Home ಜಿಲ್ಲೆ ಹೂಗಾರ ಸಮಾಜಕ್ಕೆ ಭವನ ನಿರ್ಮಾಣ: ಶಾಸಕರಿಂದ ಭರವಸೆ

ಹೂಗಾರ ಸಮಾಜಕ್ಕೆ ಭವನ ನಿರ್ಮಾಣ: ಶಾಸಕರಿಂದ ಭರವಸೆ

ಚಿಟಗುಪ್ಪ,ಸೆ ೨೭ : ತಾಲೂಕಿನ ಕಂದಗೂಳ ಗ್ರಾಮದ ಹೂಗಾರ ಸಮಾಜದ ಬೇಡಿಕೆಯಾದ ಹೂಗಾರ ಮಾದಯ್ಯ ಅವರ ಹೆಸರಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಸೂಕ್ತ ಅನುದಾನ ಕಲ್ಪಿಸುತ್ತೇನೆ ಎಂದು ಶಾಸಕ ಡಾ. ಸಿದ್ದು ಪಾಟೀಲ ಭರವಸೆ ನೀಡಿದರು.
ಕಂದಗೂಳ ಗ್ರಾಮದಲ್ಲಿ ಅಖಿಲ ಕರ್ನಾಟಕ ಹೂಗಾರ ಸೇವಾ ಮಹಾಸಭಾ ಹಾಗೂ ಚಿಟಗುಪ್ಪ ತಾಲೂಕು ಹೂಗಾರ ಸಮಾಜದ ವತಿಯಿಂದ ಶನಿವಾರ ಆಯೋಜಿಸಿದ್ದ ಶರಣ ಹೂಗಾರ ಮಾದಯ್ಯ ಜಯಂತಿ ಉತ್ಸವ ಹಾಗೂ ಚಿಟಗುಪ್ಪ ತಾಲೂಕು ಪ್ರಥಮ ಹೂಗಾರ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಹೂಗಾರ ಸಮುದಾಯದ ಜನರೊಂದಿಗೆ ನಿಕಟ ಸಂಪರ್ಕವಿದೆ. ಹೂಗಾರರ ಕಾಯಕ ಅತ್ಯಂತ ಮಹತ್ವದ್ದಾಗಿದೆ. ಗ್ರಾಮೀಣ ಭಾಗದಲ್ಲಿ ಹೂಗಾರ ಸಮಾಜದವರು ಪ್ರಥಮ ಬಾರಿಗೆ ಏಕತೆಯಿಂದ ಇಂತಹ ಅದ್ದೂರಿ ಕಾರ್ಯಕ್ರಮ ಆಯೋಜಿಸಿರುವುದು ಸಂತಸ ತಂದಿದೆ. ಶರಣ ಹೂಗಾರ ಮಾದಯ್ಯ ಅವರ ಹೆಸರಿನಲ್ಲಿ ಭವ್ಯ ಸಮುದಾಯ ಭವನ ನಿರ್ಮಿಸಲು ಸೂಕ್ತ ಅನುದಾನ ಕಲ್ಪಿಸುವುದರ ಜೊತೆಗೆ ಸಮಾಜದ ಇತರೆ ಬೇಡಿಕೆಗಳಿಗೂ ಸ್ಪಂದಿಸುವ ಪ್ರಾಮಾಣಿಕ ಕೆಲಸ ಮಾಡುತ್ತೇನೆ ಎಂದರು.
ಸಮಾಜದ ಅಭಿವೃದ್ಧಿಗೆ ಏಕತೆ ಅತ್ಯಂತ ಮುಖ್ಯ. ಸಮಾಜದಲ್ಲಿ ಒಡಕು ಉಂಟಾದರೆ ಅಭಿವೃದ್ಧಿಗೆ ಹಿನ್ನಡೆಯಾಗುತ್ತದೆ. ಸ್ವಾರ್ಥಕ್ಕಾಗಿ ಸಮಾಜವನ್ನು ಒಡೆಯುವ ಪ್ರಯತ್ನಗಳಿಗೆ ಅವಕಾಶ ನೀಡಬಾರದು. ಎಲ್ಲಾ ಜಾತಿ, ಸಮುದಾಯಗಳ ಜನರು ಒಗ್ಗಟ್ಟಾಗಿ ಸಾಮಾಜಿಕ ಸಾಮರಸ್ಯ ಹಾಗೂ ಧರ್ಮ ರಕ್ಷಣೆಗೆ ಮುಂದಾಗಬೇಕು ಎಂದು ಶಾಸಕ ಸಿದ್ದು ಪಾಟೀಲ ಹೇಳಿದರು.
ಸರ್ಕಾರಗಳು ವಿವಿಧ ಸಮುದಾಯಗಳ ಅಭಿವೃದ್ಧಿಗಾಗಿ ನಿಗಮ-ಮಂಡಳಿಗಳನ್ನು ಸ್ಥಾಪಿಸಿದ್ದರೂ, ಅವುಗಳಿಗೆ ಅಗತ್ಯ ಪ್ರಮಾಣದಲ್ಲಿ ಅನುದಾನ ದೊರೆಯುತ್ತಿಲ್ಲ. ಹಲವು ನಿಗಮ-ಮಂಡಳಿಗಳು ಘೋಷಣೆಗೆ ಮಾತ್ರ ಸೀಮಿತವಾಗಿವೆ. ಈ ಬಗ್ಗೆ ಸರ್ಕಾರಗಳು ಗಮನಹರಿಸಿ ಅಗತ್ಯ ಅನುದಾನ ಒದಗಿಸಬೇಕು ಎಂದರು.
ಹೂಗಾರರ ಕಾಯಕ ಸಮಾಜಕ್ಕೆ ಅಗತ್ಯ: ಶಿವಾನಂದ ಸ್ವಾಮೀಜಿ
ಹುಲಸೂರು ಬಸವೇಶ್ವರ ಸಂಸ್ಥಾನ ಮಠದ ಡಾ. ಶಿವಾನಂದ ಸ್ವಾಮೀಜಿ ಮಾತನಾಡಿ, ಹೂಗಾರ ಸಮಾಜದ ಸೇವೆ ಇಡೀ ಸಮಾಜಕ್ಕೆ ಮಹತ್ವದ್ದಾಗಿದೆ. ಮನುಷ್ಯನ ಹುಟ್ಟಿನಿಂದ ಅಂತ್ಯದವರೆಗೂ ಹೂವಿನ ಅವಶ್ಯಕತೆ ಇರುತ್ತದೆ. ದೇವರ ಶಿರಕ್ಕೂ ಹೂಗಾರರು ಬೆಳೆಸುವ ಹೂವು ಶ್ರೇಷ್ಠವಾಗಿದೆ. ಎಲ್ಲ ಜಾತಿ-ಧರ್ಮದವರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಹೂಗಾರ ಸಮಾಜದ ಕಾಯಕಕ್ಕೆ ಸರ್ಕಾರ ಪ್ರೋತ್ಸಾಹ ನೀಡಬೇಕು. ಹೂಗಾರ ಕಾಯಕವನ್ನೇ ಅವಲಂಬಿಸಿರುವ ಕುಟುಂಬಗಳಿಗೆ ಆರ್ಥಿಕ ನೆರವು ನೀಡುವ ವಿಶೇಷ ಯೋಜನೆಗಳನ್ನು ಸರ್ಕಾರ ಜಾರಿಗೆ ತರಬೇಕು ಎಂದು ಅವರು ಒತ್ತಾಯಿಸಿದರು.
ಅಖಿಲ ಕರ್ನಾಟಕ ಹೂಗಾರ ಸೇವಾ ಮಹಾಸಭಾ ಜಿಲ್ಲಾಧ್ಯಕ್ಷ ರಾಜಕುಮಾರ ಹೂಗಾರ, ಹಿರಿಯ ಮುಖಂಡರಾದ ರೇವಣಪ್ಪ ಹೂಗಾರ, ಪತ್ರಕರ್ತ ದುರ್ಯೋಧನ ಹೂಗಾರ ಹುಮ್ನಾಬಾದ್, ಹಾಗೂ ಅಶೋಕ ಹೂಗಾರ (ಅಫಜಲಪುರ) ಮಾತನಾಡಿ, ಶರಣ ಹೂಗಾರ ಮಾದಯ್ಯ ಅವರ ಜಯಂತಿಯನ್ನು ಸರ್ಕಾರದ ವತಿಯಿಂದ ಅಧಿಕೃತವಾಗಿ ಆಚರಿಸಬೇಕು. ಹೂಗಾರ ಸಮಾಜದ ನಿಗಮ-ಮಂಡಳಿಗೆ ಅಗತ್ಯ ಅನುದಾನ ಕಲ್ಪಿಸಬೇಕು ಹಾಗೂ ಕಂದಗೂಳ ಗ್ರಾಮದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ೨೫ ಲಕ್ಷ ಅನುದಾನ ನೀಡಬೇಕು ಎಂದು ಮನವಿ ಪತ್ರ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಬಿ. ಜೆ. ಪಿ ಮುಖಂಡ ವಿಶ್ವನಾಥ ಮಾಡಗೋಳ, ಕಾಶೀನಾಥ ಹೂಗಾರ, ವಿಠಲ ಹೂಗಾರ, ಸೂರ್ಯಕಾಂತ ಹೂಗಾರ, ವಿಜಯಕುಮಾರ ಹೂಗಾರ, ರಾಜೇಂದ್ರ ಹೂಗಾರ, ಜಗನ್ನಾಥ ಹೂಗಾರ, ರಾಜಶೇಖರ ಹೂಗಾರ, ದಿಲೀಪ ಹೂಗಾರ, ಪ್ರವೀಣ ಹೂಗಾರ, ಲೋಕೇಶ್ ಹೂಗಾರ, ಶಂಕರ ಹೂಗಾರ, ಶಿವಕುಮಾರ ಹೂಗಾರ (ಭಾಲ್ಕಿ), ನಿರಂಜಪ್ಪ ತಾಳಮಡಗಿ, ಪ್ರಭಾಕರ್ ಹೂಗಾರ, ಸಿದ್ದಪ್ಪ ಹೂಗಾರ, ಶಿವಪುತ್ರ ಹೂಗಾರ, ಜಗನಾಥ ಹಳ್ಳಿಖೇಡ ಸೇರಿದಂತೆ ಅನೇಕ ಮುಖಂಡರು ಹಾಗೂ ನೂರಾರು ಹೂಗಾರ ಸಮಾಜದವರು ಭಾಗವಹಿಸಿದ್ದರು.
ಇದಕ್ಕೂ ಮುನ್ನ ಗ್ರಾಮದ ಬಸವೇಶ್ವರ ವೃತ್ತದಿಂದ ಕಲ್ಯಾಣ ಮಂಟಪ ವರೆಗೆ ಹೂಗಾರ ಮಾದಯ್ಯ ಅವರ ಭಾವ ಚಿತ್ರ ಮೆರವಣಿಗೆ ನಡೆಯಿತು.