂದ ಬಳಲುವವರ ಮೇಲೆ ನಿಗಾ ಇಡಲು ಪಾಲಿಕೆ ಕ್ರಮ ಕೈಗೊಳ್ಳುತ್ತಿದೆ.


ಇನ್ನೂ, ಮೈಸೂರಿನಲ್ಲಿ ಇದೇ ೨೫ರಂದು ಮರಣ ಹೊಂದಿದ ೬೩ ವರ್ಷದ ವ್ಯಕ್ತಿ ಕೋವಿಡ್ ಪೀಡಿತರಾಗಿದ್ದರು ಎನ್ನುವುದು ಪರೀಕ್ಷಾ ವರದಿಯಿಂದ ದೃಢಪಟ್ಟಿದೆ. ಇದರಿಂದಾಗಿ ರಾಜ್ಯದಲ್ಲಿ ಈ ವರ್ಷ ವರದಿಯಾದ ಒಟ್ಟು ಕೋವಿಡ್ ಮರಣ ಪ್ರಕರಣಗಳ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ.


ಮೂತ್ರಪಿಂಡ ವೈಫಲ್ಯದ ಕಾರಣ ಇದೇ ೧೫ ರಂದು ಅವರು ಅಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಉಸಿರಾಟದ ಸಮಸ್ಯೆಯೂ ಕಾಣಿಸಿಕೊಂಡಿತ್ತು. ಆದ್ದರಿಂದ, ಕೋವಿಡ್ ಪರೀಕ್ಷೆಗೆ ಅವರ ಗಂಟಲ ದ್ರವದ ಮಾದರಿಯನ್ನು ಸಂಗ್ರಹಿಸಲಾಗಿತ್ತು.

ಈ ಪ್ರಕರಣದ ಪರೀಕ್ಷಾ ವರದಿ ಬಂದಿದ್ದು, ಕೊರೊನಾ ಸೋಂಕಿತರಾಗಿದ್ದರು ಎನ್ನುವುದು ಖಚಿತಪಟ್ಟಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.


ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಏರುಗತಿ ಪಡೆದಿದೆ. ಶುಕ್ರವಾರ ೧೧೪ ಪ್ರಕರಣಗಳು ಹೊಸದಾಗಿ ವರದಿಯಾಗಿವೆ. ಈ ವರ್ಷ ವರದಿಯಾದ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ ೩೬೭ಕ್ಕೆ ಏರಿಕೆಯಾಗಿದೆ.


೨೪ ಗಂಟೆಗಳ ಅವಧಿಯಲ್ಲಿ ೪೬೦ ಮಾದರಿಗಳ ಪರೀಕ್ಷೆ ಮಾಡಲಾಗಿದೆ. ಸೋಂಕು ದೃಢ ಪ್ರಮಾಣ ಶೇಕಡ ೨೪.೭ಕ್ಕೆ ಏರಿಕೆಯಾಗಿದೆ. ಕೋವಿಡ್ ಸಕ್ರಿಯ ಪ್ರಕರಣಗಳ ಸಂಖ್ಯೆ ೨೩೪ಕ್ಕೆ ತಲುಪಿದೆ. ಈ ಪ್ರಕರಣಗಳಲ್ಲಿ ೨೨೩ ಮಂದಿ ಮನೆ ಆರೈಕೆಗೆ ಒಳಗಾಗಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.