
ಬೀದರ್: ಮೇ.9:ಗ್ರಾಮ ಮಟ್ಟದಲ್ಲಿ ಬಾಲ್ಯ ವಿವಾಹದಂತಹ ಅನಿಷ್ಠ ಪದ್ಧತಿಗಳನ್ನು ತಡೆಗಟ್ಟಲು ಪಂಚಾಯತ್ ಕಟಿಬದ್ಧವಾಗಿದೆ. ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ತಳಮಟ್ಟದಲ್ಲಿ ಜನರೊಂದಿಗೆ ನೇರ ಸಂಪರ್ಕ ಹೊಂದಿರುವುದರಿಂದ, ಈ ಪಿಡುಗಿನ ವಿರುದ್ಧದ ಹೋರಾಟದಲ್ಲಿ ನಿಮ್ಮ ಪಾತ್ರ ಬಹಳ ದೊಡ್ಡದು.” ಎಂದು ಕಾಡವಾದ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಿಜಯಕುಮಾರ ಹೇಳಿದರು.
ಅವರು ಶುಕ್ರವಾರ ಕಾಡವಾದ ಗ್ರಾಮ ಪಂಚಾಯತ್ ವತಿಯಿಂದ ಕಾಡವಾದನಲ್ಲಿ ಹಮ್ಮಿಕೊಂಡಿದ್ದ ಬಾಲ್ಯ ವಿವಾಹ ತಡೆ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಇಂದಿನ ಆಧುನಿಕ ಯುಗದಲ್ಲೂ ಬಾಲ್ಯ ವಿವಾಹ ಎಂಬ ಪಿಡುಗು ಸಮಾಜವನ್ನು ಕಾಡುತ್ತಿರುವುದು ದುರದೃಷ್ಟಕರ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕಾಡುವಾದ್ ಗ್ರಾಮ ಪಂಚಾಯತ್ ವತಿಯಿಂದ “ಬಾಲ್ಯ ವಿವಾಹ ತಡೆ ಅರಿವು ಕಾರ್ಯಕ್ರಮ”ವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿ ಸದಸ್ಯ ಮನ್ಮತ್ ಮೀನಕೇರಾ ಮಾತನಾಡಿ, ?”ಮಕ್ಕಳ ಹಕ್ಕುಗಳನ್ನು ರಕ್ಷಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಬಾಲ್ಯ ವಿವಾಹವು ಕಾನೂನುಬಾಹಿರ ಮಾತ್ರವಲ್ಲದೆ, ಒಂದು ಮಗುವಿನ ಶಿಕ್ಷಣ ಮತ್ತು ಆರೋಗ್ಯದ ಹಕ್ಕನ್ನು ಕಸಿದುಕೊಳ್ಳುತ್ತದೆ. ಸಮಾಜದಲ್ಲಿ ಇಂತಹ ಘಟನೆಗಳು ಕಂಡುಬಂದಲ್ಲಿ ತಕ್ಷಣವೇ 1098 ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಬೇಕು. ಪ್ರತಿಯೊಬ್ಬ ನಾಗರಿಕನೂ ಜಾಗೃತರಾದಾಗ ಮಾತ್ರ ಈ ಪಿಡುಗನ್ನು ಬೇರುಸಹಿತ ಕಿತ್ತೆಸೆಯಲು ಸಾಧ್ಯ.” ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಕಾರ್ಯದರ್ಶಿಗಳು, ಪಂಚಾಯತ್ ಸಿಬ್ಬಂದಿಗಳು , ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಅನೇಕರು ಇದ್ದರು.
























