ಪರಮ ಪೂಜ್ಯ ಸಿದ್ಧೇಶ್ವರ ಮಹಾಸ್ವಾಮಿಗಳ ಸ್ಮರಣೋತ್ಸವ

ಬೀದರ:ಜ.5:ನಗರದ ಜೀನಿಯಸ್ ಸ್ಪರ್ಧಾ ಅಕಾಡೆಮಿ ಹಾಗೂ ಪೂಜ್ಯ ಶ್ರೀ ಸಿದ್ಧೇಶ್ವರ ಶ್ರೀಗಳ ಬಳಗದ ವತಿಯಿಂದ ಪರಮ ಪೂಜ್ಯ ಶ್ರೀ ಸಿದ್ಧೇಶ್ವರ ಮಹಾಸ್ವಾಮಿಗಳ ಸ್ಮರಣೋತ್ಸವ ಕಾರ್ಯಕ್ರಮವು ಜೀನಿಯಸ್ ಸ್ಪರ್ಧಾ ಅಕಾಡೆಮಿಯಲ್ಲಿ ಭಕ್ತಿಭಾವದಿಂದ ಜರುಗಿತು.

ಕಾರ್ಯಕ್ರಮದಲ್ಲಿ ಶಿಕ್ಷಣ ಸಂಪನ್ಮೂಲ ವ್ಯಕ್ತಿಗಳಾದ ಪ್ರಕಾಶ ದೇಶಮುಖ ಅವರು ಮುಖ್ಯ ಅತಿಥಿಗಳಾಗಿ ಮಾತನಾಡಿ, ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮಿಜೀ ಶ್ರೇಷ್ಠ ಆಧ್ಯಾತ್ಮಿಕ ಚಿಂತಕರು ಹಾಗೂ ಶ್ರೇಷ್ಠ ಪ್ರವಚನಕಾರರಾಗಿದ್ದು, ಅವರ ನಡೆ-ನುಡಿ ಯುವಜನಾಂಗಕ್ಕೆ ಜ್ಞಾನದ ಸೂರ್ಯನಂತಿದೆ ಎಂದು ಹೇಳಿದರು. ಜಾಗತೀಕರಣ ಮತ್ತು ತಾಂತ್ರಿಕ ಬದುಕಿನ ನಡುವೆ ಅವರ ಮಾರ್ಗದರ್ಶನ ಇಂದಿನ ಯುವಕರಿಗೆ ಅತ್ಯಂತ ಆದರ್ಶವಾಗಿದೆ ಎಂದು ಅಭಿಪ್ರಾಯಪಟ್ಟರು.

ಕರ್ನಾಟಕ ವಚನ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಕೋಶಾಧ್ಯಕ್ಷ ಪೆÇ್ರ. ಉಮಾಕಾಂತ ಮೀಸೆ ಅವರು ಮಾತನಾಡಿ, 21ನೇ ಶತಮಾನ ಕಂಡ ಮಹಾ ಸಂತ ಶ್ರೀ ಸಿದ್ಧೇಶ್ವರ ಸ್ವಾಮಿಗಳಾಗಿದ್ದು, ಸರ್ವ ಧರ್ಮಗಳ ಸಾರವನ್ನು ಅರಿತ ಬಹುಭಾಷಾ ಪಂಡಿತರೂ, ನಡೆದಾಡುವ ವಿಶ್ವಕೋಶವಾಗಿದ್ದರು ಎಂದರು. ಇದೇ ಸಂದರ್ಭದಲ್ಲಿ ಅವರ ಕುರಿತು “ದಿವ್ಯತೇಜ” ಎಂಬ ಕವನ ವಾಚನ ಮಾಡಲಾಯಿತು.

ಪೂಜ್ಯ ಶ್ರೀ ಸಿದ್ಧೇಶ್ವರ ಮಹಾಸ್ವಾಮಿಗಳ ಬಳಗದ ಪ್ರಮುಖ ರಮೇಶ ಚಿಲ್ಲರ್ಗಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಶ್ರೀ ಸಿದ್ಧೇಶ್ವರ ಸ್ವಾಮಿಜೀ ಒಬ್ಬರು ನಡೆದಾಡುವ ದೇವರಾಗಿದ್ದು, ಅವರ ಮಾರ್ಗದಲ್ಲಿ ಮಕ್ಕಳು ಮತ್ತು ಯುವಕರು ನಡೆದರೆ ವಿಶ್ವವೇ ಒಂದು ಕುಟುಂಬವಾಗುತ್ತದೆ ಎಂದು ಹೇಳಿದರು.

ಡಿ.ಸಿ.ಸಿ. ಬ್ಯಾಂಕ್, ಹುಡಗಿ ಶಾಖೆಯ ವ್ಯವಸ್ಥಾಪಕಿ ಉಮಾದೇವಿ ಚಿಲ್ಲರ್ಗಿ ಅವರು ಶ್ರೀ ಸಿದ್ಧೇಶ್ವರ ಅಪ್ಪನವರ ಜೀವನ ಮೌಲ್ಯಗಳು ಎಲ್ಲರಿಗೂ ದಾರಿದೀಪವಾಗಿವೆ ಎಂದು ತಿಳಿಸಿದರು. ಇನ್ನೋರ್ವ ಅತಿಥಿ ವೈಜಿನಾಥ ಪಾಟೀಲ್ ಅವರು, ಪೂಜ್ಯರಿಂದ ಪಡೆದ ಶಿಸ್ತು ಮತ್ತು ಸಮಯ ಪ್ರಜ್ಞೆ ತಮ್ಮ ಬದುಕಿಗೆ ಮಾರ್ಗದರ್ಶನವಾಗಿದೆ ಎಂದು ಹೇಳಿದರು.

ಜೀನಿಯಸ್ ಸ್ಪರ್ಧಾ ಅಕಾಡೆಮಿಯ ಅಧ್ಯಕ್ಷ ಹಾಗೂ ನ್ಯಾಯವಾದಿ ಮನೋಜಕುಮಾರ ಬುಕ್ಕಾ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಾರಂಭದಲ್ಲಿ ಮಕ್ಕಳಿಂದ ಪ್ರಾರ್ಥನೆ ನಡೆಯಿತು. ನಂತರ ಪೂಜ್ಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಲಾಯಿತು.

ಮಹಾದೇವಿ ಬುಕ್ಕಾ ಅವರು ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು. ಕುಮಾರಿ ಚೈತನ್ಯ ರಮೇಶ ವಂದಿಸಿದರು. ಈ ಸಂದರ್ಭದಲ್ಲಿ ಉಮಾಕಾಂತ ಅಳ್ಳೆ, ವಿಜಯಕುಮಾರ ಭಾಲ್ಕೆ, ಸಂತೋಷ ಸ್ವಾಮಿ, ಧನರಾಜ ಭುಯ್ಯಾ ಸೇರಿದಂತೆ ಮಕ್ಕಳು, ಶರಣ-ಶರಣಿಯರು ಹಾಗೂ ಗಣ್ಯರು ಉಪಸ್ಥಿತರಿದ್ದರು.