
ತುಮಕೂರು, ಡಿ. ೧೯- ಸಜ್ಜರು, ವಿದ್ಯಾವಂತರು ಆಗಿರುವ ಗೃಹ ಮಂತ್ರಿಗಳಾದ ಡಾ. ಜಿ. ಪರಮೇಶ್ವರ್ ಅವರನ್ನು ಈ ರಾಜ್ಯದ ಮುಖ್ಯಮಂತ್ರಿಗಳಾಗಿ ನೇಮಕ ಮಾಡುವಂತೆ ಕಾಂಗ್ರೆಸ್ ಪಕ್ಷದ ಮುಖಂಡರನ್ನು ಜಿಲ್ಲೆಯ ವಿವಿಧ ಮಠಾಧೀಶರು ಒತ್ತಾಯಿಸಿದರು.
ನಗರದ ಕೊಲ್ಲಾಪುರದಮ್ಮ ಸಮುದಾಯಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿವಿಧ ಮಠಾಧೀಶರು, ಎಂಟು ವರ್ಷಗಳ ಕಾಲ ಕೆಪಿಸಿಸಿ ಅಧ್ಯಕ್ಷರಾಗಿ ಎರಡು ಬಾರಿಯೂ ಪಕ್ಷವನ್ನು ಮುನ್ನಡೆಸಿ, ಒಮ್ಮೆ ಪೂರ್ಣ ಬಹುಮತದೊಂದಿಗೆ, ಮತ್ತೊಮ್ಮೆ ಜೆಡಿಎಸ್ ಪಕ್ಷದ ಸಹಕಾರದೊಂದಿಗೆ ಅಧಿಕಾರ ಹಿಡಿಯಲು ಕಾರಣಕರ್ತರಾಗಿದ್ದಾರೆ. ಅಲ್ಲದೆ ಮೂರು ಬಾರಿ ಗೃಹ ಸಚಿವರಾಗಿ, ವಿವಿಧ ಮಂತ್ರಿ ಪದವಿಗಳನ್ನು ಅತ್ಯಂತ ಜವಾಬ್ದಾರಿಯಿಂದ ನಿಭಾಯಿಸಿ, ಒಂದೇ ಒಂದು ಕಪ್ಪುಚುಕ್ಕೆ ಇಲ್ಲದಂತೆ ಕಾರ್ಯನಿರ್ವಹಿಸಿದ್ದಾರೆ. ಹಾಗಾಗಿ ಅವರನ್ನು ಪಕ್ಷದ ಹೈಕಮಾಂಡ್ ಮುಖ್ಯಮಂತ್ರಿಯಾಗಿ ಘೋಷಿಸಬೇಕು ಎಂಬುದು ಜಿಲ್ಲೆಯ ಎಲ್ಲಾ ಮಠಾಧೀಶರು, ಮುಖಂಡರು ಹಾಗೂ ಕಾರ್ಯಕರ್ತರ ಒತ್ತಾಯವಾಗಿದೆ ಎಂದರು.
ಗೃಹ ಮಂತ್ರಿಯಾಗಿರುವ ಡಾ. ಜಿ. ಪರಮೇಶ್ವರ್ ವಿದೇಶದಲ್ಲಿ ಕಲಿತರೂ ದೇಶ ಸೇವೆಗೆ ತಮ್ಮನ್ನು ತಾವು ಅರ್ಪಿಸಿಕೊಂಡಿದ್ದಾರೆ. ಸಿದ್ದಾರ್ಥ ಶಿಕ್ಷಣ ಸಂಸ್ಥೆಯ ಮೂಲಕ ಒಂದೇ ಸೂರಿನಡಿ ಎಲ್.ಕೆ.ಜಿ.ಯಿಂದ ಪದವಿ, ಮೆಡಿಕಲ್, ಇಂಜಿನಿಯರಿಂಗ್ ವರೆಗೆ ಶಿಕ್ಷಣ ನೀಡುತ್ತಾ, ಲಕ್ಷಾಂತರ ಜನರ ಬಾಳಿಗೆ ಬೆಳಕಾಗಿದ್ದಾರೆ. ಅಲ್ಲದೆ ಜಿಲ್ಲೆಯ ಅಭಿವೃದ್ದಿಗೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ತುಮಕೂರು ವಿಶ್ವವಿದ್ಯಾಲಯ ಸೇರಿದಂತೆ ಹಲವು ಯೋಜನೆಗಳ ಹಿಂದೆ ಡಾ. ಜಿ. ಪರಮೇಶ್ವರ್ ಅವರ ಶ್ರಮವಿದೆ. ದೂರದೃಷ್ಟಿಯುಳ್ಳ ಇಂತಹ ವ್ಯಕ್ತಿಗಳು ಮುಖ್ಯಮಂತ್ರಿಗಳಾದರೆ ರಾಜ್ಯ ಮತ್ತಷ್ಟು ಅಭಿವೃದ್ದಿ ಹೊಂದಲಿದೆ. ಹಾಗಾಗಿ ಪಕ್ಷದ ಹೈಕಮಾಂಡ್ ನಮ್ಮ ಒತ್ತಾಯ ಪೂರ್ವ ಮನವಿಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಮಠಾಧೀಶರು ತಿಳಿಸಿದರು.
ತುಮಕೂರು ಜಿಲ್ಲೆ ರಾಜ್ಯದ ೧೭ಕ್ಕೂ ಹೆಚ್ಚು ಜಿಲ್ಲೆಗಳಿಗೆ ರಹದಾರಿ ಕಲ್ಪಿಸಿದೆ. ಪ್ರಮುಖ ಕೈಗಾರಿಕಾ ಹಬ್ ಆಗಿ ಪರಿವರ್ತನೆಯಾಗುತ್ತಿದೆ. ಅಲ್ಲದೆ ಮೆಟ್ರೋ ಸೇರಿದಂತೆ ವಿವಿಧ ಸಂಪರ್ಕ ಯೋಜನೆಗಳು ವಿಸ್ತಾರಗೊಳ್ಳುವ ಹಂತದಲ್ಲಿವೆ. ಈ ವೇಳೆ ತುಮಕೂರು ಜಿಲ್ಲೆಗೆ ಮುಖ್ಯಮಂತ್ರಿ ಸ್ಥಾನ ದೊರೆತರೆ ಜಿಲ್ಲೆ ಮತ್ತಷ್ಟು ಅಭಿವೃದ್ದಿಯಾಗಲಿದೆ. ಮೈಸೂರು, ಶಿವಮೊಗ್ಗ ಹಾಸನ ಇವುಗಳು ಮುಖ್ಯಮಂತ್ರಿಗಳ ಕ್ಷೇತ್ರ ಎಂಬ ಕಾರಣಕ್ಕೆ ಎಲ್ಲಾ ರೀತಿಯಿಂದ ಅಭಿವೃದ್ದಿಯಾಗಿವೆ. ತುಮಕೂರು ಜಿಲ್ಲೆಗೆ ಮುಖ್ಯಮಂತ್ರಿ ಸ್ಥಾನ ದೊರೆತರೆ ಅಭಿವೃದ್ದಿಯ ವೇಗ ಮತ್ತಷ್ಟು ದ್ವಿಗುಣಗೊಳ್ಳಲಿದೆ. ಹಾಗಾಗಿ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ನಮ್ಮ ಕೋರಿಕೆಯನ್ನು ಮನ್ನಿಸಿ, ಡಾ. ಜಿ. ಪರಮೇಶ್ವರ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕು. ಈ ಸಂಬಂಧ ಅಗತ್ಯ ಬಿದ್ದರೆ ಜಿಲ್ಲೆಯ ಎಲ್ಲಾ ಸ್ವಾಮೀಜಿಗಳು, ಎಐಸಿಸಿ ಪ್ರಮುಖರನ್ನು ಭೇಟಿಯಾಗಿ ಮನವರಿಕೆ ಮಾಡಿಕೊಡಲು ಸಹ ಹಿಂಜರಿಯುವುದಿಲ್ಲ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಿದ್ದರಬೆಟ್ಟದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಕುಂಚಿಟಿಗ ಮಹಾ ಸಂಸ್ಥಾನ ಮಠದ ಡಾ. ಶ್ರೀ ಹನುಮಂತನಾಥ ಸ್ವಾಮೀಜಿ, ಬೆಳ್ಳಾವಿಯ ಕಾರದೇಶ್ವರ ಮಠದ ಶ್ರೀ ಕಾರದ ವೀರಬಸವ ಸ್ವಾಮೀಜಿ, ತಿಪಟೂರಿನ ಷಡಕ್ಷರ ಮಠದ ಶ್ರೀ ಷಡಕ್ಷರ ಮುನಿ ಸ್ವಾಮೀಜಿ, ಅರೆಶಂಕರಮಠದ ಶ್ರೀ ಸಿದ್ದರಾಮ ಚೈತನ್ಯ ಸ್ವಾಮೀಜಿ, ವಿಶ್ವಕರ್ಮ ಮಠದ ಶ್ರೀ ನೀಲಕಂಠ ಸ್ವಾಮೀಜಿ, ರುದ್ರಮುನಿ ಸ್ವಾಮೀಜಿ, ಶ್ರೀ ಮೃತ್ಯುಂಜಯ ಸ್ವಾಮೀಜಿ, ಬಿಂದುಶೇಖರ ಓಡೆಯರ್, ಶ್ರೀ ವಿದ್ಯಾವಿಭವ ಸ್ವಾಮೀಜಿ ಸೇರಿದಂತೆ ೨೫ಕ್ಕೂ ಹೆಚ್ಚು ಸ್ವಾಮಿಜಿಗಳು ಉಪಸ್ಥಿತರಿದ್ದರು.




























