
ಔರಾದ : ಫೆ.3:ಭಾಷೆ, ಸಾಹಿತ್ಯ, ಸಂಸ್ಕೃತಿ ಸಮೃದ್ಧಿಗೆ ಸಮ್ಮೇಳನಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನ್ನಶೆಟ್ಟಿ ತಿಳಿಸಿದರು.
ಪಟ್ಟಣದ ಕನ್ನಡ ಭವನದಲ್ಲಿ ನಡೆದ ಔರಾದ ತಾಲೂಕು ಏಳನೇ ಕನ್ನಡ ಸಾಹಿತ್ಯ ಸಮ್ಮೇಳನ ನಿಮಿತ್ತ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಔರಾದ ಪಟ್ಟಣದಲ್ಲಿ ನಡೆಯಲಿರುವ ಕನ್ನಡ ನುಡಿ ಜಾತ್ರೆಗೆ ಕ್ಷಣಗಣನೆ ಶುರುವಾಗಿದ್ದು ಪಟ್ಟಣವೆಲ್ಲ ಕನ್ನಡಮಯವಾಗಿದೆ, ಏಳನೇ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ಸಿಗೆ ಎಲ್ಲರೂ ಕೈಜೋಡಿಸಬೇಕು, ಈ ಗಡಿ ಭಾಗದಲ್ಲಿ ಕನ್ನಡಕ್ಕಾಗಿ ದುಡಿದ ಮಹಾನೀಯರ ಹಾಗೂ ಔರಾದ ಹಿರಿಮೆ ಬಿತ್ತರಿಸುವ ಚಿತ್ರಣ ಆಹ್ವಾನ ಪತ್ರಿಕೆಯಲ್ಲಿ ಮೂಡಿ ಬಂದಿದೆ.
ಈ ಗಡಿ ಭಾಗದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ರಾಜಕಾರಣಿಗಳ ಇಚ್ಚಾ ಶಕ್ತಿಯ ಕೊರತೆಯಿಂದ ಆಂಗ್ಲ ಮಾಧ್ಯಮ ಶಾಲೆಗಳು ತಲೆ ಎತ್ತುತ್ತಿವೆ, ಅನೇಕ ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯ ಇಲ್ಲದೆ ಪಾಲಕರು ಖಾಸಗಿ ಶಾಲೆಗಳತ್ತ ಮುಖ ಮಾಡುತ್ತಿದ್ದಾರೆ, ಪಾಲಕರಲ್ಲಿ ಕನ್ನಡ ಅಸ್ಮಿತೆ ಅಭಿಮಾನ ಮೂಡಿಸುವ ಕಾರ್ಯ ಮಾಡಬೇಕಾಗಿದೆ, ಕನ್ನಡ ಶಾಲೆಗಳು ಉಳಿದಾಗ ಮಾತ್ರವೇ ಕನ್ನಡ ಉಳಿಯುತ್ತದೆ ಈ ನಿಟ್ಟಿನಲ್ಲಿ ರಾಜ್ಯವ್ಯಾಪಿ ಹೋರಾಟ ನಡೆಸಲಾಗುವುದು. ಮತ್ತೊಮ್ಮೆ ಗೋಕಾಕ ಚಳುವಳಿ ಅಂತಹ ಚಳುವಳಿ ಅವಶ್ಯಕತೆ ಇದೆ ಎಂದು ತಿಳಿಸಿದರು.
ತಾಲೂಕು ಕಸಾಪ ಅಧ್ಯಕ್ಷ ಬಾಲಾಜಿ ಅಮರವಾಡಿ ಅವರು ಮಾತನಾಡಿ ಏಳನೇ ಕನ್ನಡ ಸಾಹಿತ್ಯ ಸಮ್ಮೇಳನ ವಿಶೇಷವಾಗಿ ಜರುಗುತ್ತಲಿದ್ದು ಎಲ್ಲರೂ ಕೈಜೋಡಿಸಬೇಕು, ಎಲ್ಲ ಕಸಾಪ ಆಜೀವ ಸದಸ್ಯರಿಗೆ ಅಂಚೆ ಮೂಲಕ ಕರಪತ್ರ ಕಳುಹಿಸಲಾಗಿದೆ, ಔರಾದ ಹಿರಿಯನ್ನು ಪಸರಿಸುವ ಕಾರ್ಯ ನಡೆಯುತ್ತಿದೆ. ನಾಳೆ ಬೆಳಿಗ್ಗೆ ಅಮರೇಶ್ವರ ದೇಗುಲದಿಂದ ಭವ್ಯ ಮೆರವಣಿಗೆ ನಡೆಯಲಿದ್ದು ಅದರಲ್ಲಿ ಡೊಳ್ಳು ಕುಣಿತ, ಲಂಬಾಣಿ ನೃತ್ಯ, ಹಲಗಿ ಕುಣಿತ, ಸ್ಥಳಿಯ ಕಲಾ ತಂಡಗಳು ಕನ್ನಡ ರತ್ನತ್ರಯರ ಭಾವಚಿತ್ರಗಳ ಮೆರವಣಿಗೆ ನಡೆಯಲಿದೆ. ತಹಸೀಲ್ದಾರ ಮಹೇಶ ಪಾಟೀಲ ಅವರು ಕನ್ನಡ ಧ್ವಜಾರೋಹಣ ನೆರವೇರಿಸುವರು, ಖ್ಯಾತ ಸಂಸ್ಕೃತಿ ಚಿಂತಕ ಮಹೇಶ ಚಟ್ನಾಳ್ಳಿ ಕಾರ್ಯಕ್ರಮ ಉದ್ಘಾಟಿಸುವರು, ಪ್ರಗತಿಪರ ರೈತ ಚಿಂತಕಿ ಕವಿತಾ ಮಿಶ್ರಾ, ಶಾಸಕ ಪ್ರಭು ಚವ್ಹಾಣ ಅಧ್ಯಕ್ಷತೆ, ಮುಖ್ಯ ಅತಿಥಿಗಳಾಗಿ ಸಂಸದ ಸಾಗರ ಖಂಡ್ರೆ ಸೇರಿದಂತೆ ಅನೇಕರು ಪಾಲ್ಗೊಳ್ಳಲಿದ್ದಾರೆ ತಾಲೂಕಿನ ಸಮಸ್ತ ಕನ್ನಡ ಮನಸ್ಸುಗಳು ಸಮ್ಮೇಳನದಲ್ಲಿ ಭಾಗವಹಿಸಿ ಸಮ್ಮೇಳನ ಯಶಸ್ವಿ ಗೊಳಿಸಬೇಕು ಎಂದು ತಿಳಿಸಿದರು.
ಈ ಸಂಧರ್ಭದಲ್ಲಿ ವೈಜಿನಾಥ ಬುಟ್ಟೆ, ಶಿವರಾಜ ಅಲ್ಮಾಜೆ, ಶಿವಶಂಕರ ಟೋಕರೆ, ಗುರುನಾಥ ರಾಜಗೀರಾ, ಮಹಾನಂದಾ ಎಂಡೆ, ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ಮುಕ್ತೆದಾರ, ಮಲ್ಲಿಕಾರ್ಜುನ ಟಂಕಸಾಲೆ ಅಶೋಕ ಶೆಂಬೆಳ್ಳಿ, ಆನಂದ ದ್ಯಾಡೆ, ಮಹಾದೇವ ಶಿಂಧೆ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

























