
ತುಮಕೂರು, ಜ. ೨೪- ಪ್ರಜಾಪ್ರಭುತ್ವದ ಆಶಯ ಮತ್ತು ಸಿದ್ಧಾಂತಗಳಲ್ಲಿ ತನಗೆ ಕಿಂಚಿತ್ತೂ ಗೌರವ ಇಲ್ಲ ಎಂಬುದನ್ನು ಕಾಂಗ್ರೆಸ್ ಪಕ್ಷ ಮತ್ತು ಅದರ ಹಿರಿಯ ಸದಸ್ಯರು ವಿಧಾನಸಭೆಯಲ್ಲಿ ತಮ್ಮ ಗೂಂಡಾಗಿರಿ ಮೂಲಕ ಮತ್ತೊಮ್ಮೆ ಸಾಬೀತು ಮಾಡಿದರು ಎಂದು ತುಮಕೂರು ಗ್ರಾಮಾಂತರ ಬಿಜೆಪಿ ಶಾಸಕ ಮತ್ತು ಪಕ್ಷದ ಹಿರಿಯ ಮುಖಂಡರಾದ ಬಿ. ಸುರೇಶಗೌಡ ಕಿಡಿಕಾರಿದ್ದಾರೆ.
ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ಕೇಂದ್ರದ ಜತೆಗೆ ಕಾಲು ಕೆದರಿ ಸಂಘರ್ಷಕ್ಕಿಳಿಯಲು ಒಂದಲ್ಲ ಒಂದು ಕಾರಣ ಹುಡುಕುತ್ತಿರುವ ಕಾಂಗ್ರೆಸ್ ಪಕ್ಷ ಇಂದು ಕೂಡಾ ಅದೇ ರೀತಿ ನಡೆದುಕೊಂಡಿದೆ. ರಾಜ್ಯಪಾಲರು ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಿ ಹೊರಗೆ ಹೋಗುವಾಗ ಕಾನೂನು ಮತ್ತು ಸಂಸದೀಯ ಸಚಿವ ಎಚ್.ಕೆ.ಪಾಟೀಲ್ ಮತ್ತು ಸದಸ್ಯ ಬಿ.ಕೆ.ಹರಿಪ್ರಸಾದ್ ಅಂಥವರು ರಾಜ್ಯಪಾಲರಿಗೆ ಘೇರಾವೊ ಹಾಕಿರುವುದು ಅಸಾಂವಿಧಾನಿಕ ನಡೆ ಮತ್ತು ಸದನದ ನಿಯಮಗಳಿಗೆ ಸಂಪೂರ್ಣ ವಿರುದ್ಧವಾದುದು ಎಂದು ಅವರು ತಿಳಿಸಿದ್ದಾರೆ.
ಸಂಪುಟ ಪುನಾರಚನೆಯಾದರೆ ಸ್ಥಾನ ಕಳೆದುಕೊಳ್ಳುವ ಅಂಜಿಕೆಯಲ್ಲಿರುವ ಪಾಟೀಲರ ಮತ್ತು ಜೀವನದಲ್ಲಿ ಒಮ್ಮೆಯಾದರೂ ಸಚಿವನಾಗಬೇಕು ಎಂದು ಕಾಯುತ್ತಿರುವ ಹರಿಪ್ರಸಾದ್ ನಡೆಯಾರಿಗಾದರೂ ಅರ್ಥವಾಗುತ್ತದೆ ಎಂದು ಅವರು ವ್ಯಂಗ್ಯವಾಡಿದ್ದಾರೆ.
ಕೇಂದ್ರ ಸರ್ಕಾರ ತಂದಿರುವ ವಿಬಿಜಿ ರಾಮ್‌ಜಿ ಕಾನೂನನಿಗೆ ರಾಜ್ಯದ ವಿರೋಧ ಇದ್ದರೆ ಅದನ್ನು ಚರ್ಚಿಸಲು ಬೇಕಾದಷ್ಟು ವೇದಿಕೆಗಳಿವೆ. ಅದಕ್ಕೆ ಜಂಟಿ ಅಧಿವೇಶನ ಕರೆದು, ಅದನ್ನು ರಾಜ್ಯಪಾಲರ ಬಾಯಿಯಲ್ಲಿ ಹೇಳಿಸುವುದು ಕ್ಷುದ್ರ ರಾಜಕೀಯ ಮಾತ್ರವಲ್ಲ ತನ್ನ ಎಲ್ಲ ಆಡಳಿತ ವೈಫಲ್ಯ ಮತ್ತು ಮುಖ್ಯಮಂತ್ರಿ ಕುರ್ಚಿಗಾಗಿ ಕಾಂಗ್ರೆಸ್‌ನಲ್ಲಿ ನಡೆದಿರುವ ಕಚ್ಚಾಟದಿಂದ ಜನರ ಗಮನವನ್ನು ಬೇರೆ ಕಡೆ ಸೆಳೆಯುವ ದುರುದ್ದೇಶವಾಗಿದೆ ಎಂದಿದ್ದಾರೆ.
ಮನರೇಗಾ ಯೋಜನೆಯಲ್ಲಿ ಆಗುತ್ತಿದ್ದ ಲೋಪ ದೋಷಗಳನ್ನಲು ತಿದ್ದಿ ತಂದಿರುವ ಹೊಸ ಕಾಯ್ದೆಯಾಗಿದೆ. ಮನರೇಗಾ ಯೋಜನೆ ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ ಎನ್ನುವಂತಾಗಿತ್ತು. ಈ ಯೋಜನೆಯಡಿ ಅತಿ ಹೆಚ್ಚು ಅಕ್ರಮ ಎಸಗಿದ ನಾಲ್ಕು ರಾಜ್ಯಗಳಲ್ಲಿ ಕರ್ನಾಟಕವೂ ಒಂದು ಎನ್ನುವುದು ನಾಚಿಕೆಗೇಡಿನ ವಿಚಾರ. ಅದಕ್ಕಾಗಿಯೇ ವಿಬಿಜಿ ರಾಮ್‌ಜಿ ಯೋಜನೆಯಡಿ ರಾಜ್ಯಪಾಲರನ್ನು ಹೆಚ್ಚಿಸಿ ರಾಜ್ಯ ಸರ್ಕಾರಕ್ಕೂ ಹೊಣೆಗಾರಿಕೆಯನ್ನು ನಿಗದಿ ಮಾಡಲಾಗಿದೆ. ಆದರೆ, ಬಿಟ್ಟಿ ಭಾಗ್ಯಗಳಿಂದಾಗಿ ಬೊಕ್ಕಸವನ್ನೇ ಖಾಲಿ ಮಾಡಿರುವ ಕಾಂಗ್ರೆಸ್ ಸರ್ಕಾರಕ್ಕೆ ಈ ಹೊಣೆಗಾರಿಕೆಯೇ ಬೇಡವಾಗಿದೆ. ಅದಕ್ಕಾಗಿ ಅದು ಕೇಂದ್ರದ ಜತೆಗೆ ಸಂಘರ್ಷಕ್ಕಿಳಿಯಲು ಒಂದಲ್ಲ ಒಂದು ಕಾರಣ ಹುಡುಕುತ್ತಿದೆ ಎಂದು ಟೀಕಿಸಿದ್ದಾರೆ.
ಕಾಂಗ್ರೆಸ್ ಪಕ್ಷವು ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ರಾಜಭವನವನ್ನು ದುರುಪಯೋಗ ಮಾಡಿಕೊಂಡು ಅನೇಕ ರಾಜ್ಯ ಸರ್ಕಾರಗಳನ್ನು ವಜಾ ಮಾಡಿದ ಕುಖ್ಯಾತಿ ಹೊಂದಿದೆ.ಇಂದಿರಾಗಾಂಧಿ ಒಬ್ಬರೇ ೪೯ ಸಾರಿ ರಾಜ್ಯ ಸರ್ಕಾರಗಳನ್ನುವಜಾ ಮಾಡಿದ್ದರು.ಅವರೇ ದೇಶದ ಮೇಲೆ ತುರ್ತುಸ್ಥಿತಿಯನ್ನೂ ಹೇರಿದ್ದರು. ಇಂಥವರು ನಮಗೆ ಸಂವಿಧಾನದ ಪಾಠ ಹೇಳುತ್ತಿರುವುದು ಭೂತದ ಬಾಯಿಯಲ್ಲಿ ಭಗವದ್ಗೀತೆ ಬೋಧಿಸಿದ ಹಾಗೆ ಇದೆ ಎಂದಿದ್ದಾರೆ.
ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ರಾಜ್ಯಪಾಲರಾಗಿದ್ದ ಎಚ್.ಆರ್.ಭಾರದ್ವಾಜ್ ಅವರು ಮಾಡಿದ ಅನಾಹುತ ಒಂದೆರಡಲ್ಲ. ಅವರೂ ಜಂಟಿ ಅಧಿವೇಶನದಲ್ಲಿ ಎರಡೇ ಸಾಲು ಓದಿ ಹೋಗಿದ್ದರು. ಆಗ ಸಂವಿಧಾನದ ರಕ್ಷಣೆಯಾಗಿತ್ತೆ, ಆಗ ಕಾಂಗ್ರೆಸ್ ಪಕ್ಷದವರು ನಿದ್ದೆಮಾಡುತ್ತಿದ್ದರಾ, ಇವತ್ತು ನಮ್ಮ ರಾಜ್ಯಪಾಲರು ಕರ್ನಾಟಕ ಸರ್ಕಾರದಿಂದ ಕೇಂದ್ರದ ಜತೆಸಂಘರ್ಘವಾಗಬಾರದು ಎಂದೇ ಅತ್ಯಂತ ಪ್ರಬುದ್ಧವಾಗಿ ನಡೆದುಕೊಂಡಿದ್ದಾರೆ. ರಾಜ್ಯಪಾಲರ ಜತೆಕಾಂಗ್ರೆಸ್ ಪಕ್ಷ ಅಗೌರವದಿಂದನಡೆದುಕೊಂಡಿದ್ದನ್ನು ಖಂಡಿಸಿ ನಾವು ಹೋರಾಟ ಮಾಡುವುದಾಗಿ ತಿಳಿಸಿದ್ದಾರೆ.




























