Home ಜಿಲ್ಲೆ ಸ್ವಚ್ಛ ಪರಿಸರ ಸಂರಕ್ಷಣೆ ಅತ್ಯವಶ್ಯ: ಹಾಸಿಂಪೀರ ವಾಲೀಕಾರ

ಸ್ವಚ್ಛ ಪರಿಸರ ಸಂರಕ್ಷಣೆ ಅತ್ಯವಶ್ಯ: ಹಾಸಿಂಪೀರ ವಾಲೀಕಾರ

ಸಂಜೆವಾಣಿ ವಾರ್ತೆ,
ವಿಜಯಪುರ, ಅ.೭: ಸ್ವಚ್ಛ ಹಾಗೂ ಪರಿಸರ ಸಂರಕ್ಷಣೆಗೆ ಪ್ರತಿಯೊಬ್ಬರೂ ಆದ್ಯತೆ ನೀಡಬೇಕು. ಈ ನಿಟ್ಟಿನಲ್ಲಿ ಮಹಾತ್ಮ ಗಾಂಧಿ ಗ್ರಾಮ ಪಂಚಾಯಿತಿ ತೊರವಿಯು ಕೈಗೊಂಡಿರುವ ಪರಿಸರ ಸಂರಕ್ಷಣಾ ಕಾರ್ಯಗಳು ಶ್ಲಾಘನೀಯವಾಗಿವೆ ಎಂದು ಹಾಸಿಂಪೀರ ವಾಲೀಕಾರ ಹೇಳಿದರು.
ಮಹಾತ್ಮ ಗಾಂಧಿ ಗ್ರಾಮ ಪಂಚಾಯಿತಿ ತೊರವಿ, ಅತ್ತಾಲಟ್ಟಿ ಹಾಗೂ ನವರಸಪುರ ಗ್ರಾಮಗಳಲ್ಲಿ ಪರಿಸರ ಸಂರಕ್ಷಣೆಗೆ ಹಲವು ಕಾರ್ಯಗಳನ್ನು ಕೈಗೊಂಡಿದ್ದು, ಜಿಲ್ಲೆಗೆ ಮಾದರಿಯಾಗಿದೆ. ನೀರಾವರಿ ಸೌಲಭ್ಯದಿಂದ ವಿಜಯಪುರ ಜಿಲ್ಲೆ ಬರಪೀಡಿತ ಶಾಪದಿಂದ ಮುಕ್ತವಾಗಲು ಸಾಧ್ಯವಾಗಿದೆ ಎಂದರು.
ಸಚಿವ ಎಂ.ಬಿ. ಪಾಟೀಲ ಅವರ ಜನ್ಮದಿನದ ಅಂಗವಾಗಿ ತೊರವಿ ಗ್ರಾಮದಲ್ಲಿ ಮಂಗಳವಾರ ಬೆಳಗ್ಗೆ ಸ್ವಚ್ಛ ಗ್ರಾಮ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಎಂ.ಬಿ. ಪಾಟೀಲ ಅವರು ಶಿಕ್ಷಣ, ನೀರಾವರಿ, ಕೈಗಾರಿಕೆ, ಹೈನುಗಾರಿಕೆ, ಕ್ರೀಡೆ ಹಾಗೂ ಪರಿಸರ ಸಮತೋಲನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ. ಬಸವಾದಿ ಶರಣರ ವಚನಗಳ ಪ್ರಚಾರಕ್ಕೂ ವಚನ ಪಿತಾಮಹ ಡಾ. ಫ.ಗು. ಹಳಕಟ್ಟಿ ಸಂಶೋಧನಾ ಕೇಂದ್ರದ ಮೂಲಕ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಆಡಳಿತಾಧಿಕಾರಿ ಮಂಜುನಾಥ ಜನಮಟ್ಟಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗ್ರಾಮದ ಹಿರಿಯರು ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡಿ ಪ್ರೋತ್ಸಾಹಿಸುತ್ತಿರುವುದು ಪ್ರಶಂಸನೀಯ ಎಂದರು.
ಈ ಸಂದರ್ಭದಲ್ಲಿ ಸಚಿವ ಎಂ.ಬಿ. ಪಾಟೀಲ ಅವರ ಜನ್ಮದಿನದ ಅಂಗವಾಗಿ ಅಂಗನವಾಡಿ ವಿದ್ಯಾರ್ಥಿಗಳಿಗೆ ಗ್ರಾಮಸ್ಥರು ಹಾಗೂ ದಾನಿಗಳ ಸಹಕಾರದಿಂದ ಸಮವಸ್ತ್ರ ವಿತರಿಸಲಾಯಿತು. ಸ್ವಚ್ಛ ಗ್ರಾಮ ಅಭಿಯಾನದ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಜಶ್ರೀ ತುಂಗಳ, ಶರಣಮ್ಮ ದೊಡಮನಿ, ಗಂಗಾಧರ ಬಗಲಿ ಸೇರಿದಂತೆ ಗ್ರಾಮಸ್ಥರು ಹಾಗೂ ದಾನಿಗಳು ಉಪಸ್ಥಿತರಿದ್ದರು. ಮಂಜುನಾಥ ನಡಗಡ್ಡಿ, ಮಹಾಂತೇಶ ಹಾದಿಮನಿ, ಲಕ್ಷ್ಮಣ ಕೌಲಗಿ, ಕೃಷ್ಣ ಜಾಧವ, ಪ್ರವೀಣ ಶಿವನಕರ, ಶಿವಾನಂದ ಬಜಂತ್ರಿ, ಗಂಗಾಧರಗೌಡ ಬಗಲಿ ಪಾಟೀಲ, ಹಸನ ನದಾಫ್, ಸುರೇಶಗೌಡ ಬಿರಾದಾರ, ದಾದಾಸಾಹೇಬ, ಯಾಸೀನ್ ಶಾನವಾಲೆ ಸೇರಿದಂತೆ ಹಲವರು ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸಿದರು.
ಸುರೇಶ ಗುಚ್ಚಿನಮನಿ, ಮಲ್ಲಪ್ಪ ಹಾದಿಮನಿ, ನೂರ ಅವಟಿ, ವಿಜಯ ಪಡಗಾನೂರ, ಕೀರ್ತಿ ಕುಲಕರ್ಣಿ, ಸಚಿವ ಕಾಂಬಳೆ, ಲಕ್ಷ್ಮೀ ಮಹಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸ್ವಚ್ಛ ಗ್ರಾಮ ಅಭಿಯಾನದ ಸಿಬ್ಬಂದಿಯನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಪ್ರಶಾಂತ ಪಾಟೀಲ ನಿರೂಪಿಸಿ ವಂದಿಸಿದರು.