
ಹುಳಿಯಾರು, ನ. ೮- ಹುಳಿಯಾರು-ಕೆಂಕೆರೆ ಬಿ.ಎಂ.ಎಸ್. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉದ್ಯೋಗಾವಕಾಶಗಳ ಕೋಶ ವತಿಯಿಂದ ಕಂಪ್ಯೂಟರ್ ಸಾಕ್ಷರತಾ ಕಾರ್ಯಕ್ರಮ ಉದ್ಘಾಟನಾ ಸಮಾರಂಭವನ್ನು ಕಾಲೇಜಿನ ಕಂಪ್ಯೂಟರ್ ಲ್ಯಾಬ್‌ನಲ್ಲಿ ಏರ್ಪಡಿಸಲಾಗಿತ್ತು.
ಗ್ರಾಮೀಣ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಜ್ಞಾನ ನೀಡುವ ಉದ್ದೇಶದಿಂದ ಕಳೆದ ಎರಡು ವರ್ಷಗಳಿಂದ ಕಾಲೇಜಿನಲ್ಲಿ ಉಚಿತ ಕಂಪ್ಯೂಟರ್ ಶಿಕ್ಷಣ ತರಗತಿಗಳನ್ನು ಯಶಸ್ವಿಯಾಗಿ ನಡೆಸಲಾಗುತ್ತಿದ್ದು, ಅದೇ ಯೋಜನೆಯ ಮುಂದುವರಿಕೆಯಾಗಿ ೨೦೨೫?೨೬ ನೇ ಶೈಕ್ಷಣಿಕ ಸಾಲಿನ ತರಗತಿಗಳ ಉದ್ಘಾಟನೆ ನೆರವೇರಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಪ್ರೊ. ವೀರಣ್ಣ ಎಸ್.ಸಿ. ಮಾತನಾಡಿ, ಜಾಗತೀಕರಣ ಮತ್ತು ಡಿಜಿಟಲೀಕರಣದ ಈ ಯುಗದಲ್ಲಿ ಕಂಪ್ಯೂಟರ್ ಶಿಕ್ಷಣವು ಜೀವನದ ಅವಿಭಾಜ್ಯ ಭಾಗವಾಗಿದೆ. ಇಂದಿನ ಕಾಲದಲ್ಲಿ ಯಾರಿಗಾದರೂ ಕಂಪ್ಯೂಟರ್ ಆಪರೇಟ್ ಮಾಡಲು ಬಾರದಿದ್ದರೆ ಅವರು ಅನಕ್ಷರಸ್ಥರಂತೆ ಕಾಣಬಹುದು. ಸರ್ಕಾರಿ ಕಚೇರಿಗಳಿಂದ ಹಿಡಿದು ಖಾಸಗಿ ವಲಯದವರೆಗೆ ಎಲ್ಲ ಕಾರ್ಯಪದ್ಧತಿಗಳು ಇಂದು ಡಿಜಿಟಲ್ ಆಗಿವೆ. ವಿದ್ಯಾರ್ಥಿಗಳು ಕಂಪ್ಯೂಟರ್ ಕೌಶಲ್ಯ ಗಳಿಸಿದರೆ ಮಾತ್ರ ಸ್ಪರ್ಧಾತ್ಮಕ ಯುಗದಲ್ಲಿ ತಮ್ಮ ಸ್ಥಾನವನ್ನು ಸ್ಥಿರಗೊಳಿಸಬಹುದು. ಈ ರೀತಿಯ ತರಬೇತಿ ತರಗತಿಗಳು ಗ್ರಾಮೀಣ ವಿದ್ಯಾರ್ಥಿಗಳಿಗೆ ಹೊಸ ದಾರಿಯನ್ನು ತೆರೆದು ಕೊಡುತ್ತವೆ ಎಂದು ಹೇಳಿದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ರಾಜ್ಯಶಾಸ್ತ್ರ ಉಪನ್ಯಾಸಕ ಮತ್ತು ತರಬೇತಿಕಾರರಾದ ತಿಪ್ಪೇಸ್ವಾಮಿ ಎಂ.ಕೆ. ಮಾತನಾಡಿ, ಡಿಜಿಟಲ್ ಯುಗಕ್ಕೆ ಹೊಂದಿಕೊಳ್ಳಲು ಕಂಪ್ಯೂಟರ್ ಶಿಕ್ಷಣ ಅತ್ಯವಶ್ಯಕ. ಪದವಿಯ ಜತೆಗೆ ಕಂಪ್ಯೂಟರ್ ಕೌಶಲ್ಯವೂ ಇಂದಿನ ಉದ್ಯೋಗ ಕ್ಷೇತ್ರದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದರು.
ಐಕ್ಯೂಎಸಿ ಸಂಯೋಜಕ ಡಾ.ಸರಸ್ವತಿ ಕೆ.ಬಿ. ಮಾತನಾಡಿ, ಕಾಲೇಜು ನೀಡುತ್ತಿರುವ ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಿ. ಆಸಕ್ತಿಯಿಂದ ಕಲಿಯಿರಿ, ತಾಂತ್ರಿಕ ಜ್ಞಾನವೇ ನಿಮ್ಮ ಭವಿಷ್ಯ ನಿರ್ಮಾಣದ ಮೂಲವಾಗಲಿದೆ ಎಂದು ಸಲಹೆ ನೀಡಿದರು.
ದೈಹಿಕ ಶಿಕ್ಷಣ ನಿರ್ದೇಶಕ ಡಾ. ಯೋಗೀಶ್ ಬಿ. ಮಾತನಾಡಿ, ಇದು ಅರ್ಥಪೂರ್ಣ ಮತ್ತು ಪ್ರಯೋಜನಕಾರಿ ಕಾರ್ಯಕ್ರಮ. ಮನಸ್ಸಿದ್ದರೆ ಮಾರ್ಗ ಸಿಗುತ್ತದೆ ಎಂಬ ಮಾತಿನಂತೆ, ವಿದ್ಯಾರ್ಥಿಗಳು ಮನಸ್ಸಿಟ್ಟು ಈ ತರಬೇತಿಯನ್ನು ಸಂಪೂರ್ಣವಾಗಿ ಉಪಯೋಗಿಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉದ್ಯೋಗಾವಕಾಶಗಳ ಕೋಶದ ಸಂಯೋಜಕಿ ಲಕ್ಷ್ಮೀ ಎಸ್., ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ. ಜಗದೀಶ್, ಕಾಲೇಜಿನ ಹಳೆಯ ವಿದ್ಯಾರ್ಥಿ ಭಾರತಿ, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.



























