
ಯಾದಗಿರಿ: ಫೆ.೧೮:ಆರ್ ಎಸ್ ಎಸ್ ಬಗ್ಗೆ ಸಚಿವರ ಹೇಳಿಕೆ ರಾಜಕೀಯವಾಗಿ ಪ್ರೇರಿತವಾಗಿದ್ದು, ಹುದ್ದೆಯ ಗೌರವಕ್ಕೆ ಧಕ್ಕೆಯುಂಟು ಮಾಡುವಂತಿದೆ ಎಂದು ಯಾದಗಿರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಯುವ ಮುಖಂಡ ಮಹೇಶರಡ್ಡಿ ಮುದ್ನಾಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಇನ್ನೂ
ಪತ್ರಿಕಾ ಪ್ರಕಟಣೆ ಮೂಲಕ ಪ್ರತಿಕ್ರಿಯಿಸಿದ ಅವರು, ಕಲ್ಬುರ್ಗಿ ಉಸ್ತುವಾರಿ ಸಚಿವರು ಹಾಗೂ ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಯ ಸಚಿವರಾದ ಪ್ರಿಯಾಂಕ ಖರ್ಗೆ ಅವರು ಆರ್ ಎಸ್ ಎಸ್ ಅನ್ನು ದೆವ್ವಕ್ಕೆ ಹೋಲಿಕೆ ಮಾಡಿರುವುದು ಅತ್ಯಂತ ದುರದೃಷ್ಟಕರ ಎಂದರು. ವಿಶ್ವದ ಅತಿ ದೊಡ್ಡ ಸ್ವಯಂಸೇವಕ ಸಂಘಟನೆಗಳಲ್ಲಿ ಒಂದಾದ ರಾಷ್ಟ್ರೀಯ ಸ್ವಯಂಸೇವಕ ಸಂಘ ಬಗ್ಗೆ ಈ ರೀತಿಯ ಅವಹೇಳನಕಾರಿ ಹೇಳಿಕೆ ನೀಡುವುದು ಸರಿಯಲ್ಲ ಎಂದು ಹೇಳಿದರು.
ಹಾಗೆಯೇ ಭಾರತೀಯ ಜನತಾ ಪಕ್ಷ ಹಾಗೂ ಅದರ ಸಿದ್ಧಾಂತಗಳ ವಿರುದ್ಧ ನಿರಂತರ ಟೀಕೆ ಮಾಡುವ ಮೂಲಕ ಸಚಿವರು ರಾಜಕೀಯ ಪ್ರಚಾರಕ್ಕೇ ಹೆಚ್ಚು ಮಹತ್ವ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಚಿಟ್ಟಾಪುರ ಕ್ಷೇತ್ರದ ಜನಪ್ರತಿನಿಧಿಯಾಗಿರುವ ಖರ್ಗೆ ಅವರು ತಮ್ಮ ಕ್ಷೇತ್ರದ ಅಭಿವೃದ್ಧಿಯ ಕಡೆ ಗಮನ ಹರಿಸುವುದು ಮುಖ್ಯ. ಕುಡಿಯುವ ನೀರಿನ ಸಮಸ್ಯೆ, ರಸ್ತೆ ಮೂಲಸೌಕರ್ಯಗಳ ಕೊರತೆ, ಕೈಗಾರಿಕಾ ಅಭಿವೃದ್ಧಿಯ ಅಭಾವ, ಯುವಕರಿಗೆ ಉದ್ಯೋಗಾವಕಾಶಗಳ ಕೊರತೆ ಮುಂತಾದ ಅನೇಕ ಸಮಸ್ಯೆಗಳು ಇಂದಿಗೂ ಮುಂದುವರಿದಿವೆ ಎಂದು ಟೀಕಿಸಿದರು.
ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಹಾಗೂ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರು ಮೆಚ್ಚಿದ್ದ ಸಂಘದ ದೇಶಭಕ್ತಿ ಪರಂಪರೆಯನ್ನು ಹೀಯಾಳಿಸುವುದು ಸಮಾಜದಲ್ಲಿ ಅನಾವಶ್ಯಕ ಭಿನ್ನಾಭಿಪ್ರಾಯ ಸೃಷ್ಟಿಸುವಂತಾಗಿದೆ ಎಂದು ಮುದ್ನಾಳ ಅಭಿಪ್ರಾಯಪಟ್ಟರು.
ಕಲ್ಯಾಣ ಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿಗೆ ಕೈಗಾರಿಕೆಗಳು, ಐಟಿ-ಬಿಟಿ ಸಂಸ್ಥೆಗಳು, ಮೂಲಸೌಕರ್ಯ ಯೋಜನೆಗಳನ್ನು ತರಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯುವುದನ್ನು ಬಿಟ್ಟು ವಿವಾದಾತ್ಮಕ ಹೇಳಿಕೆ ನೀಡುವುದು ಸಚಿವ ಸ್ಥಾನಕ್ಕೆ ತಕ್ಕದ್ದು ಅಲ್ಲ ಎಂದು ಅವರು ಹೇಳಿದರು.
ಸಾರ್ವಜನಿಕ ಜೀವನದಲ್ಲಿ ಜವಾಬ್ದಾರಿಯುತ ಭಾಷೆ ಬಳಸಬೇಕು ಹಾಗೂ ಅಭಿವೃದ್ಧಿ ಕಾರ್ಯಗಳತ್ತ ಗಮನಹರಿಸಬೇಕು ಎಂದು ಮುದ್ನಾಳ ಆಗ್ರಹಿಸಿದರು.



























