
ಸಂಜೆವಾಣಿ ವಾರ್ತೆ,
ವಿಜಯಪುರ, ಜ. ೨೭: ಭಾರತದ ಸಂವಿಧಾನವು ನಮಗೆ ನೀಡಿರುವ ನ್ಯಾಯ, ಸ್ವಾತಂತ್ರö್ಯ, ಸಮಾನತೆ ಮತ್ತು ಸಹೋದರತ್ವ ಎಂಬ ಮೌಲ್ಯಗಳು ಕೇವಲ ಪದಗಳಲ್ಲ; ಅವು ನಮ್ಮ ಜೀವನದ ದಿಕ್ಕನ್ನು ನಿರ್ಧರಿಸುವ ಜೀವಂತ ತತ್ವಗಳಾಗಿವೆ. ಗಣರಾಜ್ಯೋತ್ಸವದ ಸಂದರ್ಭದಲ್ಲಿ ನಾವು ನಮ್ಮ ಹಕ್ಕುಗಳ ಜೊತೆಗೆ ಕರ್ತವ್ಯಗಳ ಬಗೆಗೂ ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯವಿದೆ ಎಂದು ಮಹಿಳಾ ವಿವಿಯ ಕುಲಪತಿ ಪ್ರೊ.ವಿಜಯಾ ಕೋರಿಶೆಟ್ಟಿ ಹೇಳಿದರು.
ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಜ್ಞಾನಶಕ್ತಿ ಆವರಣದಲ್ಲಿ ಸೋಮವಾರ ನಡೆದ ೭೭ನೇ ಗಣರಾಜ್ಯೋತ್ಸವ ಸಂದರ್ಭದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಇಂದಿನ ಯುಗದಲ್ಲಿ ಮಹಿಳೆಯರು ವಿಜ್ಞಾನ, ತಂತ್ರಜ್ಞಾನ, ಆಡಳಿತ, ಶಿಕ್ಷಣ, ಕಲೆ, ಕ್ರೀಡೆ, ಉದ್ಯಮ ಮತ್ತು ಸಂಶೋಧನೆ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದಾರೆ. ಆದರೂ, ಸಾಮಾಜಿಕ ಅಸಮಾನತೆ, ಜಾಗೃತಿ ಕೊರತೆ ಮತ್ತು ಸಂವಿಧಾನಾತ್ಮಕ ಮೌಲ್ಯಗಳ ಅರಿವಿನ ಅಗತ್ಯ ಇನ್ನೂ ಇದೆ. ಈ ಹಿನ್ನೆಲೆಯಲ್ಲಿಯೇ ವಿಶ್ವವಿದ್ಯಾನಿಲಯಗಳು ಕೇವಲ ಜ್ಞಾನ ನೀಡುವ ಕೇಂದ್ರಗಳಲ್ಲದೆ, ಜವಾಬ್ದಾರಿಯುತ ನಾಗರಿಕರನ್ನು ರೂಪಿಸುವ ತಾಣಗಳಾಗಬೇಕು ಎಂದರು.
ಇದೇ ಸಂದರ್ಭದಲ್ಲಿ ಕುಲಪತಿ ಅವರು ಮಹಿಳಾ ವಿವಿಯ ಮುಖ್ಯ ಆವರಣ ಹಾಗೂ ವಿವಿಯ ಎಲ್ಲಾ ಸ್ನಾತಕೋತ್ತರ ಅಧ್ಯಯನ ಕೇಂದ್ರಗಳಲ್ಲಿ, ಮಹಿಳಾ ವಿಶ್ವವಿದ್ಯಾನಿಲಯದಿಂದ ಆಯೋಜಿಸಲ್ಪಡುವ ಪ್ರತಿಯೊಂದು ಕಾರ್ಯಾಗಾರ, ವಿಚಾರಸಂಕಿರಣ, ಸಮ್ಮೇಳನ, ವಿಶೇಷ ಉಪನ್ಯಾಸ, ತರಬೇತಿ ಕಾರ್ಯಕ್ರಮ ಹಾಗೂ ಇತರ ಎಲ್ಲಾ ಶೈಕ್ಷಣಿಕ ಮತ್ತು ಅಧಿಕೃತ ಕಾರ್ಯಕ್ರಮಗಳ ಆರಂಭದಲ್ಲಿ “ಭಾರತದ ಸಂವಿಧಾನ ಪೀಠಿಕೆ”ಯ ವಾಚನವನ್ನು ಕಡ್ಡಾಯಗೊಳಿಸಲಾಗುತ್ತಿದೆ ಎಂದು ಘೋಷಿಸಿದರು. ನಂತರ ವಿವಿಯ ಆಡಳಿತ ಭವನದಲ್ಲಿ “ಭಾರತದ ಸಂವಿಧಾನ ಪೀಠಿಕೆ”ಯ ಫಲಕ ಅನಾವರಣಗೊಳಿಸಿದರು.
ಇದೇ ಸಂದರ್ಭದಲ್ಲಿ ಮಹಿಳಾ ವಿವಿಯ ಮೌಲ್ಯಮಾಪನ ಕುಲಸಚಿವ ಪ್ರೊ. ಬಿ.ಎಲ್. ಲಕ್ಕಣ್ಣವರ ಮಾತನಾಡಿ, ದೇಶಕ್ಕಾಗಿ ಅಪಾರ ಸೇವೆ ಸಲ್ಲಿಸಿ, ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ ಮಹನೀಯರನ್ನು ಸ್ಮರಿಸುವ ದಿನವೇ ಇಂದು. ಅವರ ಅಮರ ಸ್ಮೃತಿಗೆ ಗೌರವ ಸಲ್ಲಿಸುವ ಸಲುವಾಗಿ ನಾವು ಇಂದು ಸ್ಮರಣಾ ಸಂಭ್ರಮವನ್ನು ಆಚರಿಸುತ್ತಿದ್ದೇವೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಮಹಿಳಾ ವಿವಿಯ ಕುಲಸಚಿವ ಶಂಕರಗೌಡ ಸೋಮನಾಳ ಮಾತನಾಡಿ, ವಿಶ್ವವಿದ್ಯಾನಿಲಯದ ಅಭಿವೃದ್ಧಿ ಮತ್ತು ಬೆಳವಣಿಗೆಗೆ ಶೈಕ್ಷಣಿಕವಾಗಿ ನಾವೂ ನಮ್ಮದೇ ಆದ ಕೊಡುಗೆ ನೀಡೋಣ. ಸ್ವಯಂಪ್ರೇರಿತವಾಗಿ ಕಾರ್ಯನಿರ್ವಹಿಸುವ ಪ್ರತಿಜ್ಞೆಯನ್ನು ಮಾಡೋಣ ಎಂದು ಕರೆ ನೀಡಿದರು. ಬಳಿಕ ರಸಪ್ರಶ್ನೆ ಕಾರ್ಯಕ್ರಮವನ್ನು ನಡೆಸಿ, ವಿಜೇತರಿಗೆ ಬಹುಮಾನಗಳನ್ನು ವಿತರಿಸಿದರು.
ಕಾರ್ಯಕ್ರಮದಲ್ಲಿ ಪ್ರದರ್ಶಕ ಕಲೆ ಮತ್ತು ಸಂಗೀತ ವಿಭಾಗದ ವಿದ್ಯಾರ್ಥಿನಿಯರು ವಂದೇಮಾತರA ಗೀತೆ ಹಾಗೂ ರಾಷ್ಟ್ರ ಗೀತೆ ಹಾಡಿದರು. ಎನ್.ಎಸ್.ಎಸ್. ಹಾಗೂ ಪ್ರದರ್ಶಕ ಕಲೆ ಮತ್ತು ಸಂಗೀತ ವಿಭಾಗದ ವಿದ್ಯಾರ್ಥಿನಿಯರಿಂದ ಸಾಂಸ್ಕೃತಿ ಕಾರ್ಯಕ್ರಮ ನಡೆಸಿದರು. ಪ್ರೊ.ಜ್ಯೋತಿ ಉಪಾಧ್ಯೆ ನಿರೂಪಿಸಿದರು.

























