ಬೆಂಗಳೂರು, ಸೆ. ೨೭- ರಾಜಧಾನಿ ಬೆಂಗಳೂರಿನ ರಸ್ತೆಗುಂಡಿ ಸಮಸ್ಯೆಗಳನ್ನು ಆದಷ್ಟು ಶೀಘ್ರ ಸರಿಪಡಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಂದು ನಗರ ಪ್ರದಕ್ಷಿಣೆ ನಡೆಸಿ ಗುಂಡಿ ಮುಚ್ಚುವ ಕಾರ್ಯದ ಪ್ರಗತಿ ಪರಿಶೀಲಿಸಲಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಧಿಕಾರಿಗಳೊಂದಿಗೆ ಇಂದು ಮಧ್ಯಾಹ್ನ ೩ ಗಂಟೆ ನಂತರ ನಗರ ಪ್ರದಕ್ಷಿಣೆಗೆ ಹೊರಡಲಿದ್ದು, ನಗರದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ರಸ್ತೆಯ ಸ್ಥಿತಿಗತಿಗಳನ್ನು ವೀಕ್ಷಿಸುವರು.
ಮಳೆಯಿಂದ ಬೆಂಗಳೂರಿನ ರಸ್ತೆಗಳು ಹಾಳಾಗಿ ಗುಂಡಿ ಬಿದ್ದಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಕಳೆದ ವಾರ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳ ಸಭೆ ನಡೆಸಿ ರಸ್ತೆಗುಂಡಿ ಮುಚ್ಚದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಒಂದು ತಿಂಗಳಲ್ಲಿ ಬೆಂಗಳೂರಿನ ಎಲ್ಲಾ ರಸ್ತೆಗುಂಡಿಗಳನ್ನು ಮುಚ್ಚಲು ಗಡುವು ನೀಡಿದ್ದರು.
ಇಂದು ನಗರ ಪ್ರದಕ್ಷಿಣೆ ನಡೆಸಿ ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯ ಎಷ್ಟು ಪ್ರಗತಿಯಲ್ಲಿದೆ ಎಂಬುದನ್ನು ಮುಖ್ಯಮಂತ್ರಿಗಳು ಖುದ್ದು ಪರಿಶೀಲಿಸುವರು.




























