ಮೂರು ತಿಂಗಳ ಕನ್ನಡ ಕಲಿಕಾ ತರಗತಿಗಳ ಸಮಾರೋಪ

ಬೀದರ:ಡಿ.29:ಕಲ್ಯಾಣ ಕರ್ನಾಟಕ ಅಶ್ವಿನಿ ಶಿಕ್ಷಣ ಸಂಸ್ಥೆ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಇವರ ಸಹಯೋಗದಲ್ಲಿ ಯಾಕತಪೂರ ಗ್ರಾಮದಲ್ಲಿ ಮೂರು ತಿಂಗಳ ಕಾಲ ನಡೆಸಲಾದ ಕನ್ನಡ ಕಲಿಕಾ ತರಗತಿಗಳ ಸಮಾರೋಪ ಸಮಾರಂಭವು ಭಾನುವಾರ ನಡೆಯಿತು.

ಕಾರ್ಯಕ್ರಮಕ್ಕೆ ಅಧ್ಯಕ್ಷತೆ ವಹಿಸಿದ್ದ ಕುಪೇಂದ್ರ ಎಸ್. ಹೊಸಮನಿ ಅವರು ಭುವನೇಶ್ವರಿ ದೇವಿಗೆ ಪೂಜೆ ಸಲ್ಲಿಸುವ ಮೂಲಕ ಉದ್ಘಾಟಿಸಿದರು. ಮೂರು ತಿಂಗಳ ಅವಧಿಯಲ್ಲಿ ಮಕ್ಕಳಿಗೆ ಕನ್ನಡ ಭಾಷೆ, ನಾಡು-ನುಡಿ, ಸಾಹಿತ್ಯ ಹಾಗೂ ಕನ್ನಡ ನಾಡಿನ ಚರಿತ್ರೆಯ ಕುರಿತು ಪಾಠಗಳನ್ನು ನೀಡಲಾಗಿದೆ ಎಂದು ತಿಳಿಸಿದರು. ಗಡಿ ಗ್ರಾಮಗಳಲ್ಲಿ ಈ ತರಗತಿಗಳ ಅವಧಿಯನ್ನು ಕನಿಷ್ಠ ಆರು ತಿಂಗಳುಗಳಿಂದ ಒಂದು ವರ್ಷದವರೆಗೆ ವಿಸ್ತರಿಸಬೇಕು ಎಂದು ಅವರು ಮನವಿ ಮಾಡಿದರು.

ಯುವ ಸಮಾಜಸೇವಕ ಸುರೇಶ್ ಬಿಟ್ಟೆ ಮಾತನಾಡಿ, ಸರ್ಕಾರ ಇಂತಹ ಕಾರ್ಯಕ್ರಮಗಳಿಗೆ ಬೆಂಬಲ ನೀಡಿರುವುದು ಶ್ಲಾಘನೀಯವಾದರೂ ಕನ್ನಡ ಕಲಿಕಾ ಕೇಂದ್ರಗಳು ಒಂದು ವರ್ಷ ನಿರಂತರವಾಗಿ ನಡೆಯಬೇಕು ಎಂದರು. ಡಾ. ಗಂಗಾಂಜಲಿ ಅವರು ಕನ್ನಡ ಕಲಿಕೆ ಸಂಸ್ಕøತಿಯ ಬೆಳವಣಿಗೆಗೆ ಅತ್ಯಂತ ಅಗತ್ಯವಾಗಿದ್ದು, ಗಡಿ ಗ್ರಾಮಗಳಲ್ಲಿ ಕನ್ನಡ ಬಳಕೆಯನ್ನು ಉತ್ತೇಜಿಸಬೇಕು ಎಂದು ಹೇಳಿದರು.

ಮುಸ್ಲಿಂ ಸಮುದಾಯದ ಹಿರಿಯ ಮುಖಂಡ ಗೌಸುದ್ದೀನ್ ಅವರು ಕನ್ನಡ ಕಲಿಕಾ ಕೇಂದ್ರಗಳು ಗ್ರಾಮೀಣ ಬಡ ಮಕ್ಕಳಿಗೆ ಬಹಳ ಉಪಯುಕ್ತವಾಗಿವೆ ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಮಹಿಳಾ ಹೋರಾಟಗಾರ್ತಿ ಹೂವಮ್ಮ, ಅಕ್ಷಿತಾ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಯಾಕತಪೂರ ಗ್ರಾಮದ ಕನ್ನಡ ಕಲಿಕಾ ಕೇಂದ್ರದ ಶಿಕ್ಷಕಿ ಶ್ರೀಮತಿ ಅಶ್ವಿನಿ ಕೆ. ವಹಿಸಿದ್ದರು. ಗ್ರಾಮಸ್ಥರು, ಶಿಕ್ಷಣ ಪ್ರೇಮಿಗಳು, ಮಕ್ಕಳು ಹಾಗೂ ಸಾರ್ವಜನಿಕರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.