ಕಲಬುರಗಿ:ಜೂ.13: ಎಐಸಿಸಿ ಅಧ್ಯಕ್ಷರು ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ್ ಖರ್ಗೆಯವರು ಕಲಬುರಗಿಯಲ್ಲಿ ರೈಲ್ವೆ ವಿಭಾಗ ಏಕೆ ಮಾಡಲಿಲ್ಲ? ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಅಂಕಿಸಂಖ್ಯೆಗಳು ತಿಳಿಯುತ್ತಿಲ್ಲ. ಕೇಂದ್ರ ಸರ್ಕಾರದ ವಿರುದ್ಧ ಬೆಂಗಳೂರಿನಲ್ಲೇ ಕುಳಿತು ಟೀಕೆ ಮಾಡಿತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಮತ್ತು ಸಂಸದ ಜಗದೀಶ್ ಶೆಟ್ಟರ್ ಅವರ ಹೇಳಿಕೆ ಖಂಡನಾರ್ಹ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹಾಗೂ ರಾಜ್ಯ ವಿಧಾನ ಪರಿಷತ್ ಸದಸ್ಯ ಜಗದೇವ್ ಗುತ್ತೇದಾರ್ ಕಾಳಗಿ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಮಲ್ಲಿಕಾರ್ಜುನ್ ಖರ್ಗೆ ಅವರು ಹಿಂದುಳಿದ ಕಲ್ಯಾಣ ಕರ್ನಾಟಕ ಭಾಗಕ್ಕೆ ರೈಲ್ವೆ ವಿಭಾಗ ಮಾಡಲು ಸಾಕಷ್ಟು ಪ್ರಯತ್ನಿಸಿ ರೈಲ್ವೆ ವಿಭಾಗಕ್ಕೆ ಸ್ಥಳ ನೋಡಿ ಜಮೀನು ಕೂಡಾ ಖರೀದಿ ಮಾಡಿ ಎಲ್ಲ ಕೆಲಸಗಳು ತ್ವರಿತಗತಿಯಲ್ಲಿ ನಡೆದಾಗ ಅವದಿ ಮುಕ್ತಾಯಗೊಂಡು ಲೋಕಸಭೆ ಚುನಾವಣೆ ನಡೆದು ಸುಳ್ಳಿನ ಸರದಾರ ಪ್ರಧಾನಿ ನರೇಂದ್ರ ಮೋದಿಯವರು ಸುಳ್ಳು ಆಶ್ವಾಸನೆ ನೀಡುತ್ತಾ ಲೋಕಸಭೆ ಚುನಾವಣೆ ನಡೆದು ಮುಂದೆ ದೇಶದಲ್ಲಿ ಬಿಜೆಪಿ ಸರ್ಕಾರ ಬಂದು ಕಲಬುರ್ಗಿ ರೈಲ್ವೆ ವಿಭಾಗ ಮಾಡದೇ ಕಲ್ಯಾಣ ಕರ್ನಾಟಕ ಭಾಗಕ್ಕೆ ಘೋರ ಅನ್ಯಾಯ ಮಾಡಿದರು ಎಂದು ಅವರು ಹೇಳಿಕೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಷ್ಟೆಲ್ಲ ಗೊತ್ತಿದ್ದರೂ ಕೂಡಾ ಜಗದೀಶ್ ಶೆಟ್ಟgರ್ ಅವರು ಚಿಕ್ಕ ಮಕ್ಕಳಂತೆ ಪ್ರಚಾರಕ್ಕಾಗಿ ಖರ್ಗೆಯವರ ಬಗ್ಗೆ ಮಾತನಾಡಿದ್ದು ಯಾವ ನ್ಯಾಯ? ರೈಲ್ವೆ ವಿಭಾಗದ ಕುರಿತು ಖರ್ಗೆಯವರು ಮಾಡಿದ್ದು ಬಿಜೆಪಿಯವರು ಏಕೆ ಮುಂದೆ ಜಾರಿಗೆ ತರಲಿಲ್ಲ ಎಂಬುದು ಮೊದಲು ಜಗದೀಶ್ ಶೆಟ್ಟರ್ ಅವರು ಉತ್ತರ ನೀಡಬೇಕು. ಕಲ್ಯಾಣ ಕರ್ನಾಟಕದ ಬಗ್ಗೆ ಅಭಿವೃದ್ಧಿ ವಿರೋಧಿ ನೀತಿ ಅನುಸರಿಸುವುದು, ಕಾಳಜಿ ತೋರಿಸದೇ ಇರುವ ಬಿಜೆಪಿಯವರಿಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಅವರು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ಕೇಂದ್ರದಿಂದ ಕರ್ನಾಟಕಕ್ಕೆ ಬರುವ ಜಿಎಸ್‍ಟಿ ಪಾಲು ಕೇಂದ್ರ ನೀಡಿಲ್ಲ ಹಾಗೂ ಕೇಂದ್ರದಿಂದ ಕರ್ನಾಟಕಕ್ಕೆ ಅನುದಾನ ಕೂಡಾ ಬಂದಿಲ್ಲ. ಇದರಿಂದ ಬಿಜೆಪಿ ವಿರುದ್ಧ ಸುಪ್ರೀಂಕೋರ್ಟ್ ಹೋಗಲಾಗಿದೆ. ಇದು ಬಿಜೆಪಿ ಯವರ ತಾರತಮ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಜನಪರ, ಅಭಿವೃದ್ಧಿಪರ, ದೂರದೃಷ್ಟಿ ನೇತಾರ ಇವರ ಬಗ್ಗೆ ಮಾತನಾಡುವ ಹಕ್ಕು ಜಗದೀರ್ ಶೆಟ್ಟರ್ ಅವರಿಗಿಲ್ಲ ಎಂದು ಅವರು ಕಿಡಿಕಾರಿದ್ದಾರೆ.
ಶೆಟ್ಟರ್ ಅವರು ಮುಖ್ಯಮಂತ್ರಿಯಾಗಿದ್ದ ಅವದಿಯಲ್ಲಿ ಕರ್ನಾಟಕ ಅಭಿವೃದ್ಧಿಯಲ್ಲಿ ಶೂನ್ಯ ಅಂಕ ಗಳಿಸಿದೆ. ಸಿದ್ಧರಾಮಯ್ಯನವರು ಕರ್ನಾಟಕದ ಇತಿಹಾಸದಲ್ಲಿ 16 ಬಾರಿ ಬಜೆಟ್ ಮಂಡನೆ ಮಾಡಿದ ಒಬ್ಬ ಇತಿಹಾಸಕಾರ ನಾಯಕನೆಂದರೂ ತಪ್ಪಾಗಲಾರದು. ಜಗದೀಶ್ ಶೆಟ್ಟರ್ ಅವರು ಒಬ್ಬ ಮಾಜಿ ಮುಖ್ಯಮಂತ್ರಿಯಾಗಿ ಸಂಸದರಾಗಿ ಈ ರೀತಿ ಪ್ರಚಾರಕ್ಕಾಗಿ ಮಾತನಾಡುವುದು ಅವರ ಸ್ಥಾನಕ್ಕೆ ಶೋಭೆ ತರುವಂತದ್ದಲ್ಲ ಎಂದು ಅವರು ಟೀಕಿಸಿದ್ದಾರೆ.