
ತುಮಕೂರು, ಏ. ೪- ತುಮಕೂರು ಗ್ರಾಮಾಂತರ ಕ್ಷೇತ್ರದ ಸರ್ಕಾರಿ ಶಾಲೆಗಳನ್ನು ಸಸಜ್ಜಿತವಾಗಿ ನಿರ್ಮಾಣ ಮಾಡಿ, ಅತ್ಯಾಧುನಿಕ ಸೌಕರ್ಯ ಒದಗಿಸಿ ದೇಶದಲ್ಲೇ ಮಾದರಿ ಶಾಲೆಗಳನ್ನಾಗಿ ಮಾಡಬೇಕು ಎಂದು ತಾವು ಸಂಕಲ್ಪ ಮಾಡಿದ್ದು, ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ ಎಂದು ಶಾಸಕ ಬಿ.ಸುರೇಶ್‌ಗೌಡ ಮನವಿ ಮಾಡಿದರು.
ಚೆನ್ನೈ- ಬೆಂಗಳೂರು ಕಾರಿಡಾರ್ ಸಿಎಸ್‌ಆರ್ ನಿಧಿಯಡಿ ತಾಲ್ಲೂಕಿನ ಬೆಳ್ಳಾವಿ ಕೆಪಿಎಸ್ ಶಾಲೆ ಆವರಣದಲ್ಲಿ ೭೧ ಲಕ್ಷ ರೂ. ವೆಚ್ಚದಲ್ಲಿ ನೂತನ ಕೊಠಡಿಗಳ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಕಾಲ ಮಿತಿಯಲ್ಲಿ ಸುಸ್ಸಜ್ಜಿತವಾದ ಗುಣಮಟ್ಟದ ಕಾಮಗಾರಿಯನ್ನು ಮುಂದಿನ ಶೈಕ್ಷಣಿಕ ವರ್ಷದಲ್ಲಿ ಪೂರ್ಣಗೊಳಿಸಿ ಮಕ್ಕಳಿಗೆ ಅನುಕೂಲ ಮಾಡಿಕೊಡುವಂತೆ ಗುತ್ತಿಗೆದಾರರಿಗೆ ಹಾಗೂ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ತಮ್ಮ ಕ್ಷೇತ್ರದ ಯಾವುದೇ ಸರ್ಕಾರಿ ಶಾಲೆಗಳಲ್ಲಿ ಯಾವುದೇ ರೀತಿಯ ಕೊರತೆ ಆಗದ ರೀತಿಯಲ್ಲಿ ಎಲ್ಲ ಸೌಕರ್ಯಗಳನ್ನು ಒದಗಿಸುವುದಲ್ಲದೆ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಶಿಕ್ಷಕರಿಗೆ ಸೂಚನೆ ನೀಡಿದರು.
ಸರ್ಕಾರಿ ಶಾಲೆಗಳಲ್ಲಿ ಸುಸಜ್ಜಿತ ಕಟ್ಟಡ, ಪ್ರತಿಭಾವಂತ ಶಿಕ್ಷಕರು, ಅಲ್ಲದೆ ಮಕ್ಕಳಿಗೆ ಸರ್ಕಾರದಿಂದ ವಿವಿಧ ಸವಲತ್ತುಗಳನ್ನು ನೀಡಲಾಗುತ್ತಿದೆ. ಹೀಗಿರುವಾಗ ಸರ್ಕಾರಿ ಶಾಲೆಗಳಲ್ಲಿ ಅತ್ಯುತ್ತಮ ಫಲಿತಾಂಶ ಬರಬೇಕು. ಇದಕ್ಕಾಗಿ ಶಿಕ್ಷಕರು, ಪೋಷಕರು, ಎಸ್‌ಡಿಎಂಸಿ ಸದಸ್ಯರು ಕಾಳಜಿ ವಹಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಬೆಳ್ಳಾವಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮಾಜಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಶಾಲೆ ಮುಖ್ಯ ಶಿಕ್ಷಕಿ ರೇಖಾವತಿ, ಶಿಕ್ಷಕರುಗಳು ಮುಖಂಡರಾದ ನರಸಿಂಹಮೂರ್ತಿ, ಮಲ್ಲಿಕಾರ್ಜುನ, ದಿನೇಶ್, ರವಿಶಂಕರ್, ಕೃಷ್ಣಪ್ಪ, ಕಾರ್ಯಪಾಲಕ ಅಭಿಯಂತರ ಅನಿಲ್ ಕುಮಾರ್ ರಾಥೋಡ್, ಸಹಾಯಕ ಕಾರ್ಯಪಾಲಕ ಅಭಿಯಂತರ ಪ್ರಸನ್ನ ಕುಮಾರ್, ಸಹಾಯಕ ಅಭಿಯಂತರರಾದ ಜನಾರ್ಧನ್, ಶಶಿಕುಮಾರ್, ಗುತ್ತಿಗೆದಾರರಾದ ಉಮೇಶ್, ಮಧುಸೂಧನ್ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.





















