ವಿಜಯಪುರ, ಜೂ. 13: ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಬಂದ ಬಳಿಕ ಬಡವರ ಕುರಿತು ಹೆಚ್ಚಿನ ಗಮನ ಹರಿಸಿದ್ದು, ಸರ್ಕಾರಿ ಕಚೇರಿಗಳಲ್ಲಿನ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿದ್ದು, ಒಂದು ರೂಪಾಯಿ ಕೂಡ ನೇರವಾಗಿ ಫಲಾನುಭವಿಗಳ ಅಕೌಂಟಿಗೆ ಯೋಜನೆಯ ಹಣ ಹಾಕಿ, ಭ್ರಷ್ಟಾಚಾರ ರಹಿತ ಆಡಳಿತಕ್ಕೆ ಮುನ್ನುಡಿ ಬರೆಯಲಾಗಿದೆ ಎಂದು ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದು ದಶಕದ ಹಿಂದೆ ದೇಶದಲ್ಲಿ ಕೇವಲ 120 ಸ್ಟಾರ್ಟ್ ಅಪ್‍ಗಳಿದ್ದವು. ಈಗ 1 ಲಕ್ಷಕ್ಕೂ ಅಧಿಕ ಸ್ಟಾರ್ಟ್ ಅಪ್‍ಗಳಿವೆ. ಮೋದಿ ಸರ್ಕಾರ 68 ಲಕ್ಷ ಬೀದಿ ಬದಿ ವ್ಯಾಪಾರಸ್ಥರಿಗೆ ಪಿಎಂ ಸ್ವನಿಧಿ ಯೋಜನೆಯಡಿ ಸಾಲ ಸೌಲಭ್ಯ ಕಲ್ಪಿಸಿದೆ. ಇದರಲ್ಲಿ ಹಿಂದುಳಿದವರಿಗೆ ಶೇ.10ರಷ್ಟು ಮೀಸಲಿಟ್ಟಿದೆ. ಅಲ್ಲದೇ, ಮುದ್ರಾ ಯೋಜನೆಯಲ್ಲಿ ಸಹ ಶೇ.70 ರಷ್ಟು ಜನ ಎಸ್ಸಿ ಎಸ್ಟಿ, ಒಬಿಸಿಯವರಿದ್ದಾರೆ. 4 ವರ್ಷದಲ್ಲಿ 75000 ವೈದ್ಯ ಸೀಟ್ ಹೆಚ್ಚಿಸಿದ್ದೇವೆ. ಇದರಿಂದ ಸಾಮಾನ್ಯರೂ ವೈದ್ಯರಾಗುವ ಕನಸು ಈಡೇರಿಸಿಕೊಳ್ಳುತ್ತಿದ್ದಾರೆ. ಅಲ್ಲದೇ, ಪಿಜಿ ಸೀಟ್ ಅನ್ನು 80000 ಕ್ಕೆ ಹೆಚ್ಚಿಸಿದ್ದೇವೆ ಎಂದರು.
ಇನ್ನು ಪಿಎಂಶ್ರೀ ಯೋಜನೆಯಲ್ಲಿ 16800 ಸರ್ಕಾರಿ ಶಾಲೆಗಳ ಅಭಿವೃದ್ಧಿ ಕೈಗೊಳ್ಳಲಾಗಿದೆ. ಉಡಾನ್ ಯೋಜನೆಯಲ್ಲಿ 1.5 ಕೋಟಿ ಜನ ಲಾಭ ಪಡೆಯುತ್ತಿದ್ದಾರೆ. ಜನರ ವಿಮಾನ ಪ್ರಯಾಣದ ಕನಸು ನನಸಾಗಿದೆ. ವಿಮಾನ ನಿಲ್ದಾಣಗಳ ಸಂಖ್ಯೆ ಈಗ 74 ರಿಂದ 160 ಕ್ಕೆ ಏರಿದೆ. ಆಯುಷ್ಮಾನ್ ಭಾರತ್‍ದಲ್ಲಿ 1.3 ಲಕ್ಷ ಕೋಟಿ ಉಳಿತಾಯವಾಗಿದೆ. 9 ಕೋಟಿ ಜನಕ್ಕೆ ಚಿಕಿತ್ಸೆ ಕೊಟ್ಟಿದ್ದೇವೆ. ದೇಶದಲ್ಲಿ 16000 ಕ್ಕೂ ಹೆಚ್ಚು ಜನೌಷಧಿ ಕೇಂದ್ರಗಳಿದ್ದು, ಇದರಿಂದ 38000 ಕೋಟಿ ಉಳಿತಾಯವಾಗಿದೆ. ಆದರೆ, ಕಾಂಗ್ರೆಸ್ಸಿಗರಿಗೆ ಪ್ರಧಾನಿ ಪದವೇ ಅಲರ್ಜಿ ಇರಬೇಕು. ಹಾಗಾಗಿ ರಾಜ್ಯದಲ್ಲಿ ಪಿಎಂ ಜನೌಷಧಿ ಕೇಂದ್ರ ಬಂದ್ ಮಾಡಿದ್ದಾರೆ. ಆದರೆ, ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸಾಮಾನ್ಯ ಔಷಧಿಗಳೂ ಲಭ್ಯವಾಗುತ್ತಿಲ್ಲ ಎಂದರು.
ಜಮ್ಮು- ಕಾಶ್ಮೀರದಲ್ಲಿ, ಮೋದಿ ಅವರು 10 ಬಾರಿ ಅಧಿಕಾರಕ್ಕೆ ಬಂದರೂ ಆರ್ಟಿಕಲ್ 370 ತೆಗೆಯಲಾಗುವುದಿಲ್ಲ ಎಂದಿದ್ದರು. ಆದರೆ, 2ನೇ ಅವಧಿಯಲ್ಲೇ ಅದನ್ನು ಕಿತ್ತೆಸೆದರು. ಆರ್ಟಿಕಲ್ 370 ತೆಗೆದ ಮೇಲೆ ಅಲ್ಲಿ ಅಭಿವೃದ್ಧಿಯ ಹೊಳೆಯೇ ಹರಿದಿದೆ. ಅಲ್ಲಿನ ನಿವಾಸಿಗಳು ಸುಖೀ ಜೀವನ ನಡೆಸುತ್ತಿದ್ದಾರೆ. ಮೊದಲು ಸೈನಿಕರಿಗೆ ಕಲ್ಲು ಹೊಡೆಯುತ್ತಿದ್ದರು. ಈಗ ಆ ಸ್ಥಿತಿಯಿಲ್ಲ. ಪ್ರಧಾನಿ ಮೋದಿ ಸರ್ಕಾರ ದೇಶ ರಕ್ಷಣೆಗೆ ಬದ್ಧವಾಗಿದೆ. ಇದಕ್ಕೆ ಆಪರೇಷನ್ ಸಿಂಧೂರ್ ಉತ್ತಮ ಉದಾಹರಣೆ ಆಗಿದೆ. ಗಡಿ ಪ್ರದೇಶದಲ್ಲಿ ಸಹ ಉಗ್ರರ ಹುಟ್ಟಡಗಿಸುತ್ತಿದ್ದೇವೆ. ಪಶುಪತಿ-ತಿರುಪತಿ ಟೆರಿರಿಸಂ ರೆಡ್ ಆಗಿತ್ತು. ಆದರೆ ಇಂದು ಶೇ.70ರಷ್ಟು ಭಯೋತ್ಪಾದನೆ ನಿಗ್ರಹವಾಗಿದೆ. 2026ರ ವೇಳೆಗೆ ನಕ್ಸಲಿಸಂ ಅನ್ನೂ ಸಂಪೂರ್ಣ ತೊಡೆದು ಹಾಕುತ್ತೇವೆ. ಸಿಡಿಎಸ್ ರಚನೆ, ರಕ್ಷಣಾ ಪಡೆಗಳಲ್ಲಿನ ಸಮನ್ವಯತೆಯಿಂದ ಇಂದು ಆಪರೇಷನ್ ಸಿಂಧೂರ್ ಯಶಸ್ವಿಯಾಗಿದೆ. ಪಾಕಿಸ್ತಾನದ 11 ವಾಯು ನೆಲೆಗಳಲ್ಲಿ 10ಕ್ಕೆ ಹಾನಿಯಾದ ಬಗ್ಗೆ ಪಾಕಿಸ್ತಾನವೇ ಹೇಳಿದೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಮುಖಂಡರಾದ ವಿಜುಗೌಡ ಪಾಟೀಲ, ಮಾಜಿ ಶಾಸಕರಾದ ರಮೇಶ ಭೂಸನೂರ, ಸೋಮನಗೌಡ ಪಾಟೀಲ ಸಾಸನೂರ ಇತರರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.