
ಕಲಬುರಗಿ,ನ.27-ತಾಲ್ಲೂಕಿನ ಅವರಾದ (ಬಿ) ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಸಂವಿಧಾನ ದಿನಾಚರಣೆಯನ್ನು ಆಚರಿಸಲಾಯಿತು.
ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರು ಸಂವಿಧಾನವನ್ನು ರಚಿಸಿ ಸಮರ್ಪಣೆ ಮಾಡುತ್ತಿರುವ ಅಣಕು ಪ್ರದರ್ಶನ ಮಕ್ಕಳಿಂದ ಮಾಡಿಸಿ ಸಂವಿಧಾನದ ಮಹತ್ವ ತಿಳಿಸಲಾಯಿತು.
ಸಂವಿಧಾನದ ಮೂಲ ಆಶಯಗಳಿಗೆ ಧಕ್ಕೆ ಆಗದ ಹಾಗೆ ಗೌರವಯುತವಾಗಿ ನಾವೆಲ್ಲರೂ ಸಂವಿಧಾನವನ್ನ ಗೌರವಿಸಬೇಕು ಮತ್ತು ಸಂವಿಧಾನವನ್ನು ಅಧ್ಯಯನ ಮಾಡಬೇಕು ಎಂದು ಶಾಲೆಯ ಮುಖ್ಯ ಗುರುಗಳಾದ ಎಸ್ ಎಸ್ ಹಿರೇಮಠ ಮಕ್ಕಳಿಗೆ ಹೇಳಿದರು. ಮಕ್ಕಳು ಪೀಠಿಕೆಯನ್ನು ಹೇಳುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು. ಶಾಲೆಯ ಎಲ್ಲಾ ಶಿಕ್ಷಕರು ಭಾಗವಹಿಸಿದ್ದರು. ಶಾಲೆಯಲ್ಲಿ ಸಂವಿಧಾನ ದಿನವನ್ನು ಭಾರತರತ್ನ ಡಾ.ಬಿ.ಆರ್. ಅಂಬೇಡ್ಕರ್ ರವರ ಭಾವಚಿತ್ರ ಪೂಜಿಸುವುದರೊಂದಿಗೆ ಕಾರ್ಯಕ್ರಮವನ್ನು ನೆರವೇರಿಸಲಾಯಿತು. ಸಿದ್ದಮ್ಮ ಅವರು ಸಂವಿಧಾನದ ವಿಧಿಗಳ ಬಗ್ಗೆ ತಿಳಿಸಿಕೊಟ್ಟರು. ಜಯಶ್ರೀ ಅವರು ಸಂವಿಧಾನದ ಮಹತ್ವ ತಿಳಿಸಿಕೊಟ್ಟರು. ಪ್ರಹಾಲಾದ್ ಕುಲಕರ್ಣಿ ಕಾರ್ಯಕ್ರಮ ನಡೆಸಿಕೊಟ್ಟರು. ದೈಹಿಕ ಶಿಕ್ಷಕ ದಯಾನಂದ ವಂದನಾರ್ಪಣೆ ಮಾಡಿದರು.























