
ಕೋಲಾರ,ಜೂ.೯- ಯುವಶಕ್ತಿಗೆ ಶಿಕ್ಷಣದ ಜತೆಗೆ ಕೌಶಲ್ಯ ಕಲೆ ಮತ್ತು ಸಂವಹನ ನೈಪುಣ್ಯತೆಯನ್ನು ಕಲಿಸಲು ಶಾಲಾ-ಕಾಲೇಜುಗಳು ಮುಂದಾಗಬೇಕೆಂದು ಕರವೇ ಜಿಲ್ಲಾಧ್ಯಕ್ಷ ಮೇಡಿಹಾಳ ಎಂ.ಕೆ.ರಾಘವೇಂದ್ರ ಹೇಳಿದರು.
ನಗರದ ಅಂತರಗಂಗೆ ರಸ್ತೆಯಲ್ಲಿ ರುವ ಸರ್ಕಾರಿ ನೂತನ ಪ್ರೌಢಶಾಲೆ ಯಲ್ಲಿ ಕರವೇ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣ ಗೌಡರ ೬೦ನೇ ಜನ್ಮದಿನದ ಅಂಗವಾಗಿ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕಗಳನ್ನು ವಿತರಿಸಿ ಮಾತನಾಡಿ, ನವ ಪದವೀಧರರು ರ್‍ಯಾಂಕ್ ಪಡೆದುಕೊಂಡು ಉತ್ತಮ ಅಂಕಗಳೊಂದಿಗೆ ಕಾಲೇಜಿನಿಂದ ಹೊರಬರುತ್ತಿದ್ದರೂ ಸಾಮಾನ್ಯ ಜ್ಞಾನದ ಕೊರತೆಯಿಂದಾಗಿ ಸಂದರ್ಶನದಲ್ಲಿ ಮುಗ್ಗರಿಸುತ್ತಿರುವುದರಿಂದಾಗಿ ಶಿಕ್ಷಣದ ಜತೆಗೆ ಕೌಶಲ್ಯವನ್ನು ಕಲಿಸಬೇಕೆಂದರು.
ಉತ್ತರ ಭಾರತದ ಉದ್ಯೋಗಿಗಳು ಸ್ಥಳೀಯ ಕಾರ್ಖಾನೆಗಳಲ್ಲಿ ತುಂಬಿ ತುಳುಕುತ್ತಿದ್ದು ಹೀಗಾಗಿ ಸ್ಥಳೀಯರಿಗೆ ಆದ್ಯತೆ ಇಲ್ಲವಾಗಿದೆ. ಹೀಗಾಗಿ ಕೋಲಾರ ಜಿಲ್ಲೆಯ ಕೈಗಾರಿಕೋದ್ಯಮ ಉತ್ತರ ಭಾರತದ ಮಂದಿಯ ಮೇಲೆ ಅವಲಂಭನೆ ಆಗಿದೆ. ಪ್ರಸ್ತುತ ಉತ್ತರ ಭಾರತದಲ್ಲೂ ಬೃಹತ್ ಕೈಗಾರಿಕೆಗಳು ಸ್ಥಾಪನೆ ಆಗುತ್ತಿರುವುದರಿಂದಾಗಿ ಕಾರ್ಮಿಕರು ಕ್ರಮೇಣ ತವರಿಗೆ ಮರಳುವುದರಿಂದಾಗಿ ಸ್ಥಳೀಯವಾಗಿ ಕಾರ್ಖಾನೆಗಳು ಮುಚ್ಚುವ ಸ್ಥಿತಿ ಬರುತ್ತದೆ ಎಂದು ಆತಂಕ ವ್ಯಕ್ತಪಡಿಸಿದ ರಾವೇಂದ್ರ ಅವರು ಇನ್ನಾದರೂ ಉದ್ಯಮಿಗಳು ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಸ್ಥಳೀಯ ಪ್ರತಿಭೆಗಳಿಗೆ ಉದ್ಯೋಗ ದೊರಕಿಸುವ ನಿಟ್ಟಿನಲ್ಲಿ ಮುಂದಾಗಬೇಕೆಂದು ಆಗ್ರಹಿಸಿದರು.
ನೆಲ,ಜಲ,ನಾಡು,ನುಡಿ ಸಮಸ್ಯೆಗಳ ಪರವಾಗಿ ೪೦ ವರ್ಷದಿಂದ ಹೋರಾಟ ಮಾಡುತ್ತಿರುವ ಕರವೇ ಸಾಮಾಜಿಕ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡಿದ್ದು ವಿದ್ಯಾರ್ಥಿಗಳಿಗೆ ಸಮವಸ್ತ್ರ,ಶೂ,ಸಾಕ್ಸ್, ನೋಟ್ ಪುಸ್ತಕಗಳನ್ನು ವಿತರಣೆ ಮಾಡುತ್ತಿದೆ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪ್ರಪಂಚವನ್ನು ಎದುರಿಸಲು ಓದಿನ ಜತೆಗೆ ಕ್ರೀಡೆಗಳಲ್ಲೂ ಭಾಗವಹಿಸುವ ಮೂಲಕ ಮನಸಿನ ಸಮತೋಲನವನ್ನು ಕಾಪಾಡಿಕೊಳ್ಳಬೇಕು. ಸಿಎಸ್ಸಾರ್ ನಿಧಿಯನ್ನು ಬಳಸಿಕೊಂಡು ಸರ್ಕಾರಿ ಶಾಲೆಗಳಲ್ಲಿ ಮೂಲ ಸೌಕರ್ಯ ಗಳನ್ನು ಒದಗಿಸಲು ಜಿಲ್ಲಾಡಳಿತ ಮುಂದಾಗಬೇಕು. ರಾಜ್ಯದ ಪಠ್ಯ ಪುಸ್ತಕಕ್ಕೆ ಅನುಗುಣವಾಗಿ ನೀಟ್ ಪ್ರಶ್ನೆಪತ್ರಿಕೆ ರೂಪಿತವಾಗಬೇಕು ಎಂದು ರಾಘವೇಂದ್ರ ಒತ್ತಾಯಿಸಿದರು.
ಉಪ ಪ್ರಾಂಶುಪಾಲೆ ಕೆ.ಎಸ್. ಸುನಂದಮ್ಮ, ಕರವೇ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುನಿರಾಜು, ಕಾರ್ಯ ದರ್ಶಿ ನವೀನ್, ಕಾರ್ಮಿಕ ಘಟಕದ ಅಧ್ಯಕ್ಷ ಡಿ.ವಿ.ಮಂಜುನಾಥಗೌಡ, ಮುಖಂಡರಾದ ರಾಮಣ್ಣ,ಭದ್ರಮ್ಮ, ರೈತ ಘಟಕದ ಉಪಾಧ್ಯಕ್ಷ ಮಂಜುನಾಥಗೌಡ, ಗಣೇಶ್,ಶಿವಕುಮಾರ್, ಆನಂದ್, ಯಶವಂತ್ ಇದ್ದರು.
































