ಮುಳಬಾಗಿಲು,ಅ.೨೫-ನನಗೆ ಕೋಲಾರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೇಟ್ ಹೈಕಮಾಂಡ್ ನೀಡುವುದಕ್ಕೆ ಮುಂಚೆಯೇ ಸಚಿವ ಕೆ.ಹೆಚ್.ಮುನಿಯಪ್ಪರ ಅಳಿಯ ಮತ್ತು ಮಾಜಿ ಸ್ವೀಕರ್ ಕೆ.ಆರ್.ರಮೇಶ್ ಕುಮಾರ್ ಬೆಂಬಲಿಗರ ಗುಂಪುಗಾರಿಕೆ ಇತ್ತು ಇದರಿಂದಲೇ ನಾನು ಚುನಾವಣೆಯಲ್ಲಿ ಸೋಲಲು ಪ್ರಮುಖ ಕಾರಣ ಎಂದು ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕೆ.ವಿ.ಗೌತಮ್ ತಿಳಿಸಿದರು.
ಕೆಪಿಸಿಸಿ ನೂತನ ಪ್ರಧಾನ ಕಾರ್ಯದರ್ಶಿಯಾದ ನಂತರ ಮೊದಲ ಬಾರಿಗೆ ಮುಳಬಾಗಲಿಗೆ ಆಗಮಿಸಿದ್ದಾಗ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿ, ಕೇವಲ ೧೮ ದಿನಗಳು ಮಾತ್ರ ಚುನಾವಣೆ ಎದುರಿಸಲು ನನಗೆ ಕಾಲಾವಕಾಶ ಸಿಕ್ಕಿತ್ತು ಜೊತೆಗೆ ಬಿಜೆಪಿ ಜೆಡಿಎಸ್ ಮೈತ್ರಿಯಿಂದ ಕೋಮುವಾದದ ವಿಷ ಬೀಜ ಬಿತ್ತಿ ಕುತಂತ್ರಗಳನ್ನು ಮಾಡಿದ್ದರಿಂದ ನಾನು ಚುನಾವಣೆಯಲ್ಲಿ ವಿಧಿ ಇಲ್ಲದೆ ಸೋಲಬೇಕಾಯಿತು ಎಂದು ಬೇಸರ ವ್ಯಕ್ತಪಡಿಸಿದರು.
೬ ಲಕ್ಷ ೨೫ ಸಾವಿರ ಮತಗಳನ್ನು ಕೋಲಾರ ಲೋಕಸಭಾ ಕ್ಷೇತ್ರದ ಜನತೆ ನನಗೆ ನೀಡಿದ್ದಾರೆ ಕೇವಲ ೬೦ ಸಾವಿರ ಮತಗಳ ಕೊರತೆಯಿಂದ ನಾನು ಸೋತ್ತಿದ್ದೇನೆ ಆದರೆ ಮುಂದಿನ ಚುನಾವಣೆಯಲ್ಲಿ ನಾನೇ ಅಭ್ಯರ್ಥಿಯಾಗಿದ್ದು ೨ ಲಕ್ಷ ಮೆಜಾರಿಟಿಯಲ್ಲಿ ಗೆಲ್ಲುವುದು ಖಚಿತ ಎಂದು ತಿಳಿಸಿದರು.
ಕೋಲಾರ ಜಿಲ್ಲೆಯಲ್ಲಿ ಕೆ.ಹೆಚ್.ಮುನಿಯಪ್ಪ ಮತ್ತು ಕೆ.ಆರ್.ರಮೇಶ್ ಕುಮಾರ್ ಹಿರಿಯರಾಗಿದ್ದು ಅವರ ಮನವೊಲಿಸಿ ೨ ಗುಂಪುಗಳನ್ನು ಒಂದು ಮಾಡಲು ಪ್ರಯತ್ನಿಸುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಆವಣಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ರಾಗಿದ್ದ ಎಂ.ಸಿ.ನೀಲಕಂಠೇಗೌಡರು ನಿಧನಗೊಂಡು ಸುಮಾರು ೬ ತಿಂಗಳಾ ಗಿದ್ದು ಈ ಹುದ್ದೆಯನ್ನು ಶೀಘ್ರದಲ್ಲೇ ತುಂಬಿ ಪಕ್ಷ ಸಂಘಟನೆಗೆ ಒತ್ತು ನೀಡುವುದಾಗಿ ಹೇಳಿದರು.
ಮಹದೇವಪುರ ಕ್ಷೇತ್ರದಲ್ಲಿ ೧ ಲಕ್ಷ ಬೋಗಸ್ ಮತಗಳನ್ನು ಸೇರಿಸಿದ್ದರಿಂದ ಕಾಂಗ್ರೆಸ್ ಅಭ್ಯರ್ಥಿ ಸೋತ್ತಿದ್ದಾರೆ ಅದೇ ರೀತಿ ವಾರಣಸಿಯಲ್ಲಿ ಸಹ ಕಾಂಗ್ರೇಸ್ ಅಭ್ಯರ್ಥಿ ಸೋಲಲು ಎನ್‌ಡಿಎ ಮತ ಕಳ್ಳತನ ಮಾಡಿದ್ದಾರೆಂದು ಗಂಭೀರ ಆರೋಪ ಮಾಡಿದರು.
ಮತಕಳ್ಳತನ ಬಗ್ಗೆ ಕ್ರಮ ಕೈಗೊಳ್ಳಲು ಚುನಾವಣಾ ಆಯೋಗದ ಆಯುಕ್ತರಿಗೆ ದೂರು ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಳ್ಳದೇ ಬಿಜೆಪಿ ಏಜೆಂಟರಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರಲ್ಲದೆ ರಾಜ್ಯಾದ್ಯಂತ ಎಲ್ಲಾ ಕಡೆ ಮತ ಕಳ್ಳತನದ ಕುರಿತು ಜನತೆಯಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.
ಕಾಂಗ್ರೆಸ್ ರಾಜ್ಯ ಉಸ್ತುವಾರಿ ಅಭಿಷೇಕ್ ದತ್ ಭಾನುವಾರ ಮುಳಬಾಗಿಲುಗೆ ಬರುತ್ತಿದ್ದು ಇಲ್ಲಿಂದ ಎನ್‌ಡಿಎ ಮೋಸದ ಕುರಿತು ಕಾಂಗ್ರೆಸ್ ಕಾರ್ಯಕರ್ತರಿಂದ ಹಾಗೂ ಜನತೆಯಿಂದ ಸಹಿ ಸಂಗ್ರಹ ಮಾಡಿ ರಾಷ್ಟ್ರಪತಿಗಳಿಗೆ ದೂರು ಸಲ್ಲಿಸುವುದಾಗಿ ಹೇಳಿದರು.
ಕಾಂಗ್ರೆಸ್ ಮುಖಂಡರಾದ ಡಾ.ರಮೇಶ್, ಸಿದ್ದಘಟ್ಟ ಮುನಿಸಾಮಿ ಗೌಡ, ಕಾರ್ಗೀಲ್ ವೆಂಕಟೇಶ್, ಚಂದ್ರಪ್ಪ, ಬೈರಕೂರು ರಾಮಾಂಜಿ, ಚಂದ್ರಶೇಖರ್, ಕಾಡೇನಹಳ್ಳಿ ರವಿ ಕುಮಾರ್, ಯುವ ಕಾಂಗ್ರೇಸ್‌ನ ವೇಣು ಕುಮಾರ್, ಸತೀಶ್, ಪವನ್ ಕಲ್ಯಾಣ್.ಎನ್, ಪ್ರಶಾಂತ್ ಕುಮಾರ್, ಸಂತೋಷ್ ಕುಮಾರ್, ಪವನ್ ಕುಮಾರ್ ಇದ್ದರು.

























