ಸಹಕಾರ ರಂಗ ರಾಜಕೀಯದಿಂದ ಕಲುಷಿತ- ದಯಾನಂದ ಕಳವಳ

ಕೋಲಾರ,ನ,೨೯-ಕೆಸಿ ವ್ಯಾಲಿ ಯೋಜನೆಯಿಂದ ಕೆರೆಗಳಿಗೆ ನೀರು ಹರಿದು ವಾತಾವರಣ ಕಲುಶಿತಗೊಂಡಿರುವ ರೀತಿಯಲ್ಲೇ ಸಹಕಾರ ರಂಗವೂ ಸಹ ರಾಜಕೀಯದಿಂದ ಕಲುಷಿತಗೊಂಡಿದೆ. ಕೆಲ ರಾಜಕಾರಣಿಗಳ ಪಾಲಿಗೆ ಬ್ಯಾಂಕ್ ಗಂಜಿ ಕೇಂದ್ರವಾಗಿ ಮಾರ್ಪಟ್ಟಿದೆ ಎಂದು ಸಂಷಿದ ಅಧ್ಯಕ್ಷ ಕಡಗಟ್ಟೂರು ಕೆ.ವಿ.ದಯಾನಂದ ಕಳವಳ ಬೇಸರ ವ್ಯಕ್ತಪಡಿಸಿದರು.


ತಾಲೂಕಿನ ಕಡಗಟ್ಟೂರು ವಿವಿದೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಂಷಿದಿಂದ ಶುಕ್ರವಾರ ೬೯ ಮಂದಿ ರೈತರಿಗೆ ೯೭ ಲಕ್ಷ ರೂ. ಬೆಳೆ ಸಾಲದ ಚೆಕ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿ, ಸೊಸೈಟಿಗಳಿಗೆ ಹಣಕಾಸು ಹೊಂದಿಸುವ ಏಜೆನ್ಸಿಯಾಗಿದ್ದ ಬ್ಯಾಂಕ್ ಪರಿಸ್ಥಿತಿ ಹೇಳಿಕೊಳ್ಳಲಾಗದ ಪರಿಸ್ಥಿತಿಯಲ್ಲಿದೆ ಎಂದರು.
ಡಿಸಿಸಿ ಬ್ಯಾಂಕ್ ಕೆಲ ರಾಜಕಾರಣಿಗಳ ಪಾಲಿಕೆ ಗಂಜಿ ಕೇಂದ್ರವಾಗಿದ್ದರಿಂದಲೇ ರೈತರು, ಮಹಿಳೆಯರು ಸಾಲ ಸೌಲಭ್ಯಗಳಿಂದ ವಂಚನೆ ಒಳಗಾಗಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.


ಇಚೆಗೆ ನಡೆದ ಡಿಸಿಸಿ ಬ್ಯಾಂಕಿನ ಆಡಳಿತ ಮಂಡಳಿ ನಿರ್ದೇಶಕರಾಗಿ ಎರಡೂ ಜಿಲ್ಲೆಗಳಿಂದ ೩ ಮಂದಿ ಶಾಸಕರು ಸಹ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಅವರಿಗ್ಯಾರಿಗೂ ರೈತರಿಗೆ ಸಹಾಯ ಮಾಡುವ ಅಲೋಚನೆಯಿಲ್ಲ. ಕಾಳಜಿಯಿದಿದ್ದರೆ ಜಿಬಿಎಂ ರದ್ದಾಗಿದ ದಿನವೇ ಧ್ವನಿ ಎತ್ತುತ್ತಿದ್ದರು ಎಂದರು.


ಒಂದೇ ಪಕ್ಷದ ಬೆಂಬಲಿತ ನಿರ್ದೇಶಕರಲ್ಲಿ ಎರಡು ಗುಂಪುಗಳಾಗಿವೆ. ಒಂದು ಗುಂಪು ಸಾಲ ಪಾವತಿ ಮಾಡಿ ಎಂದರೆ, ಇನ್ನೊಂದು ಗುಂಪು ಸಾಲ ಕಟ್ಟಬೇಡಿ, ಮನ್ನಾ ಆಗುತ್ತದೆ ಎಂದು ಹೇಳುತ್ತಾರೆ. ಈ ರೀತಿ ದಿಕ್ಕು ತಪ್ಪಿಸಿ ಬ್ಯಾಂಕ್ ಪಥನಕ್ಕೆ ಕಾರಣರಾಗುತ್ತಿದ್ದಾರೆ ಎಂದು ದೂರಿದರು.


ಡಿಸಿಸಿ ಬ್ಯಾಂಕಿನಲ್ಲಿ ಇಷ್ಟು ದಿನ ಸೂಕ್ತ ಎಂಡಿ ಇರಲಿಲ್ಲ. ಆಡಳಿತಾಧಿಕಾರಿ ಬೆಂಗಳೂರಿನಲ್ಲಿ ಇರುವುದರಿಂದ ಕಡತ ವಿಲೇವಾರಿ ಆಗುವುದು ತಡವಾಗುತ್ತಿದೆ. ಇದೀಗ ಸರ್ಕಾರ ಒಳ್ಳೆ ಎಂಡಿ ಅವರನ್ನು ನೇಮಕ ಮಾಡಿದ್ದು ಸ್ಪಂದನೆ ದೊರೆಯುತ್ತಿದೆ. ಬ್ಯಾಂಕ್ ಇತಿಹಾಸದಲ್ಲಿ ಕಡಿಮೆ ಅವಧಿಯಲ್ಲಿ ಸಾಲ ಮಂಜೂರು ಮಾಡುವುದು ಕಡಗಟ್ಟೂರಿನಲ್ಲಿ ಮಾತ್ರ. ಇದಕ್ಕೆ ರೈತರು, ಮಹಿಳೆಯರು ನೀಡಿರುವ ಶಕ್ತಿ ಎಂದು ಬಣ್ಣಿಸಿದರು.


ಬ್ಯಾಂಕ್ ಹಾಗೂ ಹಾಲು ಒಕ್ಕೂಟ ಎರಡೂ ಜಿಲ್ಲೆಗಳ ಎರಡು ಕಣ್ಣುಗಳಾಗಿದ್ದವು. ಇದರಿಂದ ಸಾರ್ವಜನಿಕರಿಗೆ ಏನಾದರು ತೊಂದರೆಯಾದರೆ ಖುದ್ದು ವೆಂಕಟಗಿರಿಯಪ್ಪ, ಎಂ.ವಿ.ಕೃಷ್ಣಪ್ಪ, ಬೇರೈಗೌಡ. ಚಿಂತಾಮಣಿ ಚೌಡರೆಡ್ಡಿ, ಶ್ರೀನಿವಾಸಗೌಡರು ಹೋರಾಟ ಮಾಡಿ ಅನುಕೂಲ ಮಾಡಿಸುತ್ತಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಕೆಲ ರಾಜಕಾರಣಿಗಳು ಸ್ವ ಹಿತಕ್ಕಾಗಿ ವ್ಯವಸ್ಥೆಯನ್ನು ಕೆಡಿಸಿಟ್ಟಿದ್ದಾರೆ ಎಂದು ದೂರಿದರು.


ಬ್ಯಾಂಕ್ ವತಿಯಿಂದ ೨ ವರ್ಷದಿಂದ ಸಾಲ ವಿತರಣೆ ಕೆಲಸ ಆಗುತ್ತಿಲ್ಲ. ಆಡಳಿತ ಮಂಡಳಿ ಇಲ್ಲದೆ ಇರುವುದರಿಂದ ಸಾಲ ಮಂಜೂರು, ವಸೂಲಿ ಆಗುತ್ತಿಲ್ಲ. ಅಪೆಕ್ಸ್, ನಬಾರ್ಡ್ ಬ್ಯಾಂಕಿಗೆ ೨೭೦ ಕೋಟಿ ಸುಸ್ತಿಯಾಗಿದೆ. ನೀಡಿರುವ ಸಾಲ ವಸೂಲಿ ಮಾಡದೆ ಇರುವುದರಿಂದ ೬೦ ಕೋಟಿ ನಷ್ಟದಲ್ಲಿ ಇದೆ. ಇನ್ನು ಅಧಿಕಾರಿಗಳು ಜಿಡ್ಡುಗಟ್ಟಿ ಹೋಗಿದ್ದು ಬಡವರ ಪರ ಕಾಳಜಿಯಿಲ್ಲ ಎಂದು ಕಿಡಿಕಾರಿದರು.


ಯಾವುದೇ ಬ್ಯಾಂಕಿನ ಮೇಲೆ ಅವಲಂಬನೆಯಾಗದೆ ಸ್ವಂತ ಬಂಡವಾಳದಿಂದ ರೈತರಿಗೆ, ಮಹಿಳೆಯರಿಗೆ ಸಾಲ ವಿತರಣೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಬ್ಯಾಂಕಿನಿಂದ ಯಾವುದೇ ರೀತಿ ಸಾಲ ಸೌಲಭ್ಯ ದೊರೆಯದಿದ್ದರೆ ಹೋರಾಟ ನಡೆಸಲು ತೀರ್ಮಾನಿಸಿದ್ದು, ಇದಕ್ಕೆ ಪ್ರತಿಯೊಬ್ಬರು ಸಹಕಾರ ನೀಡಬೇಕು ಎಂದು ಕೋರಿದರು.
ಈ ಸಂದರ್ಭದಲ್ಲಿ ಸಂಷಿದ ನಿರ್ದೇಶಕರಾದ ಡೇವಿಡ್, ಸಿ.ಡಿ.ರಾಮಚಂದ್ರ, ಮುಖಂಡರಾದ ಕುಮಾರಚಾರಿ, ನಾಗೇಶ್, ಸಿಇಒ ಮುನೀಶ್ವರಪ್ಪ ಇದ್ದರು.