
ಬೀದರ:ಡಿ.೩೧:ಭಾಲ್ಕಿ ತಾಲೂಕಿನ ಕೃಷಿ ಇಲಾಖೆ ವ್ಯಾಪ್ತಿಯ ಮೇಹಕರ್ ಗ್ರಾಮದಲ್ಲಿ ಜಲಾಶಯ (ಚೆಕ್ ಡ್ಯಾಂ) ಯೋಜನೆಯಡಿ ಭಾರೀ ಅಕ್ರಮ ಹಾಗೂ ಭ್ರಷ್ಟಾಚಾರ ನಡೆದಿರುವ ಆರೋಪ ಕೇಳಿಬಂದಿದೆ. ಈ ಸಂಬAಧ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ ಮೇತ್ರೆ ಮತ್ತು ಕೃಷಿ ಅಧಿಕಾರಿ ರಾಜೇಂದ್ರ ಯಾಕತಪೂರೆ ವಿರುದ್ಧ ತನಿಖೆ ನಡೆಸಿ ತಕ್ಷಣ ಅಮಾನತು ಮಾಡುವಂತೆ ಇಂಡಿಯನ್ ನ್ಯಾಷನಲ್ ಭೀಮ ಆರ್ಮಿ ಸಂಘಟನೆಗಳ ಮುಖಂಡರು ಜಂಟಿ ಕೃಷಿ ನಿರ್ದೇಶಕರಿಗೆ ದೂರು ಸಲ್ಲಿಸಿದ್ದಾರೆ.
ದೂರಿನ ಪ್ರಕಾರ, ಚೆಕ್ ಡ್ಯಾಂ ಕಾಮಗಾರಿಗೆ ಸೂಕ್ತ ಸ್ಥಳ ಆಯ್ಕೆ ಮಾಡದೇ, ಸಿಮೆಂಟ್ ಪ್ರಮಾಣ ಕಡಿಮೆ ಬಳಸಿ, ಬೋಲ್ಡರ್‌ಗಳಿಂದ ಪಾಯಾ ತುಂಬಿಸಿ ಸರ್ಕಾರದ ಅನುದಾನ ದುರುಪಯೋಗಪಡಿಸಲಾಗಿದೆ. ಸುಮಾರು ೨ ಕೋಟಿ ರೂ. ಅನುದಾನವನ್ನು ಉದ್ದೇಶಪೂರ್ವಕವಾಗಿ ಡ್ರಾ ಮಾಡಿ ತ್ವರಿತವಾಗಿ ಕಾಮಗಾರಿ ಮುಗಿಸಿರುವ ಆರೋಪವೂ ಕೇಳಿಬಂದಿದೆ. ಗುತ್ತಿಗೆದಾರರಿಂದ ಲಂಚ ಪಡೆಯದೇ ಕಾಮಗಾರಿ ನೀಡುವುದಿಲ್ಲ ಎನ್ನುವ ನೇರ ಬೇಡಿಕೆಯೂ ಇದ್ದು, ಪ್ರತಿ ಚೆಕ್ ಡ್ಯಾಂ ಕೆಲಸಕ್ಕೆ ಲಕ್ಷಾಂತರ ರೂ. ಅಕ್ರಮ ಹಣ ವಸೂಲಿ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಹಿಂದೆ ಔರಾದ ತಾಲೂಕಿನಲ್ಲಿಯೂ ಇದೇ ರೀತಿಯ ಭ್ರಷ್ಟಾಚಾರ ನಡೆದಿತ್ತು ಎಂಬ ಆರೋಪವಿದ್ದು, ಪ್ರಸ್ತುತ ನಡೆಯುತ್ತಿರುವ ಕಾಮಗಾರಿಯನ್ನು ತಕ್ಷಣ ಸ್ಥಗಿತಗೊಳಿಸಿ ಮೂರನೇ ಪಕ್ಷದ ಮೂಲಕ ಗುಣಮಟ್ಟ ಪರಿಶೀಲನೆ ನಡೆಸಬೇಕು ಎಂದು ಆಗ್ರಹಿಸಲಾಗಿದೆ. ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಲೋಕಾಯುಕ್ತರಿಗೆ ದೂರು ಸಲ್ಲಿಸುವುದರ ಜೊತೆಗೆ, ಸಂಬAಧಿತ ಸಂಘಟನೆಗಳ ವತಿಯಿಂದ ಸಾಂಕೇತಿಕ ಧರಣಿ ನಡೆಸಲಾಗುವುದು ಎಂದು ಇಂಡಿಯನ್ ನ್ಯಾಷನಲ್ ಭೀಮ ಆರ್ಮಿ ಸಂಘಟನೆಗಳ ಮುಖಂಡರು ಎಚ್ಚರಿಕೆ ನೀಡಲಾಗಿದೆ.
ಈ ಸಂದರ್ಭದಲ್ಲಿ ರಾಜ್ಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ದೀಲಿಪಕುಮಾರ ವರ್ಮಾ, ರಾಜ್ಯ ಉಪಾಧ್ಯಕ್ಷರು ಅಶೋಕ ಭಾವಿದೊಡ್ಡಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರಶಾಂತ ಭಾವಿದೊಡ್ಡಿ, ಅನೀಲಕುಮಾರ ಬಾಜಿ, ಭೀಮರಾವ ಖಂದಾರೆ, ಜಗನ್ನಾಥ ಹೊನ್ನಾ, ಭಗತ್ ಎಸ್.ಶಿಂಧೆ, ಸಚೀನ ಶಿಂಧೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.























