
ಅಥಣಿ : ಫೆ.೧೯:ಡಿಜಿಟಲ್ ಸಾಕ್ಷರತೆಗೆ ಕಂಪ್ಯೂಟರ್ ಶಿಕ್ಷಣ ಭದ್ರ ಬುನಾದಿಯಾಗಿದೆ. ಇಂದಿನ ಮಕ್ಕಳ ಸರ್ವಾಂಗೀಣ ಅಭಿವೃದ್ಧಿ ಮತ್ತು ಭವಿಷ್ಯದ ಸ್ಪರ್ಧಾತ್ಮಕ ಜಗತ್ತಿಗೆ ಕಂಪ್ಯೂಟರ್ ಜ್ಞಾನ ಅನಿವಾರ್ಯವಾಗಿದೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಅವರು ತಾಲೂಕಿನ ಘಟನಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ (ಕೆ.ಎಚ್.ಪಿ.ಎಸ್) ೭೫ನೇ ವರ್ಷದ ಅಮೃತ ಮಹೋತ್ಸವ ಸಂಭ್ರಮದ ನಿಮಿತ್ತವಾಗಿ, ಶಾಲೆಗೆ ಎರಡು ಸುಸಜ್ಜಿತ ಕಂಪ್ಯೂಟರ್, ಮಾನಿಟರ್ ಹಾಗೂ ಬ್ಯಾಟರಿಗಳನ್ನು ದೇಣಿಗೆ ನೀಡಿ ಮಾತನಾಡುತ್ತಿದ್ದರು. ಗ್ರಾಮೀಣ ಭಾಗದ ಸರ್ಕಾರಿ ಶಾಲೆಯ ಮಕ್ಕಳು ತಾಂತ್ರಿಕ ಶಿಕ್ಷಣದಿಂದ ವಂಚಿತರಾಗಬಾರದು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕಂಪ್ಯೂಟರ್ ಜ್ಞಾನ ಅತಿ ಅವಶ್ಯಕವಾಗಿದೆ. ಘಟನಟ್ಟಿ ಶಾಲೆಯು ೭೫ ವರ್ಷಗಳನ್ನು ಪೂರೈಸಿ ಅಮೃತ ಮಹೋತ್ಸವ ಆಚರಿಸಿರುವುದು ಹೆಮ್ಮೆಯ ವಿಷಯ. ಈ ಸಂಭ್ರಮದ ನೆನಪಿಗಾಗಿ ನಾನು ನೀಡಿದ ಈ ಕಿರು ಕೊಡುಗೆಯು ವಿದ್ಯಾರ್ಥಿಗಳ ಡಿಜಿಟಲ್ ಕಲಿಕೆಗೆ ದಾರಿಯಾಗಲಿ. ಮುಂದಿನ ದಿನಗಳಲ್ಲಿ ಕ್ಷೇತ್ರದಾದ್ಯಂತ ಸರ್ಕಾರಿ ಶಾಲೆಗಳ ಮೂಲಭೂತ ಸೌಕರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು,” ಎಂದು ತಿಳಿಸಿದರು.
ಶಾಲೆಯ ಅಮೃತ ಮಹೋತ್ಸವದ ನೆನಪಿಗಾಗಿ ನೀಡಲಾದ ಈ ಕೊಡುಗೆಯು ವಿದ್ಯಾರ್ಥಿಗಳ ತಾಂತ್ರಿಕ ಜ್ಞಾನದ ವೃದ್ಧಿಗೆ ಮತ್ತು ಶಾಲೆಯ ಅಭಿವೃದ್ಧಿಗೆ ದೊಡ್ಡ ಬಲ ನೀಡಲಿದೆ ಎಂದು ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.
ಕಾರ್ಯಕ್ರಮದಲ್ಲಿ ತಾ.ಪಂ.ಅಧಿಕಾರಿ ಶಿವಾನಂದ ಕಲ್ಲಾಪುರ, ಎಸ್‌ಡಿಎಂಸಿ ಅಧ್ಯಕ್ಷ ನಾರಾಯಣ ಕದಮ, ಮುಖ್ಯೋಪಾಧ್ಯಾಯ ಸಿ.ಎಸ್. ಕೋಟ್ಯಾಳ, ಶಿಕ್ಷಕರಾದ ಆರ್.ಎಸ್. ಕಾಂಬಳೆ, ಎಲ್. ಎಂ. ಶಾಂತಕುಮಾರ್ ಹಾಗೂ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀಶೈಲ ಕಾಂಬಳೆ ಉಪಸ್ಥಿತರಿದ್ದು, ಶಾಸಕರ ಶೈಕ್ಷಣಿಕ ಕಾಳಜಿಗೆ ಕೃತಜ್ಞತೆ ಸಲ್ಲಿಸಿದರು. ಶಾಲೆಯ ಶಿಕ್ಷಕ ವೃಂದ ಹಾಗೂ ಸಿಬ್ಬಂದಿ ವರ್ಗದವರು ಈ ವೇಳೆ ಭಾಗವಹಿಸಿದ್ದರು.

























