
ಮಾಲೂರು,ಅ.೧೦ – ನಾಡಹಬ್ಬ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ನವೆಂಬರ್ ೧ರಂದು ತಾಲ್ಲೂಕು ಆಡಳಿತ ಹಾಗೂ ನಮ್ಮ ಕರ್ನಾಟಕ ಸೇನೆ ನೇತೃತ್ವದಲ್ಲಿ, ಕನ್ನಡ ಪರ ಸಂಘಟನೆಗಳ ಒಕ್ಕೂಟದ ಸಹಕಾರದಿಂದ ನಗರದ ಸಾಮರ್ಥ್ಯ ಸೌಧ ಸಮುಹಾಭಣದಲ್ಲಿ ಅದ್ದೂರಿಯಾಗಿ ಆಚರಣೆ ಮಾಡಲು ತೀರ್ಮಾನಿಸಲಾಗಿದೆ ಎಂದು ತಹಶೀಲ್ದಾರ್ ಎಂ.ವಿ.ರೂಪ ಹೇಳಿದರು.
ನಗರದ ಸಾಮರ್ಥ್ಯ ಸೌಧದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,ರಾಜ್ಯಸಭಾ ನಿಲುವಳಿಕೆ ಕಾರಣದಿಂದ ಶಾಸಕ ಅನುಪಸ್ಥಿತಿಯಲ್ಲಿದ್ದು, ನಗರದ ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳ ಸಮ್ಮುಖದಲ್ಲಿ ಕರ್ನಾಟಕ ಸೇನೆಯ ಚಾಕನಹಳ್ಳಿ ನಾಗರಾಜ್ ಅವರ ನೇತೃತ್ವದಲ್ಲಿ ಸಂಘಟನೆಗಳ ಸಹಾಯದಿಂದ ಕನ್ನಡ ರಾಜ್ಯೋತ್ಸವವನ್ನು ಹಮ್ಮಿಕೊಳ್ಳಲಾಗುವುದು ಎಂದರು.
ಅದ್ದೂರಿ ರಾಜ್ಯೋತ್ಸವ ಮೆರವಣಿಗೆ, ಗ್ರಾ.ಪಂ. ಪಲ್ಲಕ್ಕಿಗಳು, ವಿವಿಧ ಇಲಾಖೆಗಳ ಪಥಚಿತ್ರಗಳು, ನಗರದಲ್ಲಿ ವಿದ್ಯುತ್ ದೀಪಾಲಂಕಾರ, ಧ್ವಜಾರೋಹಣ ನಡೆಯಲಿದೆ. ಪ್ರಗತಿಪರ ರೈತರಿಗೆ ಗೌರವ ಸಮರ್ಪಣೆ, ವಿವಿಧ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗಿದೆ ಎಂದು ತಹಶೀಲ್ದಾರ್ ಹೇಳಿದರು.
ನಮ್ಮ ಕರ್ನಾಟಕ ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಚಾಕನಹಳ್ಳಿ ನಾಗರಾಜ್ ಮಾತನಾಡಿ, ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲು ತೀರ್ಮಾನಿಸಲಾಗಿದೆ. ಭುವನೇಶ್ವರಿ ದೇವಿಯ ಭವ್ಯ ಮೆರವಣಿಗೆ, ಮಾಸ್ತಿ ವೆಂಕಟೇಶ ಅಯ್ಯಂಗಾರ್ ರಂಗಮಂದಿರದಲ್ಲಿ ಮೂರು ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ಸಭೆಯಲ್ಲಿ ತಾ.ಪಂ. ಇಒ.ವಿ.ಕೃಪ್ಪ, ನಗರಸಭಾ ಪೌರಾಯುಕ್ತ ಎಂ.ಎಸ್.ಮಹದೇವ್, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಎಚ್.ಎಂ.ವಿಜಯನರಸಿಂಹ, ನಮ್ಮ ಕರ್ನಾಟಕ ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಚಾಕನಹಳ್ಳಿ ನಾಗರಾಜ್, ಕನ್ನಡ ಪರ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು





















