Home ಜಿಲ್ಲೆ ಶಹಾಪುರದಲ್ಲಿ ಬಸವಾದಿ ಶಿವಶರಣರ ಬೃಹತ್ ಹಿಂದೂ ಸಮಾವೇಶಕ್ಕೆ ಕ್ಷಣಗಣನೆ

ಶಹಾಪುರದಲ್ಲಿ ಬಸವಾದಿ ಶಿವಶರಣರ ಬೃಹತ್ ಹಿಂದೂ ಸಮಾವೇಶಕ್ಕೆ ಕ್ಷಣಗಣನೆ

ಶಹಾಪುರ :ಮೇ.೧೭: ಜಿಲ್ಲೆಯ ಶಹಾಪುರ ನಗರದಲ್ಲಿ ಮೇ ೧೮ರಂದು ನಡೆಯಲಿರುವ ಬಸವಾದಿ ಶಿವಶರಣರ ಬೃಹತ್ ಹಿಂದೂ ಸಮಾವೇಶಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಸಮಾವೇಶದ ಸಿದ್ಧತೆಗಳು ಅಂತಿಮ ಹಂತ ತಲುಪಿವೆ. ಬಸವಾದಿ ಶಿವಶರಣರ ಹಿಂದೂ ವೇದಿಕೆ ಆಶ್ರಯದಲ್ಲಿ ಆಯೋಜಿಸಿರುವ ಈ ಮಹಾಸಮಾವೇಶದಲ್ಲಿ ಕನ್ಹೇರಿ ಮಠದ ಪೂಜ್ಯ ಅದೃಶ್ಯ ಕಾಡಸಿದ್ದೇಶ್ವರ ಮಹಾಸ್ವಾಮೀಜಿ ಪ್ರಮುಖ ಆಕರ್ಷಣೆಯಾಗಲಿದ್ದು, ಸನಾತನ ಧರ್ಮ, ಕೃಷಿ ಕಾಯಕ, ದೇಶಭಕ್ತಿ ಹಾಗೂ ಸಾಮಾಜಿಕ ಜಾಗೃತಿ ಕುರಿತು ಅವರು ವಿಶೇಷ ಉಪನ್ಯಾಸ ನೀಡಲಿದ್ದಾರೆ ಎಂದು ಆಯೋಜಕರಾದ ಶಹಾಪುರದ ಕುಂಬಾರ ಬಡಾವಣೆಯ ಹಿರೇಮಠದ ಸುಗುರೇಶ್ವರ ಶಿವಾಚಾರ್ಯರು ತಿಳಿಸಿದರು.

ಶನಿವಾರ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಜೆ ೬ ಗಂಟೆಗೆ ನಗರದ ಸಿಪಿಎಸ್ ಶಾಲಾ ಮೈದಾನದಲ್ಲಿ ನಡೆಯಲಿರುವ ಈ ಸಮಾವೇಶದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ೩೦೦ಕ್ಕೂ ಅಧಿಕ ಸ್ವಾಮೀಜಿಗಳು ಭಾಗವಹಿಸಲಿದ್ದು, ಸುಮಾರು ೧೦ ಸಾವಿರಕ್ಕೂ ಹೆಚ್ಚು ಭಕ್ತರು, ರೈತರು, ಯುವಕರು ಹಾಗೂ ಹಿಂದೂ ಸಮಾಜದ ಮುಖಂಡರು ಸೇರುವ ನಿರೀಕ್ಷೆಯಿದೆ ಎಂದು ಹೇಳಿದರು. ಈ ಸಮಾವೇಶವು ಶಹಾಪುರ ನಗರದ ಇತಿಹಾಸದಲ್ಲೇ ಮಹತ್ವದ ಘಟ್ಟವಾಗಿ ಗುರುತಿಸಿಕೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಮಾವೇಶವು ರಾಜಕೀಯ ರಹಿತ ಹಾಗೂ ಪಕ್ಷಾತೀತವಾಗಿದ್ದು, ಸಮಾಜದಲ್ಲಿ ಒಗ್ಗಟ್ಟು, ಸಾಂಸ್ಕೃತಿಕ ಮೌಲ್ಯಗಳ ಉಳಿವು ಹಾಗೂ ಧಾರ್ಮಿಕ ಜಾಗೃತಿಯನ್ನು ಮೂಡಿಸುವ ಉದ್ದೇಶದಿಂದ ಆಯೋಜಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು. ಇತ್ತೀಚಿನ ದಿನಗಳಲ್ಲಿ ಸಮಾಜದಲ್ಲಿ ಉಂಟಾಗುತ್ತಿರುವ ಭಿನ್ನಾಭಿಪ್ರಾಯ, ಧರ್ಮಾಚರಣೆಗಳ ಬಗ್ಗೆ ನಡೆಯುತ್ತಿರುವ ವಿವಾದಾತ್ಮಕ ಹೇಳಿಕೆಗಳು ಹಾಗೂ ಹಿಂದೂ ಸಮಾಜದ ಒಳಗಿನ ಭೇದಭಾವಗಳನ್ನು ದೂರ ಮಾಡಿ, “ಒಗ್ಗಟ್ಟಿನ ಸಮಾಜ – ಶಕ್ತಿಶಾಲಿ ರಾಷ್ಟ್ರ” ಎಂಬ ಸಂದೇಶವನ್ನು ಸಾರುವ ಉದ್ದೇಶ ಸಮಾವೇಶಕ್ಕಿದೆ ಎಂದರು.

“ಇದು ಯಾವುದೇ ಸಮುದಾಯದ ವಿರುದ್ಧದ ಕಾರ್ಯಕ್ರಮವಲ್ಲ. ಭಾರತೀಯ ಸಂಸ್ಕೃತಿ, ಪರಂಪರೆ ಮತ್ತು ಧಾರ್ಮಿಕ ಮೌಲ್ಯಗಳ ಬಗ್ಗೆ ಸಮಾಜದಲ್ಲಿ ಅರಿವು ಮೂಡಿಸಿ, ದೇಶಭಕ್ತಿಯನ್ನು ಬಲಪಡಿಸುವ ವೇದಿಕೆಯಾಗಿದೆ” ಎಂದು ಸೂಗುರೇಶ್ವರ ಶಿವಾಚಾರ್ಯರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಸಿದ್ದೇಶ್ವರ ಶಿವಾಚಾರ್ಯರು,ಮರುಳ ಮಹಾಂತ ಶಿವಾಚಾರ್ಯರು,ಸೋಮೇಶ್ವರ ಸ್ವಾಮೀಜಿ,ಚಂದ್ರಶೇಖರ ಸ್ವಾಮೀಜಿ,ಚನ್ನವೀರ ಸ್ವಾಮೀಜಿ, ಸೇರಿದಂತೆ ಹಲವು ಮಠಾಧೀಶರು ಹಾಗೂ ಮುಖಂಡರು ಉಪಸ್ಥಿತರಿದ್ದರು.

ಸಮಾವೇಶದ ಅಂಗವಾಗಿ ಸಂಜೆ ೪ ಗಂಟೆಗೆ ನಗರದ ಸಾರೋಟದಿಂದ ಬಸವಾದಿ ಶಿವಶರಣರ ಭಾವಚಿತ್ರಗಳ ಭವ್ಯ ಮೆರವಣಿಗೆ ಆರಂಭವಾಗಲಿದೆ. ಗುಗ್ಗಳ ಬಸವೇಶ್ವರ ದೇವಸ್ಥಾನ, ಗಾಂಧಿಚೌಕ, ಮೋಚಿಗಡ್ಡಾ, ಬಸವೇಶ್ವರ ವೃತ್ತ ಹಾಗೂ ಹಳೆ ಬಸ್ ನಿಲ್ದಾಣ ಮಾರ್ಗವಾಗಿ ಸಿಪಿಎಸ್ ಶಾಲಾ ಮೈದಾನ ತಲುಪಲಿದೆ. ಸುಮಾರು ೨೦೦೦ಕ್ಕೂ ಹೆಚ್ಚು ಮುತೈದಿಯರು ಕುಂಭಗಳೊAದಿಗೆ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದು, ರೈತರು, ಯುವಕರು ಹಾಗೂ ಬಸವಾದಿ ಶಿವಶರಣರ ಅನುಯಾಯಿಗಳು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಆಯೋಜಕರು ತಿಳಿಸಿದರು.

ಆಯೋಜಕರಾದ ಗುರು ಕಾಮಾ ಹಾಗೂ ಕರಣ ಸುಬೇದಾರ ಸಮಾವೇಶದ ಸಿದ್ಧತೆಗಳ ಕುರಿತು ಮಾಹಿತಿ ನೀಡಿದರು.

“ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಹಕ್ಕಿದೆ”

ಸಮಾವೇಶವನ್ನು ವಿರೋಧಿಸಿ ಕೆಲವರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಆಯೋಜಕರಾದ ಅಡಿವೆಪ್ಪ ಜಾಕಾ, “ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಎಲ್ಲರಿಗೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಹಾಗೂ ಸಮಾವೇಶಗಳನ್ನು ಆಯೋಜಿಸುವ ಹಕ್ಕಿದೆ. ಯಾರಾದರೂ ವಿರೋಧ ವ್ಯಕ್ತಪಡಿಸಿದರೆ ಅದಕ್ಕೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ. ಅವರ ಕೆಲಸ ಅವರಿಗೆ, ನಮ್ಮ ಕೆಲಸ ನಮಗೆ. ಸಚಿವರು ಹಾಗೂ ಶಾಸಕರು ಭಾಗವಹಿಸುವಂತೆ ನಾವು ಆಹ್ವಾನಿಸಿದ್ದೇವೆ” ಎಂದು ಹೇಳಿದರು.

ಹಿಂದೂ ಸಮಾಜದ ಮುಖಂಡ ವಿಜಯ ಪಾಟೀಲ ಮಾತನಾಡಿ, “ಸಮಾಜದಲ್ಲಿ ಒಗ್ಗಟ್ಟು ನಿರ್ಮಿಸಿ, ಒಡೆದು ಹೋಗುತ್ತಿರುವ ಹಿಂದೂ ಸಮಾಜ ಮತ್ತೊಮ್ಮೆ ಗಟ್ಟಿಯಾಗಿ ನಿಲ್ಲಬೇಕು ಎಂಬ ಉದ್ದೇಶದಿಂದ ಈ ಸಮಾವೇಶ ಆಯೋಜಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು” ಎಂದು ಮನವಿ ಮಾಡಿದರು.