ಬೆಂಗಳೂರು, ಆ. ೧೪- ರಾಜ್ಯದಲ್ಲಿ ಆನೆಗಳು ಸೇರಿದಂತೆ ವನ್ಯಪ್ರಾಣಿಗಳು ಅರಣ್ಯ ಪ್ರದೇಶದಿಂದ ಹೊರಗೆ ಬಾರದಂತೆ ತಡೆಗಟ್ಟಲು ಅರಣ್ಯದಂಚಿನಲ್ಲಿ ಸೌರಶಕ್ತಿ ಬೇಲಿ ನಿರ್ಮಾಣ, ಆನೆ ತಡೆ ಕಂದಕ ನಿರ್ಮಾಣ, ರೈಲ್ವೆ ಹಳಿಗಳನ್ನು ಉಪಯೋಗಿಸಿ ಬ್ಯಾರಿಕೇಡ್ ನಿರ್ಮಿಸುವ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಮಾನವ ಆನೆ ಸಂಘರ್ಷ ಹೆಚ್ಚಾಗಿರುವ ಪ್ರದೇಶಗಳಲ್ಲಿ ಇದುವರೆಗೂ ೪೨೮ ಕಿ.ಮೀ. ರೈಲ್ವೆ ಬ್ಯಾರಿಕೇಡ್ ನಿರ್ಮಿಸಲಾಗಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ವಿಧಾನಸಭೆಯಲ್ಲಿಂದು ಹೇಳಿದರು.
ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿಯ ಹರೀಶ್ ಪೂಂಜ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಕಾಡಾನೆಗಳ ಹಾವಳಿಯನ್ನು ತಡೆಯಲು ಅಧಿಕಾರಿ, ಸಿಬ್ಬಂದಿಗಳನ್ನು ಒಳಗೊಂಡ ೮ ಆನೆ ಕಾರ್ಯಪಡೆಗಳನ್ನು ರಚಿಸಲಾಗಿರುತ್ತದೆ ಎಂದರು.
ಹಾಸನ, ಚಿಕ್ಕಮಗಳೂರು, ಮೈಸೂರು, ಕೊಡಗು, ಚಾಮರಾಜನಗರ, ರಾಮನಗರ, ಬೆಂಗಳೂರು ಹಾಗೂ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಆನೆ ಕಾರ್ಯಪಡೆ ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದರು.
ಗ್ರಾಮಗಳಿಗೆ ದಾಳಿ ಮಾಡುವ ಕಾಡಾನೆಗಳನ್ನು ಸಾಕಿದ ಆನೆಗಳನ್ನು ಬಳಸಿಕೊಂಡು ಸೆರೆ ಹಿಡಿಯುವ ಕೆಲಸವೂ ನಡೆದಿದೆ. ಇದರ ಜತೆಗೆ ರೇಡಿಯೋ ಕಾಲರ್ ಅಳವಡಿಸಿರುವ ಕಾಡಾನೆಗಳ ಚಲನವಲನಗಳನ್ನು ದಿನನಿತ್ಯ ಗಮನಿಸಲು ಇಲಾಖಾ ವತಿಯಿಂದ ಹೆಜ್ಜೆ ಎಂಬ ಡ್ಯಾಷ್ ಬೋರ್ಡ್‌ನ್ನು ತಯಾರಿಸಲಾಗಿದೆ. ಮಾನವ-ಆನೆ ಸಂಘರ್ಷ ಹೆಚ್ಚಿರುವ ೧೦ ಜಿಲ್ಲೆಗಳಲ್ಲಿ ಆನೆ ಎಲ್ಲಿ ಎಂಬ ತಂತ್ರಜ್ಞಾನ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಈ ವ್ಯವಸ್ಥೆಯು ಸಾರ್ವಜನಿಕ ದೂರುಗಳು, ಗಸ್ತು ತಿರುಗುವಿಕೆ ಮುಂತಾದ ಮಾಹಿತಿಗಳ ಮೂಲಕ ಆನೆಗಳ ಚಲನ ವಲನಗಳನ್ನು ಮೇಲ್ವಿಚಾರಣೆ ಮಾಡುತ್ತದೆ ಮತ್ತು ಸಾರ್ವಜನಿಕರಿಗೆ ಎಚ್ಚರಿಕೆ ನೀಡಲು ಸಹಾಯ ಮಾಡುತ್ತಿದೆ ಎಂದು ಅವರು ಹೇಳಿದರು.
ಕಾಡಾನೆ ಇರುವ ಪ್ರದೇಶಗಳಲ್ಲಿ ಸಾರ್ವಜನಿಕರಿಗೆ ಎಚ್ಚರಿಕೆ, ಮಾಹಿತಿ ನೀಡಲು ಡಿಜಿಟಲ್ ಬೋರ್ಡ್‌ಗಳನ್ನು ಅಳವಡಿಸಲಾಗಿದೆ. ಅರಣ್ಯದಂಚಿನ ಆಯ್ದ ಪ್ರದೇಶಗಳಲ್ಲಿ ಎಐ ಆಧಾರಿತ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಡ್ರೋಣ್ ಮುಖಾಂತರ ವನ್ಯಜೀವಿಗಳ ಚಲನವಲನಗಳನ್ನು ಗಮನಿಸಲಾಗುತ್ತಿದೆ ಎಂದು ಹೇಳಿದರು.
ರೈತರಿಗೂ ಸಬ್ಸಿಡಿ ದರದಲ್ಲಿ ಸೋಲಾರ್ ಬೇಲಿ ನಿರ್ಮಾಣಕ್ಕೂ ಉತ್ತೇಜನ ನೀಡಲಾಗುತ್ತಿದೆ. ಅರಣ್ಯದಂಚಿನಲ್ಲಿ ಬರುವ ಖಾಸಗಿ ಜಮೀನುಗಳ ಸುತ್ತ ಸರ್ಕಾರದಿಂದ ದೊರಕುವ ಶೇ. ೫೦ ರಷ್ಟು ಸಬ್ಸಿಡಿಯನ್ನು ಬಳಸಿಕೊಂಡು ಸೌರ ಬೇಲಿಯನ್ನು ನಿರ್ಮಿಸಲಾಗುತ್ತಿದೆ. ರಕ್ಷಿತ ಅರಣ್ಯ ಪ್ರದೇಶಗಳ ಕಾಡಂಚಿನ ಆಯ್ದ ಗ್ರಾಮಗಳಿಗೆ ಎಲ್‌ಪಿಜಿ ಗ್ಯಾಸ್, ಸೋಲಾರ್ ದೀಪಗಳನ್ನು ಇಲಾಖಾ ವತಿಯಿಂದ ನೀಡಲಾಗುತ್ತಿದೆ. ಜತೆಗೆ ಆಯ್ದ ಗ್ರಾಮಗಳಿಗೆ ಜಾನುವಾರು ಶೆಡ್‌ಗಳ ನಿರ್ಮಾಣಕ್ಕೂ ಸಹಾಯ ಮಾಡಲಾಗುತ್ತಿದೆ ಎಂದು ಹೇಳಿದರು.
ವನ್ಯಜೀವಿ ದಾಳಿಯಿಂದ ಉಂಟಾಗುವ ಮಾನವ ಹಾನಿ ಪ್ರಕರಣಗಳಲ್ಲಿ ೨೦ ಲಕ್ಷ ರೂ. ಪರಿಹಾರವನ್ನು ನೀಡಲಾಗುತ್ತಿದೆ ಎಂದು ಹೇಳಿದರು.
ವನ್ಯಜೀವಿಗಳಿಗೆ ಅರಣ್ಯ ಪ್ರದೇಶಗಳ ಒಳಗೆ ನೀರಿನ ಲಭ್ಯತೆ ಹೆಚ್ಚಿಸಲು ರಕ್ಷಿತ ಅರಣ್ಯಗಳಲ್ಲಿ ಕೆರೆಗಳ ನಿರ್ಮಾಣ ಹಾಗೂ ಕೆರೆಗಳ ಪುನಶ್ಚೇತನವನ್ನು ಮಾಡಲಾಗುತ್ತಿದೆ. ಇದರಿಂದ ಕಾಡಾನೆ ಹಾಗೂ ಇತರ ವನ್ಯಪ್ರಾಣಿಗಳು ಕಾಡಿನಿಂದ ಹೊರಗೆ ಬಾರದಂತೆ ತಡೆಯಲಾಗುತ್ತಿದೆ ಎಂದು ಅವರು ಹೇಳಿದರು.

























