ಗ್ರಾಹಕರ ರಕ್ಷಣೆ ಎಲ್ಲರ ಹೊಣೆ: ಕೆ.ಬಿ.ಜಯಣ್ಣ

ತುಮಕೂರು, ಡಿ. ೨೭- ಗ್ರಾಹಕರ ಹಕ್ಕುಗಳ ರಕ್ಷಣೆ ಎಲ್ಲರ ಹೊಣೆಯಾಗಿದೆ. ಗ್ರಾಹಕರು ತಮ್ಮ ಹಕ್ಕುಗಳು ಮತ್ತು ಜವಾಬ್ದಾರಿಗಳ ಬಗ್ಗೆ ಹೆಚ್ಚಿನ ಜಾಗೃತಿ ಬೆಳೆಸಿಕೊಳ್ಳಬೇಕು ಎಂದು ವಿದ್ಯಾವಾಹಿನಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ಕೆ.ಬಿ.ಜಯಣ್ಣ ಹೇಳಿದರು.


ನಗರದ ವೈಸಿರಿ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಅಂಡ್ ಟೆಕ್ನಾಲಜಿಯಲ್ಲಿ ಎಂಬಿಎ ವಿಭಾಗದ ವತಿಯಿಂದ ಏರ್ಪಡಿಸಿದ್ದ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.


ಗ್ರಾಹಕರು ಎಂದರೆ ನಾವೆಲ್ಲರೂ. ಇಂದಿನ ದಿನಗಳಲ್ಲಿ ನಮ್ಮ ಗ್ರಾಹಕ ಹಕ್ಕುಗಳ ಬಗ್ಗೆ ತಿಳಿದುಕೊಳ್ಳುವುದು ಅತ್ಯಂತ ಮುಖ್ಯ. ಖರೀದಿದಾರನ ಯೋಗ ಕ್ಷೇಮಕ್ಕಾಗಿ ಗ್ರಾಹಕ ಹಕ್ಕುಗಳು ಅನಿವಾರ್ಯ. ಈ ಹಕ್ಕುಗಳ ಬಗ್ಗೆ ಅಜ್ಞಾನದಿಂದ ಇರುವುದು ದುರುಪಯೋಗಕ್ಕೆ ದಾರಿ ಮಾಡಿಕೊಡಬಹುದು. ಗ್ರಾಹಕರ ರಕ್ಷಣೆ ಸಮಾಜದ ಧ್ವನಿಯಾದಾಗ ಮಾತ್ರ ಸಂಪೂರ್ಣ ಸಂರಕ್ಷಣೆ ಸಾಧ್ಯ. ಪ್ರತಿ ವರ್ಷ ಡಿಸೆಂಬರ್ ೨೪ನ್ನು ರಾಷ್ಟ್ರೀಯ ಗ್ರಾಹಕ ಹಕ್ಕುಗಳ ದಿನವಾಗಿ ಆಚರಿಸಲಾಗುತ್ತದೆ. ಈ ಜಾಗೃತಿಯನ್ನು ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳುವುದು ಅತ್ಯಗತ್ಯ ಎಂದು ಹೇಳಿದರು.


ಗ್ರಾಹಕ ಹಕ್ಕುಗಳ ಶಿಕ್ಷಣ ಮತ್ತು ಜಾಗೃತಿ ಟ್ರಸ್ಟ್‌ನ ಸಂಸ್ಥಾಪಕ ವೈ.ಜಿ. ಮುರಳೀಧರನ್ ಮಾತನಾಡಿ, ಗ್ರಾಹಕ ಎಚ್ಚರವಾಗಿದ್ದರೆ ಮಾರುಕಟ್ಟೆ ನ್ಯಾಯಯುತವಾಗುತ್ತದೆ. ಗ್ರಾಹಕರು ಮೊದಲು ತಮ್ಮ ಕರ್ತವ್ಯಗಳನ್ನು ಅರಿತುಕೊಳ್ಳಬೇಕು. ಖರೀದಿಯ ಸಂದರ್ಭದಲ್ಲಿ ಗುಣಮಟ್ಟದ ಚಿಹ್ನೆಗಳನ್ನು ಪರಿಶೀಲಿಸುವುದು, ಬಿಲ್ ಮತ್ತು ವಾರಂಟಿ ಸಂಗ್ರಹಿಸುವುದು ಮೂಲಭೂತ ಕರ್ತವ್ಯಗಳು ಎಂದು ವಿವರಿಸಿದರು.


ಗ್ರಾಹಕ ನ್ಯಾಯಾಲಯಗಳು ಸಾಮಾನ್ಯ ಜನರಿಗಾಗಿಯೇ ಇವೆ. ಮಧ್ಯಸ್ಥಿಕೆಯ ಮೂಲಕ ಸಣ್ಣ ದಾವೆಗಳಿಗೆ ತ್ವರಿತ ನ್ಯಾಯ ದೊರೆಯುತ್ತದೆ ಎಂದ ಅವರು, ವಿದ್ಯಾರ್ಥಿಗಳು ಭವಿಷ್ಯದಲ್ಲಿ ವ್ಯವಸ್ಥಾಪಕರಾಗುವ ಜತೆಗೆ ಸಮಾಜದಲ್ಲಿ ಗ್ರಾಹಕ ಜಾಗೃತಿಯ ಬೀಜ ಬಿತ್ತುವ ದೂತರಾಗಬೇಕು ಎಂದು ಕಿವಿ ಮಾತು ಹೇಳಿದರು.


ಎಂಬಿಎ ವಿಭಾಗದ ನಿರ್ದೇಶಕ ಡಾ. ಪ್ರಸನ್ನ ಕುಮಾರ್ ಟಿ.ಎಂ. ಪ್ರಾಸ್ತಾವಿಕ ನುಡಿಗಳನ್ನಾಡಿ, ಗ್ರಾಹಕರಿಗೆ ನ್ಯಾಯ ದೊರೆತಾಗ ಮಾತ್ರ ನಿಜವಾದ ಜನತಂತ್ರ, ವ್ಯಾಪಾರ ಮತ್ತು ವ್ಯವಹಾರಗಳಲ್ಲಿ ಸಮತೋಲನ ಸಾಧ್ಯ. ಆಧುನಿಕ ಮಾರುಕಟ್ಟೆಯಲ್ಲಿ ಮೋಸದ ಪದ್ಧತಿಗಳು ಹೆಚ್ಚಾಗಿರುವ ಈ ಸಂದರ್ಭದಲ್ಲಿ ಭವಿಷ್ಯದ ನಿರ್ವಾಹಕರಾಗುತ್ತಿರುವ ವಿದ್ಯಾರ್ಥಿಗಳಿಗೆ ಗ್ರಾಹಕ ಕಾಯ್ದೆಯ ಜ್ಞಾನ ಅತ್ಯಗತ್ಯ ಎಂದರು.


ಕಾರ್ಯಕ್ರಮದಲ್ಲಿ ಸಂಸ್ಥೆಯ ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.