ತಾಂತ್ರಿಕ, ಅರೆ ವೈದ್ಯಕೀಯ ಸಿಬ್ಬಂದಿಗೆ ನಿರಂತರ ಶಿಕ್ಷಣ ಅತ್ಯವಶ್ಯ

ತುಮಕೂರು, ಆ. ೨೬- ದೇಶದಲ್ಲಿ ಹೆಚ್ಚುತ್ತಿರುವ ಹೃದಯಘಾತ ಪ್ರಕರಣ, ಹೃದಯ ಸಂಬಂಧಿ ಕಾಯಿಲೆ ನಿವಾರಣೆಗೆ ತಾಂತ್ರಿಕ ಮತ್ತು ಅರೆ ವೈದ್ಯಕೀಯ ಸಿಬ್ಬಂದಿಗೆ ನಿರಂತರ ಶಿಕ್ಷಣ ಅಗತ್ಯ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಬಿ.ಎಂ.ಚಂದ್ರಶೇಖರ್ ಹೇಳಿದರು.


ನಗರದ ಸಿರಾ ರಸ್ತೆಯ ಶ್ರೀದೇವಿ ಇನ್ಸ್‌ಟಿಟ್ಯೂಟ್ ಅಫ್ ಅಲೈಡ್ ಹೆಲ್ತ್ ಸೈನ್ಸ್ ಹಾಗೂ ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಆಸ್ಪತ್ರೆ ಸಂಯುಕ್ತಾಶ್ರಯದಲ್ಲಿ ಕಾರ್ಡಿಯೋ ಶೈನ್-೨೦೨೫ “ಕಾರ್ಡಿಯಾಕ್ ಕೇರ್ ಮತ್ತು ಪಫ್ರ್ಯೂಷನ್ ತಂತ್ರಜ್ಞಾನದಲ್ಲಿ ನಾವೀನ್ಯತೆಗಳು ಮತ್ತು ಇತ್ತೀಚಿನ ಪ್ರಗತಿಗಳು” ಕುರಿತು ಏರ್ಪಡಿಸಿದ್ದ ಸಿ.ಎಂ.ಇ. ಕಾರ್ಯಾಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.


ದೇಶದ ಎಲ್ಲ ವೈದ್ಯಕೀಯ ಕಾಲೇಜುಗಳು ಇಂತಹ ಪ್ರಯತ್ನ ನಡೆಸಿ, ಹೃದಯ ಸಂಬಂಧಿ ಕಾಯಿಲೆಗಳನ್ನು ತಡೆಗಟ್ಟಲು ಹಾಗೂ ದೇಶದ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ರೂಪಿಸುವ ಕಾರ್ಯಕ್ರಮ ಬಹಳ ಪ್ರಯೋಜನಕಾರಿ ಎಂದು ಹೇಳಿದರು.


ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ್ದ ಶ್ರೀದೇವಿ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಎಂ.ಆರ್. ಹುಲಿನಾಯ್ಕರ್ ಮಾತನಾಡಿ, ರೋಗ ಗುಣಪಡಿಸುವಲ್ಲಿ ಅರೆ ವೈದ್ಯಕೀಯ ಸಿಬ್ಬಂದಿ ಪಾತ್ರ ಬಹಳ ಮುಖ್ಯವಾಗಿದೆ. ನರರೋಗ, ಹೃದ್ರೋಗ ತಜ್ಞರು ಸೇರಿ ಶ್ರಮವಹಿಸಿ ಚಿಕಿತ್ಸೆ ನೀಡಿದರೆ ಪರಿಣಾಮಕಾರಿಯಾಗುತ್ತದೆ ಎಂದರು.


ಶ್ರೀದೇವಿ ವೈದ್ಯಕೀಯ ಮಹಾ ವಿದ್ಯಾಲಯದ ವೈದ್ಯಕೀಯ ನಿರ್ದೇಶಕ ಡಾ. ರಮಣ್ ಎಂ. ಹುಲಿನಾಯ್ಕರ್ ಮಾತನಾಡಿ, ಕೇವಲ ವೈದ್ಯರಿಂದಲೇ ಆಸ್ಪತ್ರೆಯನ್ನು ಸಮರ್ಪಕವಾಗಿ ಪರಿಣಾಮಕಾರಿಯಾಗಿ ನಡೆಸಲು ಸಾಧ್ಯವಾಗುವುದಿಲ್ಲ. ಆಸ್ಪತ್ರೆ ಯಶಸ್ಸಿನಲ್ಲಿ ಅರೆ ವೈದ್ಯಕೀಯ ಸಿಬ್ಬಂದಿಯ ಪಾಲು ಶೇ. ೬೦ ಕ್ಕಿಂತಲೂ ಹೆಚ್ಚಾಗಿದೆ. ರೋಗ ಪತ್ತೆ ಮತ್ತು ಚಿಕಿತ್ಸಾ ವಿಧಾನದಲ್ಲಿ ಹೊಸ ಆವಿಷ್ಕಾರಗಳನ್ನು ತಂತ್ರಜ್ಞರು ಮತ್ತು ವೈದ್ಯಕೀಯ ವಿದ್ಯಾರ್ಥಿಗಳು ಕಲಿಯಬೇಕು ಎಂದು ಹೇಳಿದರು.


ಶ್ರೀದೇವಿ ಚಾರಿಟಬಲ್ ಟ್ರಸ್ಟ್‌ನ ಟ್ರಸ್ಟಿ ಹಾಗೂ ನೇತ್ರ ತಜ್ಞೆ ಡಾ.ಲಾವಣ್ಯ ಮಾತನಾಡಿ, ಬೊಜ್ಜು, ಬಿಪಿ ಮತ್ತು ಒತ್ತಡದ ಜೀವನಶೈಲಿಯ ವಿವಿಧ ಒತ್ತಡಗಳಿಂದಾಗಿ ಇತ್ತೀಚಿನ ದಿನಗಳಲ್ಲಿ ಹೃದಯಘಾತ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿದೆ. ನಿರಂತರ ಕಲಿಕೆ ಶಿಕ್ಷಣ ವೃತ್ತಿ ನೈಪುಣ್ಯತೆ ಸಾಧಿಸಲು ಹೆಚ್ಚು ಅನುಕೂಲವಾಗುತ್ತದೆ ಎಂದು ಅಭಿಪ್ರಾಯಪಟ್ಟರು.


ಸಂಪನ್ಮೂಲ ವ್ಯಕ್ತಿಗಳಾಗಿ ತಮಿಳುನಾಡಿನ ತಂಜಾವೂರಿನ ಅಪೆಕ್ಸ್ ಹೃದಯ ಆಸ್ಪತ್ರೆಯ ಹಿರಿಯ ವೈದ್ಯರಾದ ಡಾ.ರವಿಶಂಕರ್, ತುಮಕೂರಿನ ಹೃದಯ ರೋಗ ಚಿಕಿತ್ಸಾ ಹಿರಿಯ ವೈದ್ಯರಾದ ಡಾ. ನೀಲೇಶ್‌ಕುಮಾರ್ ಎಸ್ ಷಾ, ಬೆಂಗಳೂರಿನ ಅಪೋಲೋ ಆಸ್ಪತ್ರೆಯ ರೋಬೋಟಿಕ್ ಕಾರ್ಡಿಯಾಕ್ ಹಿರಿಯ ವೈದ್ಯರಾದ ಡಾ.ಭರತ್‌ಕುಮಾರ್ ಮೋಹನ್‌ದಾಸ್ ಹಾಗೂ ಬೆಂಗಳೂರಿನ ಅಪೋಲೋ ಆಸ್ಪತ್ರೆಯ ಹಿರಿಯ ವ್ಯವಸ್ಥಾಪಕರಾದ ಸೆಂಥಿಲ್‌ಕುಮಾರನ್ ಧನಕೋಟಿ ಮತ್ತಿತರರು ಭಾಗವಹಿಸಿದ್ದರು.
ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ೩೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು, ತಂತ್ರಜ್ಞರು ಭಾಗಿಯಾಗಿದ್ದರು. ೫ಗೋಷ್ಠಿಗಳು ಜರುಗಿದ್ದು ಈ ವಿಷಯಕ್ಕೆ ಸಂಬಂಧಪಟ್ಟಂತೆ ೬೦ಕ್ಕೂ ಹೆಚ್ಚು ವೈದ್ಯಕೀಯ ವಿದ್ವತ್ ಪ್ರಬಂಧಗಳನ್ನು ಮಂಡಿಸಲಾಯಿತು.


ಕಾರ್ಯಕ್ರಮದಲ್ಲಿ ಶ್ರೀದೇವಿ ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕ ಎಂ.ಎಸ್.ಪಾಟೀಲ್, ಶ್ರೀದೇವಿ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಂ.ಎಲ್.ಹರೇಂದ್ರಕುಮಾರ್, ಶ್ರೀದೇವಿ ಆಸ್ಪತ್ರೆಯ ಹೃದಯ ರೋಗ ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ.ಎಸ್.ಸುರೇಶ್, ಶ್ರೀದೇವಿ ಆಸ್ಪತ್ರೆ ಅಧೀಕ್ಷಕ ಡಾ.ಮೋಹನ್‌ಕುಮಾರ್, ಶ್ರೀದೇವಿ ಪ್ಯಾರಾಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಸಿ.ಕೃಷ್ಣ, ಉಪಪ್ರಾಂಶುಪಾಲರಾದ ಡಾ.ಸಿ.ಪಿ.ಚಂದ್ರಪ್ಪ ಸೇರಿದಂತೆ ವಿವಿಧ ವಿಭಾಗದ ಮುಖ್ಯಸ್ಥರು ಹಾಗೂ ಬೋಧಕ ಬೋಧಕೇತರ ಮತ್ತಿತರರು ಪಾಲ್ಗಗೊಂಡಿದ್ದರು.