ಆಟೋದಲ್ಲಿ ಹೋಗುವಾಗ 2.85 ಲಕ್ಷ ರೂ.ಮೌಲ್ಯದ ನಗನಾಣ್ಯ ಕಳವು

ಕಲಬುರಗಿ,ಸೆ.24-ನಗರದ ಆಳಂದ ಚೆಕ್‍ಪೋಸ್ಟ್‍ದಿಂದ ಬಸ್ ನಿಲ್ದಾಣಕ್ಕೆ ಆಟೋದಲ್ಲಿ ಹೋಗುತ್ತಿದ್ದ ಮಹಿಳೆಯೊಬ್ಬರ ಬ್ಯಾಗ್‍ನಲ್ಲಿ ಇದ್ದ 2.85 ಲಕ್ಷ ರೂ.ಮೌಲ್ಯದ ನಗನಾಣ್ಯವನ್ನು ಇಬ್ಬರು ಅಪರಿಚಿತ ಮಹಿಳೆಯರು ಕಳವು ಮಾಡಿಕೊಂಡು ಹೋಗಿರುವ ಘಟನೆ ನಡೆದಿದೆ.
ಆಳಂದ ಚೆಕ್‍ಪೋಸ್ಟ್ ಏರಿಯಾ ನಿವಾಸಿ ವಿಜಯಲಕ್ಷ್ಮಿ ಗುರುರಾಜ ಬಿರಾದಾರ ಎಂಬುವವರು ದಸರಾ ಹಬ್ಬಕ್ಕೆಂದು ಮಕ್ಕಳನ್ನು ಕರೆದುಕೊಂಡು ಹಸರಗುಂಡಗಿ ಗ್ರಾಮಕ್ಕೆ ಹೋಗಲೆಂದು ಆಳಂದ ಚೆಕ್ ಪೋಸ್ಟ್ ಹತ್ತಿರ ಆಟೋಗಾಗಿ ಕಾಯುತ್ತ ನಿಂತಿದ್ದಾರೆ. ಈ ವೇಳೆ ಅಲ್ಲಿಗೆ ಬಂದ ಆಟೋದಲ್ಲಿ ಕುಳಿತಿದ್ದಾರೆ. ಇದೇ ವೇಳೆ ಇಬ್ಬರು ಅಪರಿಚಿತ ಮಹಿಳೆಯರು ಸಹ ಆಟೋ ಹತ್ತಿದ್ದು, ವಿಜಯಲಕ್ಷ್ಮಿ ಅವರ ಮೈಮೇಲೆ ಬಟ್ಟೆ ಹಾಕಿದ ಹಾಗೆ ಮಾಡಿ ಅವರ ಗಮನ ಬೇರೆಡೆ ಸೆಳೆದು ಬ್ಯಾಗಿನಲ್ಲಿದ್ದ 2 ಲಕ್ಷ ರೂ.ನಗದು ಮತ್ತು 85 ಸಾವಿರ ರೂ.ಮೌಲ್ಯದ ಚಿನ್ನಾಭರಣ ಕಳವು ಮಾಡಿಕೊಂಡು ಮಿರ್ಚಿ ಗೋದಾಮ್ ಹತ್ತಿರ ಇಳಿದು ಹೋಗಿದ್ದಾರೆ. ವಿಜಯಲಕ್ಷ್ಮಿ ಅವರು ಬಸ್ ನಿಲ್ದಾಣಕ್ಕೆ ಹೋಗಿ ಬ್ಯಾಗ್ ಪರಿಶೀಲಿಸಿದಾಗ ಅದರಲ್ಲಿದ್ದ ಚಿನ್ನಾಭರಣ, ನಗದು ಹಣ ಕಳವಾಗಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಆರ್.ಜಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.