
ಕಲಬುರಗಿ,ಫೆ.17:ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿರುವಾಗಲೇ ಅಕಾಲಿಕ ನಿಧನ ಹೊಂದಿದ ನೌಕರರ ಅವಲಂಬಿತ ಕುಟುಂಬಗಳಿಗೆ ಆರ್ಥಿಕ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಸೋಮವಾರ ನಗರದ ಕೆಕೆಆರ್‍ಟಿಸಿ ಪ್ರಧಾನ ಕಚೇರಿಯಲ್ಲಿ ಆಂತರಿಕ ಗುಂಪು ವಿಮೆ ಯೋಜನೆಯಡಿ ಸಹಾಯಧನ ಪರಿಹಾರದ ಚೆಕ್ ವಿತರಿಸಲಾಯಿತು.
ಈ ಕಾರ್ಯಕ್ರಮದಲ್ಲಿ, ನಿಗಮದ ಅಧ್ಯಕ್ಷ ಅರುಣಕುಮಾರ ಪಾಟೀಲ ಹಾಗೂ ವ್ಯವಸ್ಥಾಪಕ ನಿರ್ದೇಶಕಿ ಡಾ. ಬಿ ಸುಶೀಲ್ ಅವರು ಮೃತ ನೌಕರರ 23 ವಾರಸುದಾರರಿಗೆ (ಪ್ರತಿಯೊಬ್ಬ ವಾರಸುದಾರರಿಗೆ 10 ಲಕ್ಷ ರೂ.ರಂತೆ) ಒಟ್ಟು 2.30 ಕೋಟಿ ರೂ.ಗಳ ಪರಿಹಾರದ ಮೊತ್ತದ ಚೆಕ್‍ನ್ನು ಹಸ್ತಾಂತರಿಸಿದರು.
ಸಾರಿಗೆ ನಿಗಮದ ವ್ಯಾಪ್ತಿಯ ಕಲಬುರಗಿ ವಿಭಾಗ-1 ಹಾಗೂ ವಿಭಾಗ-2ರಲ್ಲಿ ಕಾರ್ಯನಿರ್ವಹಿಸುತ್ತಿದ್ದ ನೌಕರರ ಪೈಕಿ ಇತ್ತೀಚೆಗೆ ನಿಧನರಾದ ಚೆನ್ನಮಲ್ಲಪ್ಪ ಅವರ ಪತ್ನಿ ಶೋಭಾ, ಬಾಬು ಅವರ ಪತ್ನಿ ಶಾಂತಾಬಾಯಿ, ವೀರಭದ್ರಯ್ಯ ಅವರ ಪತ್ನಿ ತನುಜಾ, ಪ್ರದೀಪಕುಮಾರ್ ಪತ್ನಿ ಜ್ಯೋತಿ, ಶರಣು ಅವರ ಪತ್ನಿ ಶಾಂತಾಬಾಯಿ, ತಾಯಿ ಸಾವಿತ್ರಿ ಹಾಗೂ ಮಗಳು ಭಾಗ್ಯಲಕ್ಷ್ಮಿ, ಸಿದ್ದೇಶ್ವರ ಅವರ ಅಣ್ಣಂದಿರಾದ ಹಣಮಂತ, ಅಶೋಕ್ ಹಾಗೂ ತಂಗಿ ಭಾರತಿ, ಜಗನ್ನಾಥ ಅವರ ಪತ್ನಿ, ದಯಾನಂದ ಅವರ ಪತ್ನಿ ಮಹಾನಂದ, ಚಂದ್ರಕಾಂತ್ ಅವರ ಪತ್ನಿ ರಾಜೇಶ್ವರಿ, ಮಲ್ಲಪ್ಪ ಅವರ ಪತ್ನಿ ಗುರುಬಾಯಿ, ಮಹಾದೇವಪ್ಪ ಅವರ ಪತ್ನಿ ಲಲಿತಾ ಕುಮಾರಿ, ಮಾಹಾರುದ್ರಾ ಅವರ ಪತ್ನಿ ಪವಿತ್ರಭಾಯಿ, ಗೋಪಾಲ್ ಅವರ ಪತ್ನಿ ಲಕ್ಮಿ ಅವರು ಸೇರಿ ವಿಜಯಪುರ, ಕೊಪ್ಪಳ, ರಾಯಚೂರು, ಬಳ್ಳಾರಿ, ಬೀದರ್ ಹಾಗೂ ಯಾದಗಿರಿ ವಿಭಾಗಗಳ ಒಟ್ಟು 23 ನೌಕರರ ಕುಟುಂಬಸ್ಥರಿಗೆ ಪರಿಹಾರ ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷ ಅರುಣ್ ಪಾಟೀಲ್, ಸಂಸ್ಥೆಯ ಬೆಳವಣಿಗೆಗೆ ಶ್ರಮಿಸಿದ ನೌಕರರ ಅಗಲಿಕೆ ತುಂಬಲಾರದ ನಷ್ಟವಾಗಿದೆ. ಕುಟುಂಬ ನಡೆಸುತ್ತಿದ್ದ ಆಧಾರವನ್ನೇ ಕಳೆದುಕೊಂಡ ಕುಟುಂಬಕ್ಕೆ ಪರಿಹಾರದ ಚೆಕ್ ದೊಡ್ಡದಲ್ಲ. ಅವರ ಕುಟುಂಬದವರ ಸಂಕಷ್ಟಕ್ಕೆ ಸ್ಪಂದಿಸುವುದು ನಮ್ಮ ಜವಾಬ್ದಾರಿಯಾಗಿದ್ದು, ವಿಮಾ ಯೋಜನೆಯ ಮೂಲಕ ಆರ್ಥಿಕ ನೆರವು ನೀಡಲಾಗುತ್ತಿದೆ ಎಂದರು.
ನಿಗಮವು ಯಾವಾಗಲೂ ನೌಕರರ ಕುಟುಂಬದ ಜತೆಗೆ ನಿಲ್ಲಲಿದೆ. ನಿಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ, ಭವಿಷ್ಯ ರೂಪಿಸುವ ಕಡೆಗೆ ಗಮನ ನೀಡಿ, ಏನೇ ಸಮಸ್ಯೆ ಇದ್ದರು, ಸಹ ಸಾರಿಗೆ ನಿಗಮದ ಸಂಪರ್ಕದಲ್ಲಿ ಇರಿ, ಸಂಸ್ಥೆ ನಿಮ್ಮೊಂದಿಗೆ ಇರಲಿದೆ ಎಂದು ಭರವಸೆಯ ನೀಡಿದರು.
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಡಾ. ಬಿ. ಸುಶೀಲ ಅವರು ಮಾತನಾಡಿ, ಕರ್ತವ್ಯ ಸಲ್ಲಿಸುತ್ತಿರುವಾಗಲೇ ನಿಧನವಾದ ಕುಟುಂಬಗಳಿಗೆ ಈ ಹಿಂದೇ ಆಂತರಿಕ ಗುಂಪು ವಿಮೆ ಯೋಜನೆಯಡಿ 10 ಲಕ್ಷ ಪರಿಹಾರ ನೀಡಲಾಗುತ್ತಿತ್ತು. ಅದನ್ನು ಮರುಪರಿಶೀಲಿಸಿ, ಬೋರ್ಡ್ ಸಭೆಯಲ್ಲಿ ತೀರ್ಮಾನಿಸಿ 12.50 ಲಕ್ಷಕ್ಕೆ ಏರಿಸಲಾಗಿದೆ. ಫೆಬ್ರವರಿ 1ರಿಂದ ಈ ನಿಯಮ ಅನ್ವಯ ಆಗಲಿದೆ. ನಿಗಮದ ಆರ್ಥಿಕ ಪರಿಸ್ಥಿತಿ ನೋಡಿಕೊಂಡು ಪರಿಹಾರ ಮೊತ್ತ ನೀಡಲಾಗುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕೆಕೆಆರ್‍ಟಿಸಿ ಹಿರಿಯ ಅಧಿಕಾರಿಗಳಾದ ಸುನೀಲಕುಮಾರ್ ಚಂಡ್ರಕಿ, ಗಂಗಾಧರ್, ಸಂತೋμï ಗೊಗೇರಿ, ಚಂದ್ರಕಾಂತ್ ಪುಲಾರೆ, ಬಸವರಾಜ್ ಬೆಳಗಾವಿ, ಜಗದೀಶ್, ಬೋರಯ್ಯ, ಮಹಿಪಾಲ್ ಬೇಗಾರ್ ಸೇರಿ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
























