
ಕಲಬುರಗಿ:ಮೇ.31:ಸರ್ಕಾರಿ ನೌಕರಿ ಪಡೆಯುವುದು, ದೀರ್ಘಕಾಲ ಸೇವೆ ಸಲ್ಲಿಸುವುದು ದೊಡ್ಡ ಸಾಧನೆಯಲ್ಲ. ಬದಲಿಗೆ ದೊರೆತ ಹುದ್ದೆಗೆ ಪ್ರಾಮಾಣಿಕತೆ, ನಿಷ್ಠೆ ಹಾಗೂ ಕರ್ತವ್ಯಬದ್ಧತೆಯಿಂದ ಸೇವೆ ಸಲ್ಲಿಸಿ, ನ್ಯಾಯ ಒದಗಿಸುವುದು ಮುಖ್ಯ. ಅರಣ್ಯ ಇಲಾಖೆಯಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ದಕ್ಷತೆ, ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿ, ಇಲಾಖೆ ಹಾಗೂ ಸರ್ಕಾರಿ ನೌಕರರಿಗೆ ಮಲ್ಲಿಕಾರ್ಜುನ ಜಮಾದಾರ ಮತ್ತು ದಾನಮ್ಮ ಅವರು ಮಾದರಿಯಾಗಿದ್ದಾರೆ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮನೀರ್ ಅಹಮ್ಮದ್ ಮಾರ್ಮಿಕವಾಗಿ ಹೇಳಿದರು.
ನಗರದ ಸಾರ್ವಜನಿಕ ಉದ್ಯಾನವನದಲ್ಲಿರುವ ‘ಕಿರು ಮೃಗಾಲಯ’ದಲ್ಲಿ ಅರಣ್ಯ ಇಲಾಖೆ ಮತ್ತು ಕಿರು ಮೃಗಾಲಯದ ವತಿಯಿಂದ ವಯೋನಿವೃತ್ತಿ ಹೊಂದಿರುವ ಡಿಆರ್‍ಎಫ್‍ಓ ಮಲ್ಲಿಕಾರ್ಜುನ ಜಮಾದಾರ ಮತ್ತು ಅರಣ್ಯ ವೀಕ್ಷಕಿ ದಾನಮ್ಮ ಅವರಿಗೆ ಶನಿವಾರ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭವನ್ನು ಉದ್ಘಾಟಿಸಿ, ಅವರು ಮಾತನಾಡಿದರು.
ಸತ್ಕಾರ ಸ್ವೀಕರಿಸಿ ಮಾತನಾಡಿದ ನಿವೃತ್ತ ಡಿಆರ್‍ಎಫ್‍ಓ ಮಲ್ಲಿಕಾರ್ಜುನ ಜಮಾದಾರ, ಯಾವುದೇ ಸೇವೆಯಿರಲಿ, ಅದರಲ್ಲಿ ಭಕ್ತಿ, ಶೃದ್ಧೆಯಿರಬೇಕು. ಇಡೀ ನನ್ನ ವೃತ್ತಿ ಜೀವನದ ಬದುಕಿನಲ್ಲಿ ಎಂದಿಗೂ ಕೂಡಾ ಸೇವೆಯಿಂದ ವಿಮುಖವಾಗಿಲ್ಲ. ನನ್ನ ಇಲಾಖೆ, ವೃತ್ತಿಯಲ್ಲಿಯೇ ದೇವರನ್ನು ಕಂಡಿದ್ದು, ನನಗೆ ಸೇವೆಯೂ ಸಂಪೂರ್ಣವಾಗಿ ತೃಪ್ತಿ ತಂದಿದೆ. ಎಲ್ಲರಿಗೂ ‘ಆಕ್ಸಿಜನ್’ ನೀಡುವ ಅರಣ್ಯ ಇಲಾಖೆ ನಮ್ಮದಾಗಿದ್ದು, ಸಾರ್ವಜನಿಕರು ಇಲಾಖೆಯ ಸಮಾಜಮುಖಿ ಕಾರ್ಯಗಳಿಗೆ ಕೈಜೋಡಿಸಿ, ‘ಹಸಿರು ಪರಿಸರ’ ಮಾಡಬೇಕಾಗಿದೆ ಎಂದರು.
ಇಲಾಖೆಯ ನಿವೃತ್ತ ಪಶುವೈದ್ಯ ಡಾ.ಶಿವಕುಮಾರ ಜಂಬಲದಿನ್ನಿ, ಆರ್.ಎಫ್.ಓ ನಾಗೇಶ್ ಎಸ್.ಮೋಘಾ, ಡಿಆರ್‍ಎಫ್‍ಓ ಖಾಲೀದ್ ಪಟೇಲ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಇಲಾಖಾ ಕಚೇರಿ ಪತ್ರಾಂಕಿತ ವ್ಯವಸ್ಥಾಪಕ ಮಹಾಂತೇಶ್ ಜಮಾದಾರ, ಡಿಆರ್‍ಎಫ್‍ಓ ಜಟ್ಟೆಪ್ಪ ನಾವಿ, ಉಪನ್ಯಾಸಕ ಹಾಗೂ ಸಮಾಜ ಸೇವಕ ಎಚ್.ಬಿ.ಪಾಟೀಲ, ನಿವೃತ್ತ ಕೃಷಿ ಅಧಿಕಾರಿ ಶಿವಯೋಗೆಪ್ಪಾ ಎಸ್.ಬಿರಾದಾರ, ಆರ್‍ಎಫ್‍ಓ ರಮೇಶ್ ಗಾಣಿಗೇರ್, ಕಿರು ಮೃಗಾಲಯದ ಅರಣ್ಯ ರಕ್ಷಕ ಕಾಂತಪ್ಪ ಪೂಜಾರಿ, ಪ್ರಾಣಿ ಪಾಲಕ ದಯಾನಂದ ಶಿರವಾಳ, ಅರಣ್ಯ ವೀಕ್ಷಕಿ ಶಿವಲೀಲಾ ತೆಗನೂರ್, ಪ್ರಮುಖರಾದ ಸಾವಿತ್ರಿ ಎಂ.ಜಮಾದಾರ, ಭುವನೇಶ್ವರಿ, ಶರಣಕುಮಾರ, ಮಹೇಶ್ವರ, ಜಗನಾಥ, ಚಂದ್ರಕಲಾ ಜಮಾದಾರ ಸೇರಿದಂತೆ ಅನೇಕರು ಭಾಗವಹಿಸಿದ್ದರು.