
ಬೆಂಗಳೂರು, ಅ.13-ಖ್ಯಾತ ಹಾಸ್ಯ ನಟ, ರಂಗಭೂಮಿ ಕಲಾವಿದ ರಾಜತಾಳಿಕೋಟೆ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಇಂದು ನಿಧನರಾಗಿದ್ದಾರೆ. ಅವರಿಗೆ 59 ವರ್ಷ ವಯಸ್ಸಾಗಿತ್ತು.
ಶೈನ್ ಶೆಟ್ಟಿ ಅಭಿನಯದ ಹೊಸ ಚಿತ್ರದಲ್ಲಿ ಕಳೆದ ಎರಡು ದಿನಗಳಿಂದ ಉಡುಪಿಯಲ್ಲಿ ರಾಜು ತಾಳಿಕೋಟೆ ಶೂಟಿಂಗ್ನಲ್ಲಿ ಭಾಗವಹಿಸಿದ್ದ ವೇಳೆ ನಿನ್ನೆ ರಾತ್ರಿ 12 ಗಂಟೆ ಹೊತ್ತಿಗೆ ರಾಜು ತಾಳಿಕೋಟೆ ಅವರಿಗೆ ಎದೆನೋವು ಕಾಣಿಸಿಕೊಂಡಿದೆ.
ತಕ್ಷಣ ಅವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗಿದೆ ಇಂದು ಸಂಜೆ 5.30ರ ಸುಮಾರಿಗೆ ಅವರು ಕೊನೆಯುಸಿರೆಳೆದಿದ್ದಾರೆ.
ವೃತ್ತಿ ರಂಗಭೂಮಿ ಕಲಾವಿದರಾಗಿದ್ದ ರಾಜು ತಾಳಿಕೋಟೆ ನಿರ್ದೇಶಕ ಆನಂದ್ ಪಿ.ರಾಜು ಅವರ ‘ಹೆಂಡ್ತಿ ಅಂದ್ರೆ ಹೆಂಡ್ತಿ’ ಚಿತ್ರದಲ್ಲಿ ಅಭಿನಯಿಸುವ ಮೂಲಕ ಚಲಚಿತ್ರರಂಗಕ್ಕೂ ಕಾಲಿಟ್ಟರು.
ನಂತರ ಕೆಲ ಪಾತ್ರಗಳಲ್ಲಿ ಅಭಿನಯ ಮಾಡಿದ್ದರೂ ಹೆಚ್ಚಿನ ಯಶಸ್ಸು ಸಿಗಲಿಲ್ಲ. ಯೋಗರಾಜ್ ಭಟ್ ಅವರ ಮನಸಾರೆ ಚಿತ್ರದಿಂದ ತುಂಬಾ ಪ್ರಸಿದ್ಧಿ ಪಡೆದರು. ಮನಸಾರೆ ಬಳಿಕ ನವರಂಗಿ, ಪುನೀತ್ ರಾಜ್‍ಕುಮಾರ್ ಜೊತೆ ಜಾಕಿ ಸಿನಿಮಾ, ಸುಗ್ರೀವಾ, ಮೈನಾ ಹೀಗೆ 35ಕ್ಕೂ ಅಧಿಕ ಸಿನಿಮಾಗಳಲ್ಲಿ ಅವರು ಅಭಿನಯಿಸಿದ್ದಾರೆ.
ರಾಜು ತಾಳಿಕೋಟೆ ಅವರು ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಚಿಕ್ಕ ಸಿಂದಿಗಿ ಗ್ರಾಮದವರು. ಮೂಲ ಹೆಸರು ರಾಜೇಸಾಬ ಮುಕ್ತುಮಸಾಬ್ ತಾಳಿಕೋಟೆ. ಪ್ರಸ್ತುತ ತಾಳಿಕೋಟಿ ಗ್ರಾಮದಲ್ಲಿ ಕುಟಂಬದೊಡನೆ ವಾಸವಾಗಿ ದ್ರಾಕ್ಷಿ ಕೃಷಿಯಲ್ಲಿ ತೊಡಗಿದ್ದರು. ಸದ್ಯ ಅವರು ಧಾರವಾಡ ರಂಗಾಯಣ ನಿರ್ದೇಶಕರೂ ಆಗಿದ್ದರು.
































