
ಕಲಬುರಗಿ,ಡಿ.14-ವಿದ್ಯಾರ್ಥಿಗಳು ಗುರಿ ತಲುಪಲು ಸತತ ಓದಿನ ಪ್ರಯತ್ನ ಹಾಗೂ ಕಠಿಣ ಪರಿಶ್ರಮ ಅಗತ್ಯವಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಸುಭಾಸ್ ರಾಥೋಡ್ ಹೇಳಿದರು.
ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ದಿಶಾ ವಿಜ್ಞಾನ ಪದವಿ ಪೂರ್ವ ಕಾಲೇಜು ಇವುಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ಕನ್ನಡ ರಸಪ್ರಶ್ನೆ ವಿಜೇತರಿಗೆ ಬಹುಮಾನ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು ನಮ್ಮ ಆಲೋಚನೆಗಳು ವ್ಯಕ್ತಿತ್ವ ರೂಪಿಸುತ್ತವೆ ಹೀಗಾಗಿ ಸಕಾರಾತ್ಮಕ ಮತ್ತು ಸಾಧನೆಮುಖಿ ಚಿಂತನೆಗಳನ್ನು ಮೈಗೂಡಿಸುವ ಮೂಲಕ ಸಾಧನೆ ಮಾಡಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಮಕ್ಕಳಿಗೆ ಮೊದಲು ಮನೆ ನಂತರ ಶಾಲೆ ಶಿಕ್ಷಣವನ್ನು ನೀಡತಕ್ಕಂಥ ಎರಡು ಫ್ಯಾಕ್ಟರಿಗಳು. ಮೊದಲು ತಂದೆ ತಾಯಿಗಳು ಅಕ್ಷರದ ಜ್ಞಾನವನ್ನು ನೀಡಿದರೆ ನಂತರ ಶಿಕ್ಷಕರು ಶಿಕ್ಷಿತರನ್ನಾಗಿ ಮಾಡುತ್ತಾರೆ ಹೀಗಾಗಿ ವಿದ್ಯಾರ್ಥಿಗಳು ಇಲ್ಲಿ ಸಿದ್ಧತೆಯಾಗುತ್ತಾರೆ. ಉತ್ತಮ ಜ್ಞಾನ ಪಡೆಯುವ ಮೂಲಕ ಮಾದರಿಯಾಗಿ ಬೆಳೆಯಬೇಕು ಎಂದು ಸ್ವಾಮಿ ವಿವೇಕಾನಂದರು, ಮಹಾತ್ಮಾ ಗಾಂಧೀಜಿ, ಡಾ. ಬಿ ಆರ್ ಅಂಬೇಡ್ಕರ್ , ಸರ್ ಎಂ ವಿಶ್ವೇಶ್ವರಯ್ಯ,ಡಾ. ಅಬ್ದುಲ್ ಕಲಾಂ ಅವರು ಜ್ಞಾನದಿಂದಲೇ ನಾಯಕರಾಗಿದ್ದಾರೆ. ಜ್ಞಾನಕ್ಕಿರುವ ಶಕ್ತಿ ಬೇರೆ ಯಾವುದಕ್ಕೂ ಇಲ್ಲ. ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಅಧ್ಯಯನ ಮಾಡಿ ಐಎಎಸ್, ಐಪಿಎಸ್ ಅಧಿಕಾರಗಳಾಗಬೇಕು ಇಲ್ಲವೇ ವೈದ್ಯರು , ಇಂಜಿನಿಯರ್ ಆಗಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಸಂಚಾಲಕರಾದ ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯ ಬಿ. ಎಚ್. ನಿರಗುಡಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿ ಅನೇಕ ಶಾಲಾ ಕಾಲೇಜುಗಳಲ್ಲಿ ಮಕ್ಕಳಿಗೆ ಪುಸ್ತಕ ಓದುವ ಹವ್ಯಾಸವನ್ನು ಬೆಳೆಸುವ ಕಾರ್ಯಕ್ರಮಗಳನ್ನು ಮಾಡುತ್ತಿದ್ದು.ಮುಂದಿನ ದಿನಗಳಲ್ಲಿ ಪ್ರಾಧಿಕಾರದಿಂದ ಜಿಲ್ಲೆಯ 25 ಶಾಲಾ ಕಾಲೇಜುಗಳಿಗೆ ಉಚಿತವಾಗಿ ಕನ್ನಡ ಪುಸ್ತಕ ಪ್ರಾಧಿಕಾರ ಪುಸ್ತಕ ಕೊಡುವ ಯೋಜನೆಯನ್ನು ಹಾಕಿಕೊಂಡಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ದಿಶಾ ಪಿಯು ಕಾಲೇಜಿನ ಸಂಸ್ಥಾಪಕ ಅಧ್ಯಕ್ಷರಾದ ಶಿವಾನಂದ್ ಖಜೂರ್ಗಿ ಅವರು ವಿದ್ಯಾರ್ಥಿಗಳಿಗೆ ಓದಲು ಪ್ರೇರಣೆ ನೀಡಿ. ರಸ ಪ್ರಶ್ನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬಹುಮಾನ ಪಡೆದ ವಿದ್ಯಾರ್ಥಿಗಳಿಗೆ ಅಭಿನಂದಿಸಿ ಮಾತನಾಡಿದರು. ಮಹಿಳಾ ಸರ್ಕಾರಿ ಪಿಯು ಕಾಲೇಜಿನ ಉಪನ್ಯಾಸಕ ವಿಜಯಕುಮಾರ್ ರೋಣದ ಕನ್ನಡ ನಾಡು ನುಡಿ ಕುರಿತು ವಿಶೇಷ ಉಪನ್ಯಾಸ ನೀಡಿದರು. ಪದವಿ ಪೂರ್ವ ಕಾಲೇಜು ಪ್ರಾಚಾರ್ಯರ ಸಂಘದ ಅಧ್ಯಕ್ಷರಾದ ಬಸವರಾಜ್ ಬಿರಾಜದಾರ ಹಾಗೂ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಬಾಬುರಾವ ಯಡ್ರಾಮಿ,ಕಾಲೇಜಿನ ಪ್ರಾಚಾರ್ಯ ಡಾ. ಸಂತೋಷ್ ಜಕಾಪೂರೆ ವೇದಿಕೆ ಮೇಲೆ ಉಪಸ್ಥಿತರಿದ್ದರು.

























