
ವಿಜಯಪುರ, ಜೂ. 28:ಕ್ಯಾನ್ಸರ್ ನಿಂದ ಬಳಲುತ್ತಿರುವವರಿಗೆ ಅತ್ಯಾಧುನಿಕ ತಂತ್ರಜ್ಞಾನ ಚಿಕಿತ್ಸೆ ಕಲ್ಪಿಸಲು ಬಿ.ಎಲ್.ಡಿ.ಇ ಆಸ್ಪತ್ರೆ ಆವರಣದಲ್ಲಿ ನೂತನ ಕ್ಯಾನ್ಸರ್ ಘಟಕಕ್ಕೆ ಬಿ.ಎಲ್.ಡಿ.ಇ ಸಂಸ್ಥೆ ಅಧ್ಯಕ್ಷ, ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ ಅವರು ಇಂದು ಭೂಮಿ ಪೂಜೆ ನೆರವೇರಿಸಿದರು.
ಈ ಭಾಗದ ಜನ ಕ್ಯಾನ್ಸರ್ ನಿಂದ ತುತ್ತಾಗಿ ಸೂಕ್ತ ಚಿಕಿತ್ಸೆಗಾಗಿ ಬೆಂಗಳೂರಿಗೆ ಮತ್ತು ಹುಬ್ಬಳ್ಳಿಗೆ ಹೋಗಬೇಕಾಗಿದೆ. ಇದೀಗ ಬಿ.ಎಲ್.ಡಿ.ಇ ಆಸ್ಪತ್ರೆಯಲ್ಲಿ ಈ ಸೌಲಭ್ಯ ಒದಗಿಸುವ ದೃಷ್ಟಿಯಿಂದ 100 ಹಾಸಿಗೆಯುಳ್ಳ ಆಸ್ಪತ್ರೆ ನಿರ್ಮಿಸಲಾಗುತ್ತಿದೆ. ಈ ಆಸ್ಪತ್ರೆಗೆ ಖ್ಯಾತ ಕ್ಯಾನ್ಸರ್ ತಜ್ಞ ಡಾ. ಶೇಖರ ಪಾಟೀಲ ಅವರು ಮಾರ್ಗದರ್ಶನ ಮಾಡಲಿದ್ದಾರೆ.
ನೂತನ ಕ್ಯಾನ್ಸರ್ ಘಟಕದಲ್ಲಿ ಕಾಂಪ್ರ್ಹೆನ್ಸಿವ್ ಕ್ಯಾನ್ಸರ್ ಬ್ಲಾಕ್, ರೇಡಿಯೋಥೇರಪಿ, ಪಿಇಟಿ ಸ್ಕ್ಯಾನ್ (ಪಾಸಿಟ್ರಾನ್ ಎಮಿಷನ್ ಟೊಮೊಗ್ರಫಿ), ನ್ಯೂಕ್ಲೀಯರ್ ಮೆಡಿಸಿನ್, ರೋಗಿಗಳಿಗೆ ವಸತಿ, ಕ್ಯಾನ್ಸರ್ ಶಸ್ತ್ರಚಿಕಿತ್ಸೆ (ಓಂಕೊ ಸರ್ಜರಿ), ಕ್ಯಾನ್ಸರ್ ಮೆಡಿಸಿನ್ ಒಳಗೊಂಡಿದ್ದು, ಶೀಘ್ರದಲ್ಲಿಯೇ ಸೌಲಭ್ಯ ದೊರೆಯಲಿದೆ.
ಭೂಮಿ ಪೂಜೆ ಸಂದರ್ಭದಲ್ಲಿ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಸಮಕುಲಾಧಿಪತಿ ಡಾ. ವೈ. ಎಂ. ಜಯರಾಜ, ಕುಲಪತಿ ಡಾ. ಆರ್. ಎಸ್. ಮುಧೋಳ, ಸಮಕುಲಪತಿ ಡಾ.ಅರುಣ ಇನಾಮದಾರ, ರಿಜಿಸ್ಟ್ರಾರ್ ಡಾ.ಆರ್.ವಿ.ಕುಲಕರ್ಣಿ, ಪ್ರಾಚಾರ್ಯ ಡಾ.ಅರವಿಂದ ಪಾಟೀಲ, ಆಸ್ಪತ್ರೆ ಅಧೀಕ್ಷರಾದ ಡಾ.ರಾಜೇಶ ಹೊನ್ನುಟಗಿ, ಡಾ.ವಿಜಯಕುಮಾರ ಕಲ್ಯಾಣಪ್ಪಗೋಳ, ಅಭಿಯಂತರರಾದ ಉಮೇಶ ಕರಡಿ, ರಾಜು ಮುಜುಮದಾರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.