ಕಾಂಗ್ರೆಸ್‌ಗೆ ಜನತೆಯಿಂದ ತಕ್ಕ ಪಾಠ

ಕೆಂಗೇರಿ, ನ. ೧೬:ಗ್ಯಾರಂಟಿ ಯೋಜನೆಗಳ ಮೂಲಕ ಅಧಿಕಾರಕ್ಕೇರಿರುವ ಕರ್ನಾಟಕದ ಕಾಂಗ್ರೆಸ್ ಸರ್ಕಾರಕ್ಕೆ ಮುಂದಿನ ದಿನಗಳಲ್ಲಿ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕೆ. ಆರ್‌ಐಡಿಎಲ್‌ಮಾಜಿ ಅಧ್ಯಕ್ಷ ಎಂ. ರುದ್ರೇಶ್ ಹೇಳಿದರು.


ಬಿಹಾರ ವಿಧಾನಸಭಾ ಕ್ಷೇತ್ರದಲ್ಲಿ ಎನ್‌ಡಿಎ ಅಭ್ಯರ್ಥಿಗಳ ಒಕ್ಕೂಟ ಅಭೂತಪೂರ್ವ ಜಯಭೇರಿ ಸಾಧಿಸಿರುವ ಹಿನ್ನೆಲೆಯಲ್ಲಿ ಯಶವಂತಪುರ ವಿಧಾನಸಭಾ ಕ್ಷೇತ್ರ ಭಾಜಪ ಮಂಡಲ ವತಿಯಿಂದ ಕೆಂಗೇರಿಯ ರಾಜಕುಮಾರ್ ವೃತ್ತದಲ್ಲಿ ಆಯೋಜಿಸಿದ್ದ. ವಿಜಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಬೆಲೆ ಏರಿಕೆ, ಸ್ವಜನ ಪಕ್ಷಪಾತ ಭ್ರಷ್ಟಾಚಾರದಲ್ಲಿ ಮುಳುಗಿರುವ ಕಾಂಗ್ರೆಸ್ ಸರ್ಕಾರಕ್ಕೆ ಬಿಹಾರ ರಾಜ್ಯದ ಚುನಾವಣಾ ಫಲಿತಾಂಶ ಎಚ್ಚರಿಕೆಯ ಗಂಟೆಯಾಗಿದೆ ಎಂದರು. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಸ್ವಚ್ಛ ಆಡಳಿತ ಹಾಗೂ ನಿತೀಶ್ ಕುಮಾರ್ ಅವರ ಅಭಿವೃದ್ಧಿಪರ ಚಿಂತನೆಯ ಫಲವಾಗಿ ಮತ್ತೊಮ್ಮೆ ಬಿಹಾರದಲ್ಲಿ ಎನ್‌ಡಿಎ ಒಕ್ಕೂಟ ಅಭೂತಪೂರ್ವ ಜಯ ಸಾಧಿಸಿರುವುದು ಸ್ವಚ್ಛ ಆಡಳಿತಕ್ಕೆ ಸಿಕ್ಕಿರುವ ಗೌರವವಾಗಿದೆ ಎಂದರು. ಕಾಂಗ್ರೆಸ್ ಪಕ್ಷದ ದುರಾಡಳಿತದಿಂದ ಮುಂದಿನ ದಿನಗಳಲ್ಲಿ ದೇಶದಲ್ಲಿ ಕಾಂಗ್ರೆಸ್ ಪಕ್ಷ ತನ್ನ ಅಸ್ತಿತ್ವ ಕಳೆದುಕೊಳ್ಳಲಿದೆ ಎಂದು ಭವಿಷ್ಯ ನುಡಿದರು.


ವಿಧಾನಸಭಾ ಕ್ಷೇತ್ರ ಜೆಡಿಎಸ್ ಯುವ ಘಟಕದ ಅಧ್ಯಕ್ಷ ಕೇಶವಮೂರ್ತಿ, ಬಿಬಿಎಂಪಿ ಮಾಜಿ ರ.ಅಂಜನಪ್ಪ, ರಾಜ್ಯ ಭಾಜಪ ಹಿಂದುಳಿದ ವರ್ಗಗಳ ಸಮಿತಿ ಸದಸ್ಯ ಆರ್ ಪಿ ಪ್ರಕಾಶ್, ಬಿಜೆಪಿ ಮುಖಂಡರಾದ ಜೆ ರಮೇಶ್, ನಾಗರಾಜ್, ಶಶಿಕುಮಾರ್, ಸುಧೀರ್, ಕೊಮ್ಮಘಟ್ಟ ಮಹೇಶ್ ಮತ್ತಿತರರು ಉಪಸ್ಥಿತರಿದ್ದು ಸಿಹಿ ಹಂಚಿ ಸಂಭ್ರಮಿಸಿದರು