
ಬೀದರ್: ಮೇ.23:ಗೃಹಸಚಿವ ಜಿ. ಪರಮೇಶ್ವರ ಅವರ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಸಿದ್ಧಾರ್ಥ ಶಿಕ್ಷಣ ಸಂಸ್ಥೆ ಸೇರಿದಂತೆ ಅವರ ಮನೆ ಮೇಲೆ ಇಡಿ ದಾಳಿ ಮಾಡಿರುವುದರ ಹಿಂದೆ ಅವರನ್ನು ರಾಜಕೀಯವಾಗಿ ಮುಗಿಸುವ ಷಡ್ಯಂತ್ರ ನಡೆಯುತ್ತಿದೆ ಎಂದು ದಲಿತ ಸಮಾಜದ ಮುಖಂಡರು ಹಾಗೂ ಭಾರತೀಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರದೀಪ ನಾಟೇಕಾರ ತಿಳಿಸಿದರು.
ಈ ಕುರಿತು ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಶುಕ್ರವಾರ ಜರುಗಿದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಪರಮೇಶ್ವರ ಅವರು ದಲಿತ ಸಮಾಜದ ಕಣ್ಣು. ಅವರ ಶಿಕ್ಷಣ ಸಂಸ್ಥೆಯಿಂದ ಇದುವರೆಗೆ 40 ಸಾವಿರ ಇಂಜಿನಿಯರ್ ಮತ್ತು 10 ಸಾವಿರ ವೈದ್ಯರು ಪಾಸಾಗಿ ಹೋಗಿದ್ದಾರೆ. ಅಲ್ಲದೆ ಅವರು ಮುಂದಿನ ಸಿಎಂ ಆಗುವ ಎಲ್ಲಾ ಅರ್ಹತೆ ಹೊಂದಿದ್ದಾರೆ. ಈ ಕಾರಣಕ್ಕಾಗಿ ದಲಿತ ಸಮುದಾಯದ ಒಬ್ಬ ಉತ್ತಮ ನಾಯಕನನ್ನು ತುಳಿಯುವ ಷಡ್ಯಂತ್ರ ಬಿಜೆಪಿ ಮತ್ತು ಆರ್.ಎಸ್.ಎಸ್. ಮಾಡುತ್ತಿದೆ ಎಂದು ಆರೋಪಿಸಿದರು. ಇದನ್ನು ನಾವು ಉಗ್ರವಾಗಿ ಖಂಡಿಸುತ್ತೇವೆ. ಇಡಿ ದಾಳಿ ಹಿಂಪಡೆಯದಿದ್ದರೆ ರಾಜ್ಯದಾದ್ಯಂತ ಉಗ್ರ ಹೋರಾಟ ನಡೆಸುತ್ತೇವೆ ಎಂದು ನಾಟೇಕಾರ ತಿಳಿಸಿದರು.
ಸಮಾಜದ ಮುಖಂಡರು ಹಾಗೂ ಹಿರಿಯ ಸಾಹಿತಿ ಡಾ. ಕಾಶಿನಾಥ ಚಲವಾ ಮಾತನಾಡಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ದಲಿತರನ್ನು ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಹಿಂದುಳಿದವರಿಗೆ ಮೇಲೆ ತಂದರು. ಅದೇ ರೀತಿ ಗೃಹಸಚಿವ ಜಿ. ಪರಮೇಶ್ವರ ಅವರು ಅವರ ತಂದೆ ಸ್ಥಾಪಿಸಿದ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯನ್ನು ಸಮರ್ಥವಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ. ಅದೊಂದು ಸಾರ್ವಜನಿಕ ಸಂಸ್ಥೆ. ಯಾರು ಬೇಕಾದರೂ ಅಧ್ಯಕ್ಷರಾಗಬಹುದು. ಇಂತಹ ಒಳ್ಳೆಯ ಕಾರ್ಯ ಮಾಡುವ ಪರಮೇಶ್ವರ ಅವರನ್ನು ರಾಜಕೀಯವಾಗಿ ಮತ್ತು ನೈತಿಕವಾಗಿ ಕುಗ್ಗಿಸುವ ಕಾರ್ಯ ನಡೆಯುತ್ತಿದೆ. ಜೊತೆಗೆ ಪಂಚಾಯತ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಛಲವಾದಿ ನಾರಾಯಣಸ್ವಾಮಿ ಅವರು ನಾಯಿಗೆ ಹೋಲಿಸಿದ್ದನ್ನು ತೀವ್ರವಾಗಿ ಖಂಡಿಸುತ್ತೇವೆ. ನಾರಾಯಣಸ್ವಾಮಿ ಅವರು ಮಾತನಾಡುತ್ತಿಲ್ಲ. ಬದಲಾಗಿ ಅವರ ಹಿಂದೆ ಕಲಿಸಿಕೊಡುವವರಿದ್ದಾರೆ. ಛಲವಾದಿ ಅವರಿಗೆ ಟಿವಿಯಲ್ಲಿ ಮೆರೆಯಬೇಕೆಂಬ ಕಾರಣದಿಂದ ಈ ರೀತಿ ಅಸಾಂವಿಧಾನಿಕ ಪದ ಯಾರೂ ಬಳಸಬಾರದು ಎಂದು ತಿಳಿಸಿದರು.
ಇದೇ ವೇಳೆ ದಲಿತ ಮುಖಂಡರಾದ ಸುಂದರ ಜ್ಞಾನಿ, ಸೂರ್ಯಕಾಂತ ಸಾದುರೆ ಗೃಹಸಚಿವ ಜಿ. ಪರಮೇಶ್ವರ ಅವರ ಸಂಸ್ಥೆ ಮೇಲಿನ ದಾಳಿಯನ್ನು ಮತ್ತು ಸಚಿವ ಪ್ರಿಯಾಂಕ್ ಖರ್ಗೆಯವರಿಗೆ ನಾಯಿಗೆ ಹೋಲಿಸಿರುವ ಛಲವಾದಿ ನಾರಾಯಣಸ್ವಾಮಿ ಅವರ ಹೇಳಿಕೆಯನ್ನು ಬಲವಾಗಿ ಖಂಡಿಸಿದರು.
ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಶರಣು ಫುಲೆ, ನಾಗಸೇನ ಗಾಯಕವಾಡ, ರಾಜಕುಮಾರ ಪ್ರಸಾದೆ, ಭೀಮರಾವ ಮಾಲಗತ್ತಿ, ಪಂಡಿತ ಭಂಗೂರೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.