Home ಜಿಲ್ಲೆ ತುಮಕೂರು ರಾಹುಲ್‌ಗಾಂಧಿ ವಿರುದ್ಧ ಎಫ್‌ಐಆರ್ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ

ರಾಹುಲ್‌ಗಾಂಧಿ ವಿರುದ್ಧ ಎಫ್‌ಐಆರ್ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ

ತುಮಕೂರು, ಸೆ. ೩- ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ಜಾಗವನ್ನು ಗೋ ಮೂತ್ರ ಮತ್ತು ಗಂಗಾಜಲದಿಂದ ಸ್ವಚ್ಚಗೊಳಿಸಿದ ವ್ಯಕ್ತಿಗಳ ವಿರುದ್ದ ಕೇಸು ದಾಖಲಿಸುವಂತೆ ಒತ್ತಾಯಿಸಿ ಹಾಗೂ ರಾಹುಲ್‌ಗಾಂಧಿ ಅವರ ವಿರುದ್ದ ಎಫ್.ಐ.ಆರ್.ದಾಖಲಿಸಿರುವುದನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ನಗರದ ಅಂಬೇಡ್ಕರ್ ಪ್ರತಿಮೆ ಎದುರು ಪ್ರತಿಭಟನೆ ನಡೆಸಲಾಯಿತು.


ಪ್ರತಿಭಟನೆಯಲ್ಲಿ ಮಾತನಾಡಿದ ಮಾಜಿ ಶಾಸಕರಾದ ಡಾ. ರಫೀಕ್ ಅಹಮದ್ ರವರು, ನ್ಯಾಯ ಕೇಳಿದ ನಮ್ಮ ನಾಯಕರಾದ ರಾಹುಲ್‌ಗಾಂಧಿ ಅವರ ಮೇಲೆಯೇ ಎಫ್.ಐ.ಆರ್. ಹಾಕಿರುವುದು ಹಾಸ್ಯಾಸ್ಪದವಾಗಿದೆ. ದೇಶದಲ್ಲಿ ಅಸ್ಪೃಷ್ಯತೆ ಜೀವಂತ ಇದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಸ್ವಾತಂತ್ರ್ಯ ಬಂದು ಏಳು ದಶಕಗಳು ಕಳೆದಿದ್ದರೂ, ಇಂದಿಗೂ ಜನರ ಮನಸ್ಥಿತಿ ಬದಲಾಗದಿರುವುದು ನಿಜಕ್ಕೂ ವಿಷಾದನೀಯ ಎಂದರು.


ಸರ್ಕಾರ ಈ ಕೂಡಲೇ ಎಐಸಿಸಿ ಅಧ್ಯಕ್ಷರು ಭಾಷಣ ಮಾಡಿದ ಜಾಗವನ್ನು ಸ್ವಚ್ಚಗೊಳಿಸಿದ ವ್ಯಕ್ತಿಗಳ ವಿರುದ್ದ ಕೇಸು ದಾಖಲಿಸಬೇಕು. ಹಾಗೆಯೇ ನಮ್ಮ ನಾಯಕರಾದ ರಾಹುಲ್‌ಗಾಂಧಿ ಅವರ ಮೇಲೆ ದಾಖಲಿಸಿರುವ ಎಫ್.ಐ.ಆರ್ ರದ್ದು ಮಾಡಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ತಾಲ್ಲೂಕು, ಹೋಬಳಿ ಮಟ್ಟದಲ್ಲಿಯೂ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಲಿದ್ದಾರೆ ಎಂದರು.


ಬಿ.ಎಂ.ಟಿ.ಸಿ ಉಪಾಧ್ಯಕ್ಷ ನಿಖೇತರಾಜ್ ಮೌರ್ಯ ಮಾತನಾಡಿ, ಅಸ್ಪೃಶ್ಯತೆ ಎಂಬುದು ಕಾನೂನು ಬಾಹಿರವಾಗಿದ್ದರೂ ಬಿಜೆಪಿ, ಆರ್.ಎಸ್.ಎಸ್ ಹಾಗೂ ಅದರ ಅಂಗ ಸಂಸ್ಥೆಗಳು ಇಂದಿಗೂ ಅದನ್ನು ಮುಂದುವರೆಸಿಕೊಂಡು ಬಂದಿವೆ. ಬಾಬು ಜಗಜೀವನ್‌ರಾಂ ಅವರು ಉಪಪ್ರಧಾನಿಯಾಗಿದ್ದಾಗ ಪುರಿ ಜಗನ್ನಾಥ ದೇವಾಲಯದಲ್ಲಿ ಇದೇ ರೀತಿ ಅವಮಾನಿಸಲಾಯಿತು. ರಾಮಮಂದಿರದ ಗುದ್ದಲಿ ಪೂಜೆಗೆ ದಲಿತರೆಂಬ ಕಾರಣಕ್ಕೆ ಅಂದಿನ ರಾಷ್ಟ್ರಪತಿ ರಾಮ್ ಕೋವಿಂದ ಅವರನ್ನು ಕರೆಯಲಿಲ್ಲ. ರಾಮಮಂದಿರ ಮತ್ತು ಹೊಸ ಸಂಸತ್ ಭವನ ಉದ್ಘಾಟನೆಗೆ ದಲಿತರು, ವಿಧವೆ ಎಂಬ ಕಾರಣಕ್ಕೆ ಇಂದಿನ ರಾಷ್ಟ್ರಪತಿ ದೌಪಧಿ ಮುರ್ಮು ಅವರನ್ನು ಕರೆಯದ ಅಸ್ಪೃಶ್ಯತೆ ಆಚರಿಸಲಾಯಿತು. ಅದರ ಮುಂದುವರೆದ ಭಾಗವಾಗಿ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ಜಾಗವನ್ನು ಸ್ವಚ್ಚಗೊಳಿಸಿದ್ದಾರೆ ಎಂದು ಆಕ್ರೋಶ ಹೊರ ಹಾಕಿದರು.


ಈ ಹಿಂದೆ ನಾರಾಯಣಗುರುಗಳು ಓಡಾಡಿದ ಜಾಗವನ್ನು ಇದೇ ರೀತಿ ಗೋ ಮೂತ್ರದಿಂದ ಸ್ವಚ್ಚಗೊಳಿಸಿದ್ದರ ವಿರುದ್ದ ನಿರಂತರವಾಗಿ ಹೋರಾಟ ನಡೆದಿತ್ತು. ಅದೇ ರೀತಿಯ ಹೋರಾಟವನ್ನು ಕಾಂಗ್ರೆಸ್ ರೂಪಿಸಲಿದೆ. ಮನುವಾದಿ ಆಚರಣೆ ಮಾಡಿದವರ ವಿರುದ್ದ ದೂರು ದಾಖಲಾಗುವವರೆಗೂ ಹೋರಾಟ ಮುಂದುವರೆಯಲಿದೆ ಎಂದರು.


ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ ಮಾತನಾಡಿ, ಈ ದೇಶದಲ್ಲಿ ಪ್ರಜಾಪ್ರಭುತ್ವ ಸಡಿಲಗೊಂಡಿದೆ ಎಂಬುದಕ್ಕೆ ನ್ಯಾಯ ಕೇಳಿದ ನಮ್ಮ ನಾಯಕರಾದ ರಾಹುಲ್‌ಗಾಂಧಿ ಅವರ ವಿರುದ್ದವೇ ಎಫ್.ಐ.ಆರ್. ದಾಖಲಾಗಿರುವುದು ಸಾಕ್ಷಿಯಾಗಿದೆ. ಅಸ್ಪೃಶ್ಯತೆ ಆಚರಿಸುವುದು ಕಾನೂನು ಬಾಹಿರ. ಅಂತಹವರ ವಿರುದ್ದ ದೂರು ದಾಖಲಿಸುವ ಬದಲು, ತಮಗಾದ ಅನ್ಯಾಯದ ವಿರುದ್ದ ನ್ಯಾಯ ಕೇಳಿದ ವ್ಯಕ್ತಿಯ ವಿರುದ್ದವೇ ಎಫ್‌ಐಆರ್ ದಾಖಲಿಸಿರುವುದು ಪ್ರತಿಭಟಿಸುವವರ ದ್ವನಿ ಅಡಗಿಸುವ ನೀಚ ಕೃತ್ಯವಾಗಿದೆ. ಇಂತಹ ಎಫ್.ಐ.ಆರ್.ಗಳಿಗೆ ಕಾಂಗ್ರೆಸ್ ಎದುರುವ ಪ್ರಶ್ನೆಯೇ ಇಲ್ಲ. ದಲಿತರೆಂಬ ಕಾರಣಕ್ಕೆ ಮಲ್ಲಿಕಾರ್ಜುನ ಖರ್ಗೆ ಭಾಷಣ ಮಾಡಿದ ಪ್ರದೇಶವನ್ನು ಸ್ವಚ್ಚಗೊಳಿಸಿದವರ ವಿರುದ್ದ ಎಫ್.ಐ.ಆರ್. ದಾಖಲಿಸಬೇಕು. ಹಾಗೆಯೇ ಅಸ್ಪೃಶ್ಯತೆ ಆಚರಿಸಿದ್ದನ್ನು ಖಂಡಿಸಿ ನ್ಯಾಯದ ಕೇಳಿದ ರಾಹುಲ್‌ಗಾಂಧಿ ಅವರ ಮೇಲೆ ಹಾಕಿರುವ ಎಫ್.ಐ.ಆರ್. ರದ್ದುಗೊಳಿಸುವವರೆಗೂ ಹೋರಾಟ ಮುಂದುವರೆಯಲಿದೆ ಎಂದರು.


ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷರಾದ ಆರ್.ರಾಮಕೃಷ್ಣ ಮತ್ತು ಕೆಂಚಮಾರಯ್ಯ ಅವರುಗಳು ಪ್ರಕರಣವನ್ನು ಖಂಡಿಸಿದರಲ್ಲದೆ, ರಾಹುಲ್‌ಗಾಂಧಿ ಅವರ ಮೇಲೆ ಹಾಕಿರುವ ಎಫ್.ಐ.ಆರ್. ರದ್ದುಗೊಳಿಸುವಂತೆ ಆಗ್ರಹಿಸಿದರು.


ಪ್ರತಿಭಟನೆಯಲ್ಲಿ ಷಣ್ಮುಗಪ್ಪ, ಸಿಮೆಂಟ್ ಮಂಜುನಾಥ್, ಹೆಚ್.ಸಿ.ಹನುಮಂತಯ್ಯ, ಸಿದ್ದಲಿಂಗೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಫಯಾಜ್, ಮಹೇಶ್, ಕೆಂಪಣ್ಣ, ಸಂಜೀವಕುಮಾರ್, ಒಬಿಸಿ ಘಟಕದ ಅನಿಲ್, ಯುವ ಕಾಂಗ್ರೆಸ್‌ನ ಇಲಾಹಿ ಸಿಕಂದರ್, ಕಾರ್ಮಿಕ ಘಟಕದ ದಾದಾಪೀರ್, ಆದಿಲ್, ಅಲ್ಪಸಂಖ್ಯಾತರ ಘಟಕದ ಇರ್ಫಾನ್ ಅಹಮದ್, ನ್ಯಾತೇಗೌಡ, ಮುಬೀನಾ, ಸುಜಾತ, ಪಾವರ್ತಮ್ಮ, ವಿಜಯಲಕ್ಷ್ಮಿ ಮತ್ತಿತರರು ಪಾಲ್ಗೊಂಡಿದ್ದರು.