
ಸಂಜೆವಾಣಿ ವಾರ್ತೆ,
ವಿಜಯಪುರ, ಆ. ೨೫: ಎಐಸಿಸಿ ಅಧ್ಯಕ್ಷ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ಸ್ಥಳವನ್ನು ಕಾರ್ಯಕ್ರಮದ ಬಳಿಕ ಶುಚಿಗೊಳಿಸಿದ ಕೃತ್ಯವನ್ನು ಖಂಡಿಸಿ ವಿಜಯಪುರ ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ವತಿಯಿಂದ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.
ಈ ಘಟನೆ ಜಾತೀಯ ಮನೋಭಾವ ಹಾಗೂ ಸಾಮಾಜಿಕ ತಾರತಮ್ಯದ ಪ್ರತೀಕವಾಗಿದ್ದು, ಕೃತ್ಯ ಎಸಗಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಕೆಪಿಸಿಸಿ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಆರ್. ಧರ್ಮಸೇನಾ, ನಾಗಠಾಣ ಶಾಸಕ ವಿಠ್ಠಲ ಕಟಕಧೋಂಡ ಹಾಗೂ ವಿಜಯಪುರ ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ರಮೇಶ ಗುಬ್ಬೆವಾಡ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಆರ್. ಧರ್ಮಸೇನಾ, “ಮಲ್ಲಿಕಾರ್ಜುನ ಖರ್ಗೆ ಅವರಂತಹ ಹಿರಿಯ ನಾಯಕರು ಭಾಷಣ ಮಾಡಿದ ಸ್ಥಳವನ್ನು ಶುಚಿಗೊಳಿಸಿರುವುದು ಅತ್ಯಂತ ಖಂಡನೀಯ. ಇದು ಕೇವಲ ಒಂದು ಸ್ಥಳವನ್ನು ಸ್ವಚ್ಛಗೊಳಿಸಿದ ಘಟನೆ ಅಲ್ಲ; ಇದರ ಹಿಂದೆ ಇರುವ ಮನುವಾದಿ ಮನಸ್ಥಿತಿಯನ್ನು ಸಮಾಜ ಗಂಭೀರವಾಗಿ ಪ್ರಶ್ನಿಸಬೇಕಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಈ ಕೃತ್ಯವನ್ನು ಜಿಲ್ಲೆಯ ಸಂಸದ ರಮೇಶ ಜಿಗಜಿಣಗಿ ಅವರೂ ಖಂಡಿಸಬೇಕಾಗಿತ್ತು. ಆದರೆ ಅವರು ಈ ಕುರಿತು ಮೌನ ವಹಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಇಂತಹ ಘಟನೆಗಳಿಗೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು. ಕೃತ್ಯದಲ್ಲಿ ಭಾಗಿಯಾದವರನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು” ಎಂದು ಒತ್ತಾಯಿಸಿದರು.
ಜಿಲ್ಲಾ ಕಾಂಗ್ರೆಸ್ ಎಸ್‌ಸಿ ವಿಭಾಗದ ಅಧ್ಯಕ್ಷ ರಮೇಶ ಗುಬ್ಬೆವಾಡ ಮಾತನಾಡಿ, “ಪರಿಶಿಷ್ಟ ಜಾತಿ, ಕೂಲಿ ಕಾರ್ಮಿಕರು ಹಾಗೂ ಬಡವರ ವಿರುದ್ಧದ ತಾರತಮ್ಯವನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಕಾಂಗ್ರೆಸ್‌ನ ಹಿರಿಯ ನಾಯಕ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ಸ್ಥಳವನ್ನು ಶುಚಿಗೊಳಿಸಿರುವುದು ಜಾತೀಯ ಮನೋಭಾವದ ಪ್ರತೀಕವಾಗಿದೆ. ಇಂತಹ ಕೃತ್ಯಗಳು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿವೆ” ಎಂದು ಕಿಡಿಕಾರಿದರು.
“ಯಾರು ಈ ಕೃತ್ಯ ಎಸಗಿದ್ದಾರೆ ಎಂಬುದನ್ನು ಪತ್ತೆಹಚ್ಚಿ, ಅವರನ್ನು ಕೂಡಲೇ ಬಂಧಿಸಬೇಕು. ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ ಎಂಬ ಸಂದೇಶವನ್ನು ಸರ್ಕಾರ ನೀಡಬೇಕು” ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ವೈಜನಾಥ ಕರ್ಪೂರಮಠ, ಚಾಂದಸಾಬ ಗಡಗಲಾವ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಸಂತ ಹೊನಮೊಡೆ, ಮಹಾನಗರ ಪಾಲಿಕೆ ಸದಸ್ಯೆ ಆರತಿ ಶಹಾಪುರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಹಾಜಹಾನ ಮುಲ್ಲಾ, ಸಂತೋಷ ಬಾಲಗಾಂವಿ, ಕೆಪಿಸಿಸಿ ಎಸ್‌ಸಿ ವಿಭಾಗದ ಕನಿರಾಮ ರಾಠೋಡ, ದಿನೇಶ, ಸುಭಾಷ್, ಕಾಳಯ್ಯ, ಕೃಷ್ಣ ಲಮಾಣಿ, ಸಿದ್ದು ತೋಟದ, ದುರ್ಗಪ್ಪ ಸಂಕದ, ಪರಶರಾಮ ಜಮಖಂಡಿ, ದಶರಥ ಪಡಸಲಗಿ, ವಿಠ್ಠಲ ಸಂದಿಮನಿ, ರಾಹುಲ್ ಐನಾಪುರ, ಮೈಬೂಬ ಕಲಾದಗಿ, ಹಮೀದಾ ಪಟೇಲ, ಸರಿತಾ ಧನರಾಜ್, ವಸೀಮ ತಾವರಗೇರಿ, ದಿಲೀಪ್ ಪ್ರಭಾಕರ ಸೇರಿದಂತೆ ಜಿಲ್ಲಾ ಕಾಂಗ್ರೆಸ್ ಮುಖಂಡರು ಹಾಗೂ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.





























